ಭಾರತ ವಿಶ್ವನಾಯಕ ಪಟ್ಟಕ್ಕೇರಲು ಇಡೀ ದೇಶದ ಜನ ಒಟ್ಟಾಗಿ ನಡೆಯುವ ಅಗತ್ಯ ಇಂದಿನದಾಗಿದ್ದು, ತ್ರಿವರ್ಣ ಧ್ವಜ ವಿಶ್ವದಲ್ಲಿ ರಾರಾಜಿಸುವಂತಾಬೇಕಲ್ಲದೆ, ಭಾರತಕ್ಕೆ ಧಕ್ಕೆ ತರುವ ವಿದೇಶಿಗರ ಸಂಚಿನ ಬಗೆಗೆ ಎಲ್ಲರೂ ಎಚ್ಚರವಾಗಿರೋಣ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
ಹಾನಗಲ್ಲ: ಭಾರತ ವಿಶ್ವನಾಯಕ ಪಟ್ಟಕ್ಕೇರಲು ಇಡೀ ದೇಶದ ಜನ ಒಟ್ಟಾಗಿ ನಡೆಯುವ ಅಗತ್ಯ ಇಂದಿನದಾಗಿದ್ದು, ತ್ರಿವರ್ಣ ಧ್ವಜ ವಿಶ್ವದಲ್ಲಿ ರಾರಾಜಿಸುವಂತಾಬೇಕಲ್ಲದೆ, ಭಾರತಕ್ಕೆ ಧಕ್ಕೆ ತರುವ ವಿದೇಶಿಗರ ಸಂಚಿನ ಬಗೆಗೆ ಎಲ್ಲರೂ ಎಚ್ಚರವಾಗಿರೋಣ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು. ಸೋಮವಾರ ಹಾನಗಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ 77ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಭಾರತದ ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಂತಹ ದೇಶದ ಹಿತಕ್ಕಾಗಿ ರಚನೆಗೊಂಡ ಸಂವಿಧಾನವನ್ನು ನಾವೆಲ್ಲ ಗೌರವಿಸೋಣ. ಈ ದೇಶದಲ್ಲಿ ಏಕತೆ ಸೌಹಾರ್ದತೆ ನೆಲೆಸಲು ಶ್ರಮಿಸೋಣ. ಒಂದಾಗಿ ಬದುಕುವ ಸಂದೇಶ ನೀಡಿದ ರಾಷ್ಟ್ರಗೀತೆಯನ್ನು ಗೌರವಿಸೋಣ. ಕೇಸರಿ, ಬಿಳಿ, ಹಸಿರು ಬಣ್ಣ ನಮ್ಮ ಶಕ್ತಿಯಾಗಿವೆ. ರೈತ ಹಾಗೂ ಶ್ರಮಿಕರ ಪರಿಶ್ರಮದಿಂದ ಸಿದ್ಧಗೊಂಡ ವಸ್ತುಗಳನ್ನು ವಿದೇಶಕ್ಕೆ ಮಾರಲು ವಿಪರೀತ ತೆರಿಗೆ ಭಾರವನ್ನು ಅನುಭವಿಸುವಂತಾಗಿದೆ. ಹಾನಗಲ್ಲ ತಾಲೂಕಿನಲ್ಲಿ ಜನಸ್ನೇಹಿ ಆಡಳಿತ ನೀಡಲಾಗುತ್ತಿದೆ. ನಾವು ಅಭಿವೃದ್ಧಿಯ ಸಾಧನೆಯ ಹಾದಿಯಲ್ಲಿದ್ದೇವೆ. ಹಾನಗಲ್ಲ ತಾಲೂಕಿನಲ್ಲಿ ಮನೆಯ ಹಕ್ಕಿಲ್ಲದೆ ಜೀವನ ನಡೆಸುವ 13 ಸಾವಿರ ಕುಟುಂಬಗಳ ಪೈಕಿ ಈಗ 80 ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ ನೀಡುತ್ತಿದ್ದೇವೆ. ಜನರು ಕೊಟ್ಟ ಅಧಿಕಾರವನ್ನು ಸದುಪಯೋಗ ಮಾಡಿಕೊಂಡಿದ್ದೇವೆ. ಬರುವ ಫೆ.13ರಂದು ನಮ್ಮ ಸರ್ಕಾರದ ಸಾವಿರ ದಿನಗಳ ಸಂಭ್ರಮ ಹಾವೇರಿಯಲ್ಲಿ ನಡೆಯಲಿದೆ ಎಂದರು. ತಾಲೂಕು ತಹಸೀಲ್ದಾರ್ ಎಸ್,ರೇಣುಕಾ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಇಂದು ಸಂವಿಧಾನ ಜಾರಿಯಾದ ಸುದಿನ. ಈ ನೆಲದ ಕಾನೂನು ಅರ್ಪಣೆಯಾದ ದಿನ. ಭಾರತದ ಭವಿಷ್ಯಕ್ಕಾಗಿ ಈ ಕಾನೂನು ಸಮರ್ಪಣೆಯಾಗಿದೆ. ಪಾರದರ್ಶಕ ಹಗೂ ಸ್ಫೂರ್ತಿದಾಯಕವಾದ ನಮ್ಮ ಸಂವಿಧಾನ ಇಡೀ ಜಗತ್ತಿಗೆ ಮಾದರಿಯಾದುದು. ಎಲ್ಲರಿಗೂ ನ್ಯಾಯ ಒದಗಿಸುವ ಸಂದೇಶ ಇದರಲ್ಲಿದೆ. ಸಾಮಾಜಿಕ ನ್ಯಾಯವೂ ಇಲ್ಲಿದೆ. ಹಾನಗಲ್ಲ ತಾಲೂಕಿನಲ್ಲಿ ತಾಂಡಾ, ಹಟ್ಟಿಗಳು ಸೇರಿದಂತೆ ವಿವಿದಡೆ ಮನೆಯ ಹಕ್ಕು ಪತ್ರಗಳಿಲ್ಲದೆ ವಾಸಿಸುವ ಜನರಿಗೆ ಹಕ್ಕು ಪತ್ರ ನೀಡುವಲ್ಲಿ ನಮ್ಮ ತಾಲೂಕು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದರು. ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಅನಿತಾ ಶಿವೂರ, ಅಬ್ದುಲ್‌ಗನಿ ಪಾಟೀಲ, ಚಂದ್ರಪ್ಪ ಜಾಲಗಾರ, ಉಮೇಶ ದೊಡ್ಡಮನಿ, ಪರಶುರಾಮ ಪೂಜಾರ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನೀಕಟ್ಟಿ, ಸಿದ್ದು ಗೌರಣ್ಣನವರ, ಸಿಪಿಐ ಬಿಕೆ ಹಳಗೊಂಡ, ಜಗದೀಶ ವೈಕೆ., ಗುರುನಾಥ ಗವಾಣಿಕರ, ಗುರುರಾಜ ನಿಂಗೋಜಿ, ಶಂಶಿಯಾಬಾನು ಬಾಳೂರ, ಮಮತಾ ಆರೆಗೊಪ್ಪ, ಮತೀನ ಶಿರಬಡಗಿ, ಟಾಕನಗೌಡ ಪಾಟೀಲ ಪಾಲ್ಗೊಂಡಿದ್ದರು.