ಮುಂಡಗೋಡ: ಧರ್ಮವನ್ನು ನಾವು ಉಳಿಸಿದರೆ ಮಾತ್ರ ಅದು ನಮ್ಮನ್ನು ಉಳಿಸುತ್ತದೆ. ಜಾಗ್ರತ ಸಮಾಜ ನಿರ್ಮಾಣವಾಗಬೇಕಿದೆ. ಧರ್ಮ ಜಾಗೃತಿಯಾದರೆ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿಕೊಂಡು ಹೋಗುವ ಸಂಗತಿಯನ್ನು ಗಮನಿಸಬಹುದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಶುಕ್ರವಾರ ಸಂಜೆ ಪಟ್ಟಣದ ಬಸವಣ್ಣ, ವೀರಭದ್ರೇಶ್ವರ ದೇವರ ರಥೋತ್ಸವಕ್ಕೆ ಚಾಲನೆ ನೀಡಿ ಬಳಿಕ ಧರ್ಮ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮುಂಡಗೋಡದಲ್ಲಿರುವಂತಹ ಜಾತ್ಯತೀತತೆ ಹಾಗೂ ಸೌಹಾರ್ದ ಇನ್ನೆಲ್ಲೂ ನೋಡಲು ಸಿಗುವುದಿಲ್ಲ. ಎಲ್ಲ ಜನಾಂದವರು ಒಂದು ಕಡೆ ಸೇರಿ ಜಾತ್ರೆಗಳನ್ನು ಆಚರಿಸುವ ಮುಂಡಗೋಡ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ೧೨ನೇ ಶತಮಾನದಲ್ಲಿ ಸಂದೇಶ ಸಾರಿದ ಬಸವಣ್ಣನ ಆದರ್ಶಗಳು ಇಲ್ಲಿ ಇಂದಿಗೂ ಜೀವಂತವಾಗಿ ಉಳಿದಿವೆ ಎಂದು ಹೇಳಿದರು.ನವಲಗುಂದ ಗವಿ ಮಠದ ಬಸವಲಿಂಗ ಸ್ವಾಮಿಗಳು ಸಾನ್ನಿಧ್ಯವಹಿಸಿ ಮಾತನಾಡಿ, ಜಾತ್ರೆಗಳು ಸಂಬಂಧ ಹಾಗೂ ಭಾವನೆಗಳನ್ನು ಬೆಸೆಯುವ ಕೆಲಸ ಮಾಡುತ್ತವೆ. ಬೇರೆ ಬೇರೆ ದೇಶಗಳು ಪರಸ್ಪರ ಬಾಂಬ್ ಹಾಕಿ ಯುದ್ಧ ಮಾಡುವ ಮೂಲಕ ದ್ವೇಶದ ಜ್ವಾಲೆಯಲ್ಲಿ ಬೇಯುತ್ತಿರುವ ಈ ಸಂದರ್ಭದಲ್ಲಿ ನಮ್ಮ ಜನ ಪ್ರೀತಿ-ವಿಶ್ವಾಸದಿಂದ ಜಾತ್ರೆಯನ್ನು ಆಚರಿಸುವ ಮೂಲಕ ಭಾವೈಕ್ಯ ಮೆರೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಬಂಕಾಪುರದ ಅರಳೆಲೆ ಹಿರೇಮಠದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಮಾತನಾಡಿ, ಸಂಸ್ಕಾರ ನೀಡುವಂತಹ ಆಚರಣೆಗಳು ಹೆಚ್ಚೆಚ್ಚಾಗಿ ನಡೆಯಬೇಕು. ಧಾರ್ಮಿಕ ಜಾತ್ರೆಗಳು ನಡೆಯುವುದರಿಂದ ಮಕ್ಕಳಲ್ಲಿ ಸಂಸ್ಕಾರ ಪರಿಚಯಿಸಿದಂತಾಗುತ್ತದೆ ಎಂದರು.ಮುಂಡಗೋಡ ಹಿರೇಮಠದ ವೇದಮೂರ್ತಿ ರುದ್ರಮುನಿ ಮಹಾಸ್ವಾಮಿಗಳು, ಹಿರಿಯರಾದ ಸಿ.ಎಸ್. ಗಾಣಿಗೇರ, ಉಮೇಶ ಬಿಜಾಪುರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ನಾಗಭೂಷಣ ಹಾವಣಗಿ, ಸಂಗಮೇಶ ಕೊಳ್ಳಾನವರ, ಮಲ್ಲಿಕಾರ್ಜುನ ಗೌಳಿ ಉಪಸ್ಥಿತರಿದ್ದರು. ಮಂಜುನಾಥ ಪಾಟೀಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.