ಅಂಗವಿಕಲರ ನೋಡುವ ದೃಷ್ಟಿಕೋನ ಬದಲಾಗಲಿ: ಗವಿಶ್ರೀಗಳು

| Published : Jan 12 2025, 01:16 AM IST

ಅಂಗವಿಕಲರ ನೋಡುವ ದೃಷ್ಟಿಕೋನ ಬದಲಾಗಲಿ: ಗವಿಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿ ವಾಸಿಸುವ ಕಣ್ಣಿಲ್ಲದವರನ್ನು, ಕಿವಿ, ಕಾಲು, ಕೈಗಳು ಇಲ್ಲದಂತಹ ಅಂಗವಿಕಲರನ್ನು ನೋಡುವಂತಹ ದೃಷ್ಟಿಕೋನವನ್ನು ಬದಲಾವಣೆ ಮಾಡಿಕೊಳ್ಳಬೇಕು.

ವಿಕಲಚೇತನನ ನಡೆ ಸಕಲಚೇತನದ ಕಡೆ ಜಾಗೃತಿ ಅಭಿಯಾನ

ಕನ್ನಡಪ್ರಭ ವಾರ್ತೆ ಕೊಪ್ಪಳ

ಸಮಾಜದಲ್ಲಿ ವಾಸಿಸುವ ಕಣ್ಣಿಲ್ಲದವರನ್ನು, ಕಿವಿ, ಕಾಲು, ಕೈಗಳು ಇಲ್ಲದಂತಹ ಅಂಗವಿಕಲರನ್ನು ನೋಡುವಂತಹ ದೃಷ್ಟಿಕೋನವನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಹೇಳಿದರು.ನಗರದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗವಿಮಠ, ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳು, ಹಲವಾರು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ "ವಿಕಲ ಚೇತನನ ನಡೆ ಸಕಲ ಚೇತನದ ಕಡೆ " ಎಂಬ ಕೃತಕ ಅಂಗಾಂಗ ಜೋಡಣೆ ಬೃಹತ್ ಜಾಗೃತಿ ನಡಿಗೆ ಜಾಥಾ ಕಾರ್ಯಕ್ರಮದ ನಂತರ ಗವಿಮಠ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಣ್ಣು, ಕಿವಿ, ಕಾಲು ಮತ್ತು ಕೈಯಿಲ್ಲದಂತವರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಯಾವುದೋ ಒಂದು ಅಪಘಾತ, ಪೂರ್ವಜನ್ಮದ ಕೃತ್ಯವೂ ಕೆಲವರಲ್ಲಿ ಕೈ, ಕಾಲು, ಕಣ್ಣು, ಕಿವಿ ಹೀಗೆ ಏನೋ ನ್ಯೂನತೆಯಾಗಿರುತ್ತದೆ. ಮೊದಲು ಅವರಿಗೆ ಆತ್ಮಸ್ಥೈರ್ಯ ಬೇಕು. ಇದರ ಜೊತೆಗೆ ಪ್ರೀತಿ, ಸಹನಾಭೂತಿ ಅತ್ಯವಶ್ಯಕವಾಗಿದೆ ಎಂದರು.ಪ್ರತಿ ವರ್ಷ ನಡೆಯುವ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವು ಕೇವಲ ರಥೋತ್ಸವವಾಗಿ ನಡೆಯದೇ ಸಾಮಾಜಿಕ ಸಂದೇಶಗಳನ್ನು ಸಾರುತ್ತದೆ. ಈ ವರ್ಷ ವಿಕಲಚೇತನರ ನಡೆ ಸಕಲಚೇತನದ ಕಡೆ'''' ಎಂಬ ಜಾಗೃತಿ ಕಾರ್ಯಕ್ರಮವನ್ನು ಮಕ್ಕಳಲ್ಲಿ ಸಹನಾಭೂತಿ, ವಿಕಲಚೇತನರ ಬಗ್ಗೆ ಪ್ರೇಮ ಬೆಳೆಸುವುದಕ್ಕಾಗಿ ಆಯೋಜಿಸಲಾಗಿದೆ. ಈ ಜಾತ್ರೆಯಲ್ಲಿ ಕೃತಕ ಕೈ-ಕಾಲುಗಳಿಗಾಗಿ ಎಷ್ಟು ಜನ ನೋಂದಾಯಿಸಿಕೊಳ್ಳುತ್ತಾರೆ, ಅವರೆಲ್ಲರಿಗೂ ಉಚಿತವಾಗಿ ಕೃತಕ ಕೈ-ಕಾಲುಗಳ ಜೋಡಣೆ ಮಾಡಲಾಗುವುದು. ಶ್ರವಣ ನ್ಯೂನತೆಯುಳ್ಳ ವಿದ್ಯಾರ್ಥಿಗಳಿಗೆ ಶ್ರವಣ ಸಾಧನಗಳ ವಿತರಣೆ ಮಾಡಲಾಗುತ್ತಿದೆ. ಈ ಮಹತ್ತರ ಕಾರ್ಯಕ್ಕಾಗಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ, ಶ್ರೀ ಮಹಾವೀರ ಲಿಂಬ್ ಸಂಸ್ಥೆ, ರೆಡ್ ಕ್ರಾಸ್ ಸಂಸ್ಥೆಗಳು ಸಹಕಾರ ನೀಡಿವೆ. ಇವುಗಳ ಜೊತೆಗೆ ಕೈಜೊಡಿಸಲು ಹಲವಾರು ದಾನಿಗಳು ಸಹ ಮುಂದೆ ಬಂದಿದ್ದಾರೆ ಎಂದು ಹೇಳಿದರು. ಕೈ,ಕಾಲು ಇಲ್ಲದವರಿಗೆ ಕೃತಕ ಕೈ, ಕಾಲು ಜೋಡಿಸುವುದು ಮಹತ್ತರವಾದ ಕಾರ್ಯವಾಗಿದೆ. ಅಜ್ಜನ ಜಾತ್ರೆಯ ರಥ ಸಾಗುವುದಕ್ಕಿಂತ ಮುಂಚೆ ಈ ಅಭಿಯಾನದಲ್ಲಿ ಇಂದು ಸಾವಿರಾರೂ ಸಂಖ್ಯೆಯಲ್ಲಿ ಪಾಲ್ಗೊಂಡ ಮಕ್ಕಳ ಹೆಜ್ಜೆಯ ಗುರುತುಗಳು ಎಲ್ಲರಿಗೂ ದಿಕ್ಸೂಚಿಯಾಗಲಿ. ಮುಂದಿನ ವರ್ಷ ಯಾವ ವಿಷಯದ ಬಗ್ಗೆ ಜಾಥಾ ಮತ್ತು ಕೆಲಸ ಮಾಡಬೇಕು ಎಂಬುವುದನ್ನು ವಿದ್ಯಾರ್ಥಿಗಳೇ ಸಲಹೆ ನೀಡಬೇಕು. ಆಯ್ಕೆಯಾಗುವ ವಿಷಯವನ್ನು ತಿಳಿಸಿದ ವಿದ್ಯಾರ್ಥಿಯಿಂದಲೇ ಮುಂದಿನ ವರ್ಷದ ಜಾಥಾ ಕಾರ್ಯಕ್ರಮ ಉದ್ಘಾಟಿಸಲಾಗುವುದು ಎಂದು ಶ್ರೀಗಳು ಕರೆ ನೀಡಿದರು.ಜಾಗೃತಿ ನಡಿಗೆ ಅಭಿಯಾನಕ್ಕೆ ಜಿಲ್ಲಾಧಿಕಾರಿ ನಲಿನ್ ಅತುಲ್ ಚಾಲನೆ ನೀಡಿ ಮಾತನಾಡಿ, ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಹತ್ತು ದಿನಗಳ ಅವಧಿಯಲ್ಲಿ 20 ಲಕ್ಷ ಹಾಗೂ ರಥೋತ್ಸವಕ್ಕೆ ಐದು ಲಕ್ಷ ಜನ ಸೇರುವುದು ಹೆಮ್ಮೆಯ ವಿಷಯ. ಪ್ರತಿ ವರ್ಷ ಒಂದು ಧ್ಯೇಯ ವಾಕ್ಯದೊಂದಿಗೆ ಆರಂಭವಾಗುವ ಜಾತ್ರೆಯ ನಡೆ ಮಾದರಿಯಾಗಿದೆ. ಅಂಗನವಾಡಿಯಿಂದಲೇ ಜಿಲ್ಲೆಯ ಮಕ್ಕಳಲ್ಲಿ ಅಂಗವಿಕಲತೆ ಪತ್ತೆಹಚ್ಚಿ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ವಿಕಲಚೇತನರಿಗೆ ಕೊರಗು ಬರದಂತೆ ಆತ್ಮ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಅಭಿನವ ಗವಿ ಶ್ರೀಗಳು ಮಾಡುತ್ತಿರುವ ಕಾರ್ಯ ಇಡೀ ದೇಶಕ್ಕೆ ಮಾದರಿಯಾಗಿದೆ. ಶಿಕ್ಷಣ, ಆಹಾರ, ವಸತಿ, ಜಲ ಸಂರಕ್ಷಣೆ ಸೇರಿದಂತೆ ಅನೇಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಮಹತ್ವ ಸಾರುತ್ತಿರುವುದು ಜಿಲ್ಲೆಯ ಹೆಗ್ಗಳಿಕೆಯಾಗಿದೆ ಎಂದರು.ಈ ಸಂದರ್ಭ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಶಾಖೆಯ ಚೇರಮನ್ ವಿಜಯಕುಮಾರ, ಶ್ರೀ ಮಹಾವೀರ ಸಂಸ್ಥೆಯ ಮಹೇಂದ್ರ ಸಿಂಘ್ವಿ, ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕರಾದ ಪುಷ್ಪಾವತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ, ಡಿವೈಎಸ್ಪಿ ಮುತ್ತಣ್ಣ ಸವರಗೋಳ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಎಸ್. ಶಂಕ್ರಯ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಜಿಲ್ಲಾ ಶಾಖೆಯ ಚೇರಮನ್ ಸೋಮರೆಡ್ಡಿ ಅಳವಂಡಿ ನಿರೂಪಿಸಿದರು.ಬಹುಮಾನ ವಿತರಣೆ:

ಈ ಜಾಗೃತಿ ಅಭಿಯಾನದ ಹಿನ್ನೆಲೆ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಜಾಗೃತಿ ಜಾಥಾ:

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ತಾಲೂಕು ಕ್ರೀಡಾಂಗಣ) ದಿಂದ ಆರಂಭವಾದ ಕೃತಕ ಅಂಗಾಂಗ ಜೋಡಣೆ ಜಾಗೃತಿ ನಡೆಗೆ ಅಶೋಕ ವೃತ್ತ, ಗಡಿಯಾರ ಕಂಬದ ಮೂಲಕ ಶ್ರೀ ಗವಿಮಠದವರೆಗೆ ನಡೆಯಿತು. ಇದರಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಕೊಪ್ಪಳ, ಭಾಗ್ಯನಗರದ ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ, ವಿಕಲಚೇತನರ ನಡೆ ಸಕಲಚೇತನದ ಕಡೆ, ಅನುಕಂಪ ಬೇಡ-ಅವಕಾಶ ಕೊಡಿ ಹಾಗೂ ಇತರೆ ಘೋಷಣೆ ಕೂಗಿದರು.