ಎಐ ಕುರಿತು ಅರಿವು ಮೂಡಿಸುವ ಕಾರ್ಯವಾಗಲಿ: ವೆಂಕಪ್ಪಯ್ಯ ದೇಸಾಯಿ

| Published : Dec 23 2024, 01:01 AM IST

ಸಾರಾಂಶ

ಕೃತಕ ಬುದ್ಧಿಮತ್ತೆ ಕುರಿತು ಇಂದು ಎಲ್ಲಡೆ ಚರ್ಚೆಯಾಗುತ್ತಿದೆ. ಬಹುದೊಡ್ಡ ಮಾನವ ಸಂಪನ್ಮೂಲ ಹೊಂದಿದ ಭಾರತದಲ್ಲೂ ಇದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವ ಅಗತ್ಯವಿದೆ.

ಹುಬ್ಬಳ್ಳಿ:

ಈಗ ಎಲ್ಲಡೆ ಕೃತಕ ಬುದ್ಧಿಮತ್ತೆ (ಎಐ) ಕುರಿತು ಜಪ ಆರಂಭವಾಗಿದೆ. ಇದರಿಂದ ಸದುಪಯೋಗಕ್ಕಿಂತ ದುರುಪಯೋಗಗಳೇ ಹೆಚ್ಚಾಗುತ್ತಿವೆ. ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕಿದೆ ಎಂದು ಧಾರವಾಡ ಐಐಟಿ ನಿರ್ದೇಶಕ ವೆಂಕಪ್ಪಯ್ಯ ದೇಸಾಯಿ ಸಲಹೆ ನೀಡಿದರು.

ಇಲ್ಲಿಯ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ (ಐಸಿಎಐ) ಹುಬ್ಬಳ್ಳಿ ಶಾಖೆಯ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಏರ್ಪಡಿಸಿದ್ದ 37ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕೃತಕ ಬುದ್ಧಿಮತ್ತೆ ಕುರಿತು ಇಂದು ಎಲ್ಲಡೆ ಚರ್ಚೆಯಾಗುತ್ತಿದೆ. ಬಹುದೊಡ್ಡ ಮಾನವ ಸಂಪನ್ಮೂಲ ಹೊಂದಿದ ಭಾರತದಲ್ಲೂ ಇದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವ ಅಗತ್ಯವಿದೆ. ಕೃತಕ ಬುದ್ಧಿಮತ್ತೆ ಎಷ್ಟೇ ಅಭಿವೃದ್ಧಿಯಾಗಿದ್ದರೂ ಸೈಬರ್ ಕ್ರೈಂ ಪತ್ತೆ ಹಚ್ಚುವಲ್ಲಿ ಅಥವಾ ಕಡಿಮೆಗೊಳಿಸುವಲ್ಲಿ ಮಾತ್ರ ಇಂದಿಗೂ ಯಶಸ್ಸು ಕಾಣದಿರುವುದು ನೋವಿನ ಸಂಗತಿ. ಇಂದಿನ ಜನತೆಗೆ ಇದನ್ನು ಹೇಗೆ, ಯಾವುದಕ್ಕೆ ಬಳಸಬೇಕು ಎಂಬುದರ ಅರಿವು ಮೂಡಿಸುವ ಕಾರ್ಯವಾಗಬೇಕಿದೆ ಎಂದರು.

ಎಚ್ಚರಿಕೆ ವಹಿಸಿ:

ಕೃತಕ ಬುದ್ಧಿಮತ್ತೆಯನ್ನು ನ್ಯಾಯ ವ್ಯವಸ್ಥೆಯಲ್ಲಿ ಬಳಸುವುದು ಸೂಕ್ತವಲ್ಲ. ಅಪರಾಧಗಳನ್ನು ಕೆಲವರು ಬೇಕೆಂದೇ ಮಾಡುತ್ತಾರೆ. ತಪ್ಪುಗಳು ಸಹಜ. ಆದರೆ, ಕೇಡು ಮಾಡುವವರು ತಿಳಿಯದೆ ಮಾಡಿರುತ್ತಾರೆ. ಹಾಗಾಗಿ ಕೃತಕ ಬುದ್ಧಿಮತ್ತೆಯ ಉಪಯೋಗಗಳು ಹೇಗಿವೆಯೋ ಅದರ ದುರುಪಯೋಗಗಳು ಇವೆ. ಹಾಗಾಗಿ, ಬಹಳ ಎಚ್ಚರಿಕೆ ಇರಬೇಕು ಎಂದು ಸಲಹೆ ನೀಡಿದರು.

ಸೂಕ್ತ ಮಾರ್ಗದರ್ಶನ ನೀಡಿ:

ಐಸಿಎಐ ಪದನಿಮಿತ್ತ ಸದಸ್ಯ ಪನ್ನಾ ರಾಜ್ ಎಸ್. ಮಾತನಾಡಿ, ವೃತ್ತಿಯಲ್ಲಿರುವ ಲೆಕ್ಕ ಪರಿಶೋಧಕರಿಗೆ ಪ್ರಸ್ತುತ ಬದಲಾವಣೆಗಳ ಬಗ್ಗೆ ಮಾಹಿತಿ ನೀಡುವುದು ಕಾರ್ಯಕ್ರಮದ ಉದ್ದೇಶ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ದೇಶದ ಬೆನ್ನೆಲುಬು. ಕೃಷಿ ಕ್ಷೇತ್ರ ಬಿಟ್ಟರೆ ಅವು ಅತಿ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಒದಗಿಸಿವೆ. ಎಂಎಸ್‌ಎಂಇ ಬಲವರ್ಧನೆಗೆ ಅಗತ್ಯ ಕ್ರಮಕೈಗೊಳ್ಳಬೇಕು. ಲೆಕ್ಕ ಪರಿಶೋಧಕರು ಸೂಕ್ತ ಮಾರ್ಗದರ್ಶನ ನೀಡಬೇಕಿದೆ ಎಂದರು.

ಅರ್ಥಸಿದ್ಧಿ ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಆರ್ಥಿಕ ಸಾಧನೆ ಧ್ಯೇಯವಾಕ್ಯದಡಿ ಈ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು. ಗದಗ, ಹಾವೇರಿ, ಉತ್ತರ ಕನ್ನಡ, ಬಾಗಲಕೋಟ ಸೇರಿದಂತೆ ಹಲವು ಜಿಲ್ಲೆಗಳಿಂದ 300ಕ್ಕೂ ಹೆಚ್ಚು ಲೆಕ್ಕಪರಿಶೋಧಕರು ಪಾಲ್ಗೊಂಡಿದ್ದರು. ನಂತರ ನಡೆದ ಗೋಷ್ಠಿಯಲ್ಲಿ ತಾಂತ್ರಿಕತೆ ಹಾಗೂ ಕೃತಕ ಬುದ್ಧಿಮತ್ತೆ ಕುರಿತು ಹೈದ್ರಾಬಾದ್‌ನ ಸಿಎ ಶರಣಕುಮಾರ ಮಾಹಿತಿ ನೀಡಿದರು.

ಹುಬ್ಬಳ್ಳಿ ಶಾಖೆ ಅಧ್ಯಕ್ಷ ಧನಪಾಲ್ ಮುನ್ನೋಳಿ, ಲೆಕ್ಕ ಪರಿಶೋಧಕರಾದ ನರೇಂದ್ರ ಜೈನ್, ಕೆ.ವಿ. ದೇಶಪಾಂಡೆ, ಅರವಿಂದ ಹೆಜಿಬ್, ವೈ.ಎಂ. ಖಟಾವಕರ, ಅಕ್ಷಯಕುಮಾರ ಸಿಂಘಿ, ರಿಷಭ ಉಪಾಧ್ಯಾಯ, ಎಚ್.ಎನ್. ಆಡಿನವರ, ಅಮಿತ್ ಬಾಬಜಿ, ಸಂತೋಷ ಮಾಗಾವಿ, ಜತಿನ್ ಕ್ರಿಸ್ಟೋಫರ್, ಆನಂದ ಪೋತ್ನಿಸ್ ಸೇರಿದಂತೆ ಹಲವರಿದ್ದರು.