ಸಾರಾಂಶ
ಬರಹಗಾರರೊಂದಿಗೆ ಸಂವಾದ ಕಾರ್ಯಕ್ರಮ
ಕನ್ನಡಪ್ರಭವಾರ್ತೆ ಸಿರುಗುಪ್ಪಮಕ್ಕಳ ಸಾಹಿತ್ಯ ಮಕ್ಕಳಿಗೆ ಸಂತೋಷ ನೀಡಬೇಕು. ಭಾಷೆ ಕಲಿಸಬೇಕು. ಆಲೋಚನಾ ಶಕ್ತಿ ಬೆಳೆಸಬೇಕು. ಜತೆಗೆ ಬದುಕುವ ವಿವೇಕ ಹೊಳೆಯಿಸಬೇಕು. ಆಗ ಅದು ಸಾರ್ಥಕ ಸಾಹಿತ್ಯ ಎನಿಸಿಕೊಳ್ಳುತ್ತದೆ ಎಂದು ಮಕ್ಕಳ ಸಾಹಿತಿ ಶಿವಲಿಂಗಪ್ಪ ಹಂದ್ಯಾಳ್ ತಿಳಿಸಿದರು.
ನಗರದ ಬಾಗೇವಾಡಿ ಭೀಮೇಶ್ ಅವರ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಿರಗುಪ್ಪ ಘಟಕ ಹಾಗೂ ಹಚ್ಚೊಳ್ಳಿ ಹೋಬಳಿ ಘಟಕದಿಂದ ನಡೆದ ಬರಹಗಾರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ನೋಟ್ ಬುಕ್ ಕೃತಿಯ ಲೇಖಕ ಶಿವಲಿಂಗಪ್ಪ ಹಂದ್ಯಾಳ್ ಭಾಗವಹಿಸಿ ಮಾತನಾಡಿದರು.ಕಾವ್ಯ ಬರಹಗಳಿಂದ ಆರಂಭಗೊಂಡ ತಮ್ಮ ಸಾಹಿತ್ಯ ಕೃಷಿ ಇಂದು ಮಕ್ಕಳ ಕಥೆಗಳನ್ನು ಬರೆಯುವ ಹಾದಿಗೆ ತಂದು ನಿಲ್ಲಿಸಿದೆ. ಉತ್ತಮ ಮಕ್ಕಳ ಪುಸ್ತಕಗಳು ಪ್ರಕಾಶಮಾನವಾದ ಮತ್ತು ವರ್ಣರಂಜಿತ ಚಿತ್ರಣಗಳು, ಆಕರ್ಷಕ ಕಥೆಗಳು ಮತ್ತು ಮಕ್ಕಳು ಗುರುತಿಸಬಹುದಾದ ಪಾತ್ರ ಒಳಗೊಂಡಿರಬೇಕು ಎಂದು ತಿಳಿಸಿದರು.
ಮಕ್ಕಳ ಸಾಹಿತ್ಯವು ಯುವಜನರ ಜೀವನದ ಒಂದು ಪ್ರಮುಖ ಭಾಗವಾಗಿದೆ. ಇದು ಅವರ ಕಲ್ಪನೆ ಮತ್ತು ಸೃಜನಶೀಲತೆ ಬೆಳೆಸಲು ಸಹಾಯ ಮಾಡುತ್ತದೆ. ಜತೆಗೆ ಅವರಿಗೆ ಅಮೂಲ್ಯ ಜೀವನ ಪಾಠ ಒದಗಿಸುತ್ತದೆ ಎಂದು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ಲೇಖಕ ಶಿವಕುಮಾರ್ ಬಳಿಗಾರ್ ಹೇಳಿದರು.ಕಾರ್ಯಕ್ರಮದ ಸಮನ್ವಯತೆ ವಹಿಸಿದ್ದ ಉಪನ್ಯಾಸಕ ಪಂಪಾಪತಿ ಮಾತನಾಡಿ, ಮಕ್ಕಳ ಸಾಹಿತ್ಯದ ಇತಿಹಾಸವು ದೀರ್ಘ ಮತ್ತು ವೈವಿಧ್ಯಮಯವಾಗಿದೆ. ಮಕ್ಕಳಲ್ಲಿ ಕುತೂಹಲ ಕೆರಳಿಸಿ, ಕಲ್ಪನೆ ರೂಪಿಸಿ, ಭಾವನೆ ಪ್ರಚೋದಿಸಿ, ಅವರ ವ್ಯಕ್ತಿತ್ವ ರೂಪಿಸುವ ಮಕ್ಕಳ ಸಾಹಿತ್ಯವೆಂಬುದು ಸ್ಪಷ್ಟರೂಪಕ್ಕೆ ಬಂದದ್ದು ಆಧುನಿಕ ಶಿಕ್ಷಣ ಹಾಗೂ ನವೋದಯ ಸಾಹಿತ್ಯ ಸಂದರ್ಭದಲ್ಲಿ ಎಂದು ವಿವರಿಸಿದರು.
ಕಸಾಪ ಸಿರುಗುಪ್ಪ ತಾಲೂಕು ಘಟಕದ ಅಧ್ಯಕ್ಷ ಡಾ. ಮಧುಸೂದನ ಕಾರಿಗನೂರು ಅಧ್ಯಕ್ಷತೆ ವಹಿಸಿದ್ದರು. ಹಾಸ್ಯ ಕಲಾವಿದ ನರಸಿಂಹಮೂರ್ತಿ ಹಾಗೂ ಸಿರುಗುಪ್ಪ ಕಸಾಪ ನಗರ ಘಟಕದ ಅಧ್ಯಕ್ಷ ಡಾ. ಚಂದ್ರಕಾಂತ್ ಕಾರ್ಯಕ್ರಮ ನಿರ್ವಹಿಸಿದರು.ಹಚ್ಚೊಳ್ಳಿ ಹೋಬಳಿ ಕಸಾಪದ ಘಟಕದ ಅಧ್ಯಕ್ಷ ಪಿ. ಭೀಮೇಶ್, ಶಿಕ್ಷಕರಾದ ದೇವಲಾಪುರ ವೆಂಕಟೇಶ್, ಮಲ್ಲಿಕಾರ್ಜುನ ಸ್ವಾಮಿ, ಕತೆಗಾರ ವೀರೇಂದ್ರ ರಾವಿಹಾಳ್ , ಡಾ. ಪ್ರಭಾವತಿ ಕಾರಿಗನೂರು ಮತ್ತಿತರರಿದ್ದರು.