ಕಿತ್ತೂರು ಸಂಸ್ಥಾನದ ಕುರಿತು ವಿಶ್ವವ್ಯಾಪಿಯಾಗಿ ಪ್ರಚಾರ ಮಾಡುವ ಅಗತ್ಯವಿದೆ. ವಸ್ತು ಸಂಗ್ರಹಾಲಯದ ಮೂಲಕ ಕಿತ್ತೂರು ಸಂಸ್ಥಾನದ ಹಿರಿಮೆ, ವೈಭವದ ಕುರಿತು ದಾಖಲೆಗಳ ಮೂಲಕ ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ.

ಧಾರವಾಡ:

ಐತಿಹಾಸಿಕ ಕಿತ್ತೂರು ಸಂಸ್ಥಾನದ ಕುರಿತು ವಿವಿಧ ಆಯಾಮಗಳಲ್ಲಿ ಹೆಚ್ಚಿನ ಸಂಶೋಧನೆ ‌ನಡೆಸಬೇಕಾದ ಅಗತ್ಯವಿದೆ ಎಂದು ಪಣಜಿಯ ಇಂಡೋ- ಪೋರ್ಚುಗೀಸ್ ಸಾಹಿತ್ಯ ಪ್ರತಿಷ್ಠಾನ ಸಂಸ್ಥೆಯ ನಿರ್ದೇಶಕ ಡಾ. ಅರವಿಂದ್ ಯಾಳಗಿ ಹೇಳಿದರು.

ಇಲ್ಲಿಯ ರಾ.ಹ. ದೇಶಪಾಂಡೆ ಸಭಾಂಗಣದಲ್ಲಿ ಕಿತ್ತೂರು ಸಂಸ್ಥಾನದ ವಂಶಜರು ಆಯೋಜಿಸಿದ 1824ರ ನಂತರ ಕಿತ್ತೂರು ಸಂಸ್ಥಾನದ ಹೊಸ ಸಂಶೋಧನೆಗಳು ಹಾಗೂ ವಂಶಜರು ಕುರಿತ ಕಾರ್ಯಾಗಾರ ಉದ್ಘಾಟಿಸಿದ ಅವರು, ಕಿತ್ತೂರು ಸಂಸ್ಥಾನದ ಕುರಿತು ವಿಶ್ವವ್ಯಾಪಿಯಾಗಿ ಪ್ರಚಾರ ಮಾಡುವ ಅಗತ್ಯವಿದೆ. ವಸ್ತು ಸಂಗ್ರಹಾಲಯದ ಮೂಲಕ ಕಿತ್ತೂರು ಸಂಸ್ಥಾನದ ಹಿರಿಮೆ, ವೈಭವದ ಕುರಿತು ದಾಖಲೆಗಳ ಮೂಲಕ ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ ಎಂದರು.

ಪಾಲಿಕೆ ಮಾಜಿ ಸದಸ್ಯ ಸಿ.ಎಸ್. ಪಾಟೀಲ ಮಾತನಾಡಿ, ಕಿತ್ತೂರಿನ ವಂಶಜರ ಬಗ್ಗೆ ಇತ್ತೀಚಿನ ಅನೇಕ ಅಧ್ಯಯನಗಳು ಹೊಸ ರೀತಿಯ ಮಾಹಿತಿ ಹೊರತಂದಿವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಅಮೃತ ದೇಸಾಯಿ, ಸ್ವಾತಂತ್ರ ಪೂರ್ವದಲ್ಲಿ ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೊರಾಟ ನಡೆಸಿದ ಧೀಮಂತ ಮಹಿಳೆ ಆಗಿದ್ದಾಳೆ. ಪ್ರಸ್ತುತ ಎಲ್ಲ ಕ್ಷೇತ್ರದಲ್ಲಿ ಇಂದು ಮಹಿಳೆಯರಿದ್ದಾರೆ. ಆದರೆ, ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ತರಲಾಗುತ್ತಿಲ್ಲ, ಸಮಾಜ ಬದಲಾವಣೆ ಯಾಗಬೇಕಾದರೆ ಮಹಿಳೆಯರ ಪಾತ್ರ ಮಹತ್ವದು ಎಂದರು.

ಡಾ. ಕೆ.ಎನ್. ನರಹರಿ ಕಿತ್ತೂರು ಸಂಸ್ಥಾನದ ಆಡಳಿತ ವಿಭಾಗಗಳು,‌‌ ಡಾ. ನೀಲಪ್ಪ ವಾಲಿಕಾರ ಕಿತ್ತೂರು ಪರಿಸರದ ಸಾಂಸ್ಕೃತಿಕ ಅಧ್ಯಯನ ಕುರಿತು ಮಾತನಾಡಿದರು. ಕಿತ್ತೂರು ವಂಶಸ್ಥರಾದ ಸೋಮಶೇಖರ ದೇಸಾಯಿ-ಕಿತ್ತೂರ ಸಂಸ್ಥಾನದ ವಂಶಜರಿಂದ ಚಿಂತನೆ, ಉದಯ ದೇಸಾಯಿ-ಕಿತ್ತೂರ ಸಂಸ್ಥಾನದ ವಂಶಸ್ಥರು, ಅರವಿಂದ ಮಾಲದೇಸಾಯಿ 17ನೇ ದೇಶಗತ್ತಿ ಹಂದಿಗನೂರ ದೇಶಗತ್ತಿ ಮನೆತನಗಳು ವಿಷಯದ ಕುರಿತು ‌ಮಾತನಾಡಿದರು. ಇತಿಹಾಸ ತಜ್ಞರಾದ ಡಾ. ಹನುಮಾಕ್ಷಿ ಗೋಗಿ ಮತ್ತು ಮೂಡಿಲಿಪಿ ತಜ್ಞರಾದ ಸಂಗಮೇಶ ಕಲ್ಯಾಣಿ 1824ರ ನಂತರದ ಕಿತ್ತೂರು ಸಂಸ್ಥಾನದ ಹೊಸ ಸಂಶೋಧನೆಗಳು ಹಾಗೂ ವಂಶಜರು ಎಂಬ ವಿಷಯದ ಕುರಿತು ಮಾತನಾಡಿದರು.

ಡಾ. ಬಾಳಣ್ಣ ಶೀಗೇಹಳ್ಳಿ, ಡಾ. ಸಂಗಮೇಶ ಕಲ್ಯಾಣಿ, ಡಾ. ಎಂ.ಐ ಸಾವಂತ, ಡಾ. ಎ.ಬಿ. ವಗ್ಗರ, ಪ್ರೊ. ಎಸ್.ಸಿ. ಪಾಟೀಲ, ಮಹೇಶ ಚನ್ನಂಗಿ, ಪ್ರೊ. ಸಿ.ಕೆ. ನಾವಲಗಿ, ಪ್ರೊ. ಮಲ್ಲಿಕಾರ್ಜುನ ಪಾಟೀಲ, ಡಾ. ವೀರಣ್ಣ ರಾಜೂರ, ಸೋಮಶೇಖರ ಪಾಟೀಲ ಇದ್ದರು.