ಸಾರಾಂಶ
ಬ್ಯಾಡಗಿ: ‘ವಿಶ್ವ ಏಡ್ಸ್ ದಿನಾಚರಣೆ’ ಅಂಗವಾಗಿ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಪಟ್ಟಣದ ಸ್ನೇಹ-ಸದನ ಸಮಗ್ರ ಸಮಾಜ ಕಾರ್ಯ ನಿರ್ವಹಣಾ ಕೇಂದ್ರ, ಸೇಂಟ್ ಜಾನ್ ವಿಯೆನ್ನಾ ಪ್ರೌಢಶಾಲೆ, ಎಸ್‌ಜೆಜೆಎಂ ಪದವಿ ಪೂರ್ವ ಕಾಲೇಜು ಎನ್‌ಸಿಸಿ (ಸೀನಿಯರ್) ವಿಭಾಗ ಮತ್ತು ಸಾರ್ವಜನಿಕ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಸೇಂಟ್ ಜಾನ್ ಶಾಲೆಯಿಂದ ಪ್ರಾರಂಭವಾದ ಏಡ್ಸ್ ಜಾಗೃತಿ ಜಾಥಾ, ಸುಭಾಸ್ ವೃತ್ತ, ಮುಖ್ಯರಸ್ತೆ ಮೂಲಕ ಹಾಯ್ದು ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಲಾಯಿತು, ಈ ವೇಳೆ ಎಚ್‌ಐವಿ ಇಂದ ಆಗುವ ದುಷ್ಟರಿಣಾಮಗಳ ಕುರಿತು ಘೋಷಣೆಗಳ ಮೂಲಕ ಸಾರ್ವಜನಿಕರಲ್ಲಿ ತಿಳಿಯಪಡಿಸಲಾಯಿತು.ಸೋಂಕಿತರನ್ನು ಅಪ್ಪಿಕೊಳ್ಳೋಣ: ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಪುಟ್ಟರಾಜು ಅಸುರಕ್ಷಿತ ಲೈಂಗಿಕ ಕ್ರಿಯೆ ಇದಕ್ಕೆ ಮೂಲ ಕಾರಣವಾಗಿದ್ದು, ಹದಿಹರೆಯದ ಯುವತಿಯರಲ್ಲಿ ಇದು ಹೆಚ್ಚಾಗಿ ಕಾಣುತ್ತಿದೆ. ಪ್ರಸಕ್ತ ಸನ್ನಿವೇಶದಲ್ಲಿ ಶೋಷಿತರಿಗೆ ತಿರಸ್ಕೃತರಿಗೆ ಆಶ್ರಯ ನೀಡಬೇಕಾಗಿದೆ. ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳಿಗೆ ಶಿಕ್ಷೆ ನೀಡುವುದಕ್ಕಿಂತ ಅವರನ್ನು ಅಪ್ಪಿಕೊಳ್ಳುವಂತಹ ಕೆಲಸವಾಗಬೇಕಾಗಿದೆ ಎಂದರು.
ಸಾರ್ವಜನಿಕರ ಪಾತ್ರ ಮುಖ್ಯ: ಆರೋಗ್ಯಾಧಿಕಾರಿ ಡಾ. ಕಾಂತೇಶ ಭಜಂತ್ರಿ ಮಾತನಾಡಿ, ಆರೋಗ್ಯ ಇಲಾಖೆ ಏಡ್ಸನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ, ಇದರಲ್ಲಿ ಸಾರ್ವಜನಿಕರ ಪಾತ್ರ ತುಂಬಾ ಮುಖ್ಯವಾಗಿದೆ. ಏಡ್ಸ್ ಮುಕ್ತ ಸಮಾಜವನ್ನು ಎಲ್ಲರೂ ಸೇರಿ ನಿರ್ಮಿಸೋಣ ಅದರಲ್ಲೂ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದೆ. ಮಕ್ಕಳ ಚಲನ ವಲನ ಬಗ್ಗೆ ಪಾಲಕರು ಒಂದಿಷ್ಟು ಕಾಳಜಿ ತೆಗೆದುಕೊಂಡಲ್ಲಿ ಇಂತಹ ರೋಗಗಳಿಂದ ರಕ್ಷಿಸಬಹುದಾಗಿದೆ ಎಂದರು.ಸೋಂಕಿತರ ಜೀವನಕ್ಕೆ ಭರವಸೆ: ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ರೂಪ ತೆರೆಸಿಟಾ ಮಾತನಾಡಿ, ಏಡ್ಸ್ ಸೋಂಕಿತ ಮಹಿಳೆಯರು ಬದುಕನ್ನು ಕಟ್ಟಿಕೊಳ್ಳಲು ನಾವೆಲ್ಲರೂ ಕೈಜೋಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸ್ನೇಹ ಸದನ ಸಮಗ್ರ ಸಮಾಜ ಕಾರ್ಯ ನಿರ್ವಹಣಾ ಕೇಂದ್ರ ಸೋಂಕಿತರ ಜೀವನಕ್ಕೆ ಭರವಸೆ ನೀಡುತ್ತಿದೆ. ನಿರಾಶ್ರಿತರ ಶಿಬಿರದಲ್ಲಿ ಅತ್ಯುತ್ತಮವಾಗಿ ಜೀವನ ನಡೆಸುತ್ತಿರುವುದು ಸಂತಸದ ಸಂಗತಿ ಎಂದರು. ಈ ವೇಳೆ ಆಪ್ತ ಸಮಾಲೋಚಕರಾದ ಡಿ.ಎನ್.ಚಂದ್ರಶೇಖರ, ಪ್ರಶಾಂತ ನವಲೆ, ಮಮತಾ, ಎನ್‌ಸಿಸಿ ಲೆಫ್ಟಿನೆಂಟ್ ಡಿ.ಬಿ.ಕುಸಗೂರ ಹಾಗೂ ಇನ್ನಿತರರಿದ್ದರು.