ಉತ್ಸವ ಮಾದರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸೋಣ: ಗಾಲಿ ಜನಾರ್ದನ ರೆಡ್ಡಿ

| Published : Mar 03 2025, 01:46 AM IST

ಉತ್ಸವ ಮಾದರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸೋಣ: ಗಾಲಿ ಜನಾರ್ದನ ರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಸಮ್ಮೇಳನವನ್ನು ಗಂಗಾವತಿಯಲ್ಲಿ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಗಂಗಾವತಿಯ ಎಲ್ಲ ಇಲಾಖೆಯ ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸುವ ಮೂಲಕ ಕಸಾಪ ಸಮ್ಮೇಳನವನ್ನು ಉತ್ಸವದ ಮಾದರಿಯಲ್ಲಿ ಆಚರಣೆ ಮಾಡಲು ಸಹಕರಿಸಬೇಕು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಗಂಗಾವತಿ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಂಗಾವತಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಗಂಗಾವತಿಯ ಎಲ್ಲ ಇಲಾಖೆಯ ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಮ್ಮೇಳನವನ್ನು ಉತ್ಸವದ ಮಾದರಿಯಲ್ಲಿ ಆಚರಣೆ ಮಾಡಲು ಸಹಕರಿಸಬೇಕು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ನಗರದ ತಾಪಂ ಆವರಣದ ಮಂಥನ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ಕುರಿತು ಭಾನುವಾರ ಹಮ್ಮಿಕೊಂಡ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಂಗಾವತಿಯಲ್ಲಿ ಮಾ. 27 ಹಾಗೂ 28 ಎರಡು ದಿನಗಳ ಕಾಲ ಆಚರಣೆ ಮಾಡಲು ನಿರ್ಧರಿಸಿದ್ದು, ಸಂತಸದ ವಿಷಯವಾಗಿದೆ. ಕನ್ನಡ ಭಾಷೆ, ನೆಲ, ಜಲವನ್ನು ಕಟ್ಟುವ ಬೆಳೆಸುವ ಕೆಲಸ ಇದಾಗಿದ್ದು, ನಾವೆಲ್ಲರೂ ಜಿಲ್ಲಾ ಸಮ್ಮೇಳವನ್ನು ಅದ್ಧೂರಿಯಾಗಿ ಆಚರಣೆ ಮಾಡಬೇಕಾಗಿದೆ. ಸಮ್ಮೇಳನ ಎನ್ನುವ ರೀತಿಯಲ್ಲಿ ಆಚರಣೆ ಮಾಡದೆ ಉತ್ಸವದ ಮಾದರಿಯಲ್ಲಿ ಹಮ್ಮಿಕೊಳ್ಳೋಣ. ಅದಕ್ಕೆ ಅಧಿಕಾರಿಗಳ ಸಹಕಾರ ಅತಿಮುಖ್ಯವಾಗಿದೆ. ಪ್ರತಿಯೊಬ್ಬ ಅಧಿಕಾರಿಯೂ ಸ್ವಯಂ ಪ್ರೇರಣೆಯಿಂದ ಸಮ್ಮೇಳನದಲ್ಲಿ ಭಾಗವಹಿಸಬೇಕಾಗಿದೆ. ಸಮ್ಮೇಳನ ಅಚ್ಚುಕಟ್ಟಾಗಿ ನಡೆಸಬೇಕು ಎನ್ನುವ ಉದ್ದೇಶದಿಂದ ಸಮಿತಿಗಳನ್ನು ರಚನೆ ಮಾಡಲಾಗುವುದು. ಸಮಿತಿಯಲ್ಲಿ ಇರುವ ಅಧಿಕಾರಿಗಳು ಸ್ವಯಂ ಪ್ರೇರಣೆಯಿಂದ ಕೆಲಸದಲ್ಲಿ ತೊಡಗಿಕೊಳ್ಳಬೇಕು. ವೇದಿಕೆ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಗೋಷ್ಠಿಗಳು, ವಿಚಾರ ಸಂಕೀರ್ಣಗಳನ್ನು ನಡೆಸಲಾಗುವುದು. ಈ ಕಾರ್ಯಕ್ರಮ ಯಶಸ್ವಿಗೆ ಪ್ರತಿಯೊಬ್ಬರೂ ಸಹಕರಿಸಬೇಕು. ಇನ್ನೂ ಕಸಾಪ ಜಿಲ್ಲಾ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳು ಸಕ್ರಿಯವಾಗಿ ಯೋಜನೆಯ ಹಾಕಿಕೊಂಡು ಸಿದ್ಧತೆಯಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.

ಆನೆಗೊಂದಿ ಉತ್ಸವ ಅನುಮಾನ: ವಿಜಯನಗರ ಕಾಲದ ಇತಿಹಾಸವನ್ನು ಹೊಂದಿರುವ ಆನೆಗೊಂದಿ ಉತ್ಸವ ಆಚರಣೆಗೆ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ. ಆನೆಗೊಂದಿ ಉತ್ಸವವನ್ನು ಸರ್ಕಾರ ಮಾಡುವುದು ಅನುಮಾನ. ಆನೆಗೊಂದಿ ಉತ್ಸವಕ್ಕೆ ಸರ್ಕಾರ ಆಸಕ್ತಿ ತೋರಿಸದೆ ಇದ್ದರೂ ನಾವು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉತ್ಸವ ರೀತಿಯಲ್ಲಿ ಆಚರಣೆ ಮಾಡಿ, ನಮ್ಮ ನಾಡಿನ ಜಾನಪದ ಕಲಾವಿದರಿಗೆ, ನಾಟಕಗಳ ಕಲಾವಿದರಿಗೆ, ಸ್ಥಳೀಯ ಸಂಗೀತಗಾರಿಗೆ ಅವಕಾಶ ನೀಡುತ್ತೇವೆ. ಕೆಲವು ಚಿತ್ರನಟರನ್ನು ಸಮ್ಮೇಳನಕ್ಕೆ ಕರೆಸಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಆಲೋಚನೆ ಮಾಡಲಾಗುವುದು ಎಂದು ಹೇಳಿದರು.

ತಹಸೀಲ್ದಾರ್‌ ಯು. ನಾಗರಾಜ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀದೇವಿ, ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ, ನಗರಸಭೆ ಅಧ್ಯಕ್ಷ ಮೌಲಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಹಾಗೂ ಅಧಿಕಾರಿಗಳು ಇದ್ದರು.