ಸದೃಢ ಭಾರತ ನಿರ್ಮಾಣಕ್ಕೆ ಕೈ ಜೋಡಿಸೋಣ: ಶಾಸಕ ಶ್ರೀನಿವಾಸ ಮಾನೆ

| Published : Jan 29 2024, 01:30 AM IST

ಸದೃಢ ಭಾರತ ನಿರ್ಮಾಣಕ್ಕೆ ಕೈ ಜೋಡಿಸೋಣ: ಶಾಸಕ ಶ್ರೀನಿವಾಸ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಇಡೀ ದೇಶದ ಹಿತಕ್ಕೆ ಮೊದಲ ಆದ್ಯತೆಯಾಗಿ ಕೃಷಿಕರನ್ನು ಸದೃಢಗೊಳಿಸಬೇಕು.

ಕನ್ನಡಪ್ರಭ ವಾರ್ತೆ ಹಾನಗಲ್ಲ

ಸ್ವತಂತ್ರ ಭಾರತವನ್ನು ಸಶಕ್ತ ಭಾರತವನ್ನಾಗಿ ರೂಪಿಸಲು ವಿಶ್ವಮಾನ್ಯ ಸಂವಿಧಾನ ನೀಡಿದ ಡಾ. ಬಿ.ಆರ್. ಅಂಬೇಡ್ಕರ್‌ ಅವರ ಶ್ರಮ ಸಾರ್ಥಕವಾಗಿದ್ದು, ಸದೃಢ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸೋಣ ಎಂದು ಶಾಸಕ ಶ್ರೀನಿವಾಸ ಮಾನೆ ಕರೆ ನೀಡಿದರು.

ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ ೭೫ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧತೆಯಲ್ಲಿ ಏಕತೆ ಸಮಾನತೆ ನಮ್ಮ ದೇಶದ ವಿಶೇಷತೆ. ಆದರೆ ಇಲ್ಲಿ ಕುತಂತ್ರಿಗಳ ಅಟ್ಟಹಾಸಕ್ಕೆ ಅವಕಾಶ ನೀಡುವುದು ಬೇಡ. ಇದಕ್ಕೆ ಯಾರು ಬಲಿಯಾಗುವುದೂ ಬೇಡ. ಇಡೀ ದೇಶದ ಹಿತಕ್ಕೆ ಮೊದಲ ಆದ್ಯತೆಯಾಗಿ ಕೃಷಿಕರನ್ನು ಸದೃಢಗೊಳಿಸಬೇಕು. ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ೧೦ ತಿಂಗಳಿನಲ್ಲಿ ಪ್ರತಿ ಮನೆಗಳಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಿ ನುಡಿದಂತೆ ನಡೆದಿದೆ ಎಂದರು.

ಹಾನಗಲ್ಲ ತಾಲೂಕಿಗೆ ಈ ಅವಧಿಯಲ್ಲಿ ₹೩೮ ಕೋಟಿ ಅಭಿವೃದ್ಧಿ ಅನುದಾನ ಬಿಡುಗಡೆಯಾಗಿದೆ. ತಾಲೂಕಿನ ೬೧ ಸಾವಿರ ಫಲಾನುಭವಿಗಳಿಗೆ ₹೭೩ ಕೋಟಿ ಅನುದಾನ ನೀಡಿಲಾಗಿದೆ. ಹಾನಗಲ್ಲ ತಾಲೂಕಿನ ಕಂದಾಯ ಇಲಾಖೆಯ ರೆಕಾರ್ಡ್‌ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಲಾಗುತ್ತಿದ್ದು, ಇನ್ನು ಮುಂದೆ ದಾಖಲೆಗಳಿಗಾಗಿ ಅಲೆದಾಡುವ ವಿಳಂಬವಾಗುವ ಸಂದರ್ಭಗಳೇ ಇಲ್ಲ. ಕೃಷಿ ಜಮೀನಿನ ಉತಾರಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಕೃಷಿ ಇಲಾಖೆ ಮೂಲಕ ರೈತರಿಗೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಶಾಲೆಗಳ ಅಭಿವೃದ್ಧಿಗೆ ಮುಂದಾಗಿದ್ದು ೫೦ ಪ್ರೌಢಶಾಲೆಗಳಿಗೆ ಸ್ಮಾರ್ಟ್‌ ಕ್ಲಾಸ್ ವ್ಯವಸ್ಥೆ ಮಾಡಲಾಗುತ್ತಿದೆ. ನನ್ನ ತಾಲೂಕಿನ ಜನತೆ ನೀಡಿದ ಸೇವಾ ಅವಕಾಶವನ್ನು ಸಮರ್ಥವಾಗಿ ನಿರ್ವಹಿಸಿ ಎಲ್ಲರ ಋಣ ತೀರಿಸುವೆ ಎಂದರು.

ತಾಲೂಕು ತಹಸೀಲ್ದಾರ ಎಸ್. ರೇಣುಕಮ್ಮ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ, ಬ್ರಿಟಿಷರು ಭಾರತ ಬಿಟ್ಟು ಹೋದ ಮಾತ್ರಕ್ಕೆ ದೇಶದ ಅಭಿವೃದ್ಧಿ ಸಾಧ್ಯವಾಗಲಿಲ್ಲ. ದೇಶದಲ್ಲಿ ಎಲ್ಲ ಸಮಾನತೆಗಾಗಿ ರೂಪಿಸಿದ ಸಂವಿಧಾನದ ನಡೆಯಿಂದಾಗಿ ಭಾರತ ಮುನ್ನಡೆ ಸಾಧಿಸಿದೆ. ಭಾರತ ಸಶಕ್ತವಾಗಬೇಕು. ಸಾಮಾಜಿಕ ನ್ಯಾಯ ನಮ್ಮೆಲ್ಲರ ಆದ್ಯತೆಯಾಗಬೇಕು. ವಿವಿಧತೆಯಲ್ಲಿ ಏಕತೆ ಸಾಧಿಸಿದ ಭಾರತದ ಭವಿತವ್ಯದ ಕನಸು ನನಸಾಗಲು ಎಲ್ಲರೂ ಒಟ್ಟಾಗಿ ಯೋಚಿಸಿ ಯೋಜಿಸಿ ಮುನ್ನಡೆಯಬೇಕು ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಗಣ್ಯರು, ಸಾಧಕರಿಗೆ ಸನ್ಮಾನ ನಡೆದವು. ವೇದಿಕೆಯಲ್ಲಿ ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.