ಸಾರಾಂಶ
ಅದ್ಭುತವಾದ ಬದುಕನ್ನು ಸಾಗಿಸಲು ನಾವು ನಿಸರ್ಗ ಒಪ್ಪಿಕೊಂಡು ಬದುಕಬೇಕು.
173ನೇ ಬೆಳಕಿನಡೆಗೆ ಮಾಸಿಕ ಕಾರ್ಯಕ್ರಮ, ಗವಿಸಿದ್ಧೇಶ್ವರ ಜಾತ್ರೆಗೆ ವಿದ್ಯುಕ್ತ ತೆರೆಕನ್ನಡಪ್ರಭ ವಾರ್ತೆ ಕೊಪ್ಪಳ
ಅದ್ಭುತವಾದ ಬದುಕನ್ನು ಸಾಗಿಸಲು ನಾವು ನಿಸರ್ಗ ಒಪ್ಪಿಕೊಂಡು ಬದುಕಬೇಕು ಎಂದು ಸಂತೆ ಕೆಲ್ಲೂರಿನ ಅನುಭಾವಿ ಪ್ರಶಾಂತ ದೇವರು ಹೇಳಿದರು.ನಗರದ ಗವಿಮಠದ ಕೆರೆಯ ದಡದಲ್ಲಿ ನಡೆದ 173ನೇ ಬೆಳಕಿನಡೆಗೆ ಮಾಸಿಕ ಕಾರ್ಯಕ್ರಮ ಹಾಗೂ ಗವಿಸಿದ್ಧೇಶ್ವರ ಜಾತ್ರೆಗೆ ವಿಧ್ಯುಕ್ತ ತೆರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಬದುಕಿನಲ್ಲಿ ಚಿಂತೆ ಮಾಡಿಕೊಂಡು ಬದುಕಬಾರದು. ಚಿತೆ ಸತ್ತವನನ್ನು ಸುಟ್ಟರೆ ಚಿಂತೆ ಬದುಕಿದ್ದವನನ್ನು ಸುಡುತ್ತದೆ. ಚಿಂತೆಯಿಂದ ಬದುಕಬಾರದು, ಸಂತೋಷದಿಂದ ಬದುಕಬೇಕು. ಈ ಜಗದಲ್ಲಿ ನಾವು ಖಾಯಂ ಇರಲಿಕ್ಕೆ ಬಂದಿಲ್ಲ. ದೇವರ ಮನೆಯಿದು ನಾವುಗಳೆಲ್ಲ ಬಾಡಿಗೆದಾರರು. ಯಾವತ್ತಿಗೂ ನಾವು ಗಂಟು ಹಾಕಿಕೊಳ್ಳುತ್ತಾ ಬದುಕಬಾರದು. ಗಂಟು ಬಿಡಿಸಿಕೊಳ್ಳುತ್ತಾ ಬದುಕಬೇಕು. ನಮ್ಮ ಮನಸ್ಸು ನಿಷ್ಕಲ್ಮಷವಾಗಿ ಇರಬೇಕು. ಅಂದಾಗ ಮಾತ್ರ ಸಾಮಾನ್ಯ ಮನುಷ್ಯನು ದೇವರಾಗುತ್ತಾನೆ. ಮನಸ್ಸಿನಲ್ಲಿ ಪ್ರೇಮ, ಪ್ರೀತಿ ಇರಬೇಕು. ಅದರಿಂದ ಜಗತ್ತು ಗೆಲ್ಲಬಹುದು ಎಂದರು.ಎಂ.ಎಸ್. ಶಾಂತಲಾ ಅವರ ಶಿವಲೀಲಾ ಕಲ್ಚರಲ್ ಚಾರಿ ಟೇಬಲ್ ಟ್ರಸ್ಟ್ ವತಿಯಿಂದ ಮಕ್ಕಳ ಮೂಲಕ ಭಕ್ತಿ ನೃತ್ಯ ರೂಪಕ ಸತ್ಯವೇ ಭಗವಂತ ಪುಣ್ಯಕೋಟಿ ನೃತ್ಯ ರೂಪಕ ಪ್ರದರ್ಶನವನ್ನು ಅದ್ಬುತವಾಗಿ ನಡೆಸಿಕೊಟ್ಟರು. ಈ ಸಂದರ್ಭ ಗವಿಸಿದ್ಧೇಶ್ವರ ಸ್ವಾಮಿಗಳು ನೃತ್ಯ ಮಾಡಿದ ಮಕ್ಕಳನ್ನು ಅಭಿನಂದಿಸಿದರು. ಈ ಸಂದರ್ಭ ಬಿಜಕಲ್ ವಿರಕ್ತಮಠದ ಶಿವಲಿಂಗ ಮಹಾಸ್ವಾಮಿಗಳು ಸೇರಿದಂತೆ ಅನೇಕರು ಇದ್ದರು. ಪ್ರಾರ್ಥನೆಯನ್ನು ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠ ಸಂಸ್ಥಾನ ಗವಿಮಠ ವಿದ್ಯಾರ್ಥಿಗಳು ನಡೆಸಿಕೊಟ್ಟರು.