ಶೋಷಣೆಯಿಂದ ಮುಕ್ತರಾಗಿ ಅಭಿವೃದ್ಧಿಯತ್ತ ಸಾಗೋಣ

| Published : Sep 18 2025, 01:10 AM IST

ಸಾರಾಂಶ

ಔದ್ಯೋಗಿಕ ಮತ್ತು ಶೈಕ್ಷಣಿಕವಾಗಿ ೩೭೧-ಜೆಯನ್ನು ಸಮಪರ್ಕವಾಗಿ ಬಳಸಿಕೊಳ್ಳುವ ಮೂಲಕ ಈ ಭಾಗದ ಜನರು ಸರ್ಕಾರದ ಸೌಲಭ್ಯ ಬಳಸಿಕೊಂಡು ಸಮಗ್ರ ಅಭಿವೃದ್ಧಿಗೆ ಪಣ ತೊಡಬೇಕು.

ಕಾರಟಗಿ:

ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕ, ಔದ್ಯೋಗಿಕ ಮತ್ತು ಸಾಮಾಜಿಕವಾಗಿ ಬೆಳೆಯುವ ಮೂಲಕ ಹಿಂದುಳಿದ ಪ್ರದೇಶ ಎನ್ನುವ ಶೋಷಣೆಯ ಪದದಿಂದ ಮುಕ್ತರಾಗಬೇಕಾಗಿದ್ದು, ಈ ನಿಟ್ಟಿನಲ್ಲಿ ಯೋಚಿಸಿ ಕಾರ್ಯರೂಪಕ್ಕೆ ತರಲು ಕಲ್ಯಾಣ ಕರ್ನಾಟಕ ಮುನ್ನಡೆಸೋಣ ಎಂದು ತಹಸೀಲ್ದಾರ್ ಎಂ. ಕುಮಾರಸ್ವಾಮಿ ಕರೆ ನೀಡಿದರು.

ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಶ್ರೀಸಿದ್ದೇಶ್ವರ ಬಯಲು ರಂಗಮಂದಿರದಲ್ಲಿ ತಾಲೂಕು ಆಡಳಿತದಿಂದ ಬುಧವಾರ ನಡೆದ ೭೮ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರೆವೇರಿಸಿ ಮಾತನಾಡಿದರು.

ಹೈದರಾಬಾದಾದ್ ಕರ್ನಾಟಕ ಸೆ. ೧೭, ೧೯೪೮ರಂದು ನಿಜಾಮನ ಶೋಷಣೆಯಿಂದ ಸ್ವಾತಂತ್ರ್ಯ ಪಡೆದು ಭಾರತದ ಒಕ್ಕೂಟದ ಭಾಗವಾಯಿತು. ಈ ವಿಲಿನ ಪ್ರಕ್ರಿಯೆಯಲ್ಲಿ ಸಾಕಷ್ಟು ಮಹನೀಯರ ಸಾವು-ನೋವು ಸಂಭವಿಸಿದವು ಎಂದ ಅವರು, ಹೈದರಾಬಾದ್ ಕರ್ನಾಟಕ ಒಂದು ನಿರ್ದಿಷ್ಟ ವ್ಯಾಪ್ತಿ ಪ್ರದೇಶವಾಗಿದ್ದು ಎರಡೂವರೆ ಶತಮಾನ ನಿಜಾಮರ ಆಡಳಿತಕ್ಕೆ ಒಳಪಟ್ಟಿತು ಎಂದು ತಿಳಿಸಿದರು.

ಔದ್ಯೋಗಿಕ ಮತ್ತು ಶೈಕ್ಷಣಿಕವಾಗಿ ೩೭೧-ಜೆಯನ್ನು ಸಮಪರ್ಕವಾಗಿ ಬಳಸಿಕೊಳ್ಳುವ ಮೂಲಕ ಈ ಭಾಗದ ಜನರು ಸರ್ಕಾರದ ಸೌಲಭ್ಯ ಬಳಸಿಕೊಂಡು ಸಮಗ್ರ ಅಭಿವೃದ್ಧಿಗೆ ಪಣ ತೊಡಬೇಕು ಎಂದು ಕರೆ ನೀಡಿದರು.

ತಾಪ ಇಒ ಲಕ್ಷ್ಮಿದೇವಿ, ಪಂಚಗ್ಯಾರಂಟಿ ಯೋಜನೆ ಅಧ್ಯಕ್ಷ ದೇವಪ್ಪ ಬಾವಿಕಟ್ಟಿ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ನಾಯಕ ಉಪನ್ಯಾಸ ನೀಡಿದರು. ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೇಕಾರ ಪ್ರಾಸ್ತಾವಿಕ ಮಾತನಾಡಿ, ಸರ್ದಾರ್‌ ವಲ್ಲಭಬಾಯಿ ಪಟೇಲ್‌ರ ದಿಟ್ಟ ನಿರ್ಧಾರದಿಂದ ಹೈದರಾಬಾದ್‌ ಪ್ರಾಂತ್ಯಕ್ಕೆ ಪ್ರತ್ಯೇಕ ಸ್ವಾತಂತ್ರ್ಯ ದೊರೆತ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ೨೦೧೯ರಲ್ಲಿ ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿ ಘೋಷಿಸಿದ ಹಿನ್ನೆಲೆ ಕಳೆದ ಕೆಲ ವರ್ಷದಿಂದ ಸೆ. ೧೭ರಂದು ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲಾಗುತ್ತಿದೆ ಎಂದರು.

ಶಿಕ್ಷಕ ಮೆಹಬೂಬ ಕಿಲ್ಲೇದಾರ ಹಾಗೂ ಸಂಪ್ರಿತ್ ಕಲಾಬಳಗ ರೈತ ಗೀತೆ ಹಾಗೂ ನಾಡಗೀತೆ ಹಾಡಿತು. ಗಣ್ಯರು ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸರ್ದಾರ ವಲ್ಲಭಬಾಯಿ ಪಟೇಲ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಧ್ವಜಾರೋಹಣ ನಂತರ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ವಿದ್ಯಾರ್ಥಿಗಳು ಗೌರವ ವಂದನೆ ಸಲ್ಲಿಸಿದರು. ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ಮಂಜುನಾಥ ಚಿಕೆನಕೊಪ್ಪ, ತಿಮ್ಮಣ್ಣ ನಾಯಕ, ಕಾರ್ಯಕ್ರಮ ನಿರ್ವಹಿಸಿದರು.

ಈ ವೇಳೆ ಪುರಸಭೆ ಅಧ್ಯಕ್ಷೆ ರೇಖಾ ಅನೆಹೊಸುರ, ಉಪಾಧ್ಯಕ್ಷೆ ದ್ಯಾವಮ್ಮ ಚಲವಾದಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ನಾಗರಾಜ ಅರಳಿ, ಪುರಸಭೆ ಸದಸ್ಯ ದೊಡ್ಡಬಸವರಾಜ ಬೂದಿ, ಪಿಎಸ್‌ಐ ಕಾಮಣ್ಣ, ಖಾಜಾ ಹುಸೇನ್ ಮುಲ್ಲಾ, ರೈತ ಸಂಘಟನೆ, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.