ಶುದ್ಧತೆ ಮೂಲಕ ಶಾಶ್ವತ ಸುಖದತ್ತ ಸಾಗೋಣ: ರಾಘವೇಶ್ವರ ಶ್ರೀ

| Published : Aug 29 2025, 01:00 AM IST

ಶುದ್ಧತೆ ಮೂಲಕ ಶಾಶ್ವತ ಸುಖದತ್ತ ಸಾಗೋಣ: ರಾಘವೇಶ್ವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಭಾಷೆ, ಸ್ವಭೂಷಾ, ಸ್ವದೇಶಿ ಚಿಂತನೆ ಮೂಲಕ ನಮ್ಮ ಜೀವನ, ಭಾಷೆ, ಹಬ್ಬ- ಆಚರಣೆಗಳನ್ನು ಶುದ್ಧೀಕರಿಸಿಕೊಂಡು ಶಾಶ್ವತ ಸುಖದತ್ತ ಮುಖ ಮಾಡೋಣ

ಗೋಕರ್ಣ: ಸ್ವಭಾಷೆ, ಸ್ವಭೂಷಾ, ಸ್ವದೇಶಿ ಚಿಂತನೆ ಮೂಲಕ ನಮ್ಮ ಜೀವನ, ಭಾಷೆ, ಹಬ್ಬ- ಆಚರಣೆಗಳನ್ನು ಶುದ್ಧೀಕರಿಸಿಕೊಂಡು ಶಾಶ್ವತ ಸುಖದತ್ತ ಮುಖ ಮಾಡೋಣ ಎಂದು ರಾಘವೇಶ್ವರ ಭಾರತೀ ಶ್ರೀ ನುಡಿದರು.ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು ೫೦ನೇ ದಿನವಾದ ಗುರುವಾರ ಶ್ಯಾಮಸೂರ್ಯ ಮುಳಿಗದ್ದೆ ಕುಟುಂಬದವರಿಂದ ಸರ್ವಸೇವೆ ಸ್ವೀಕರಿಸಿ ಗುರಿಕ್ಕಾರರ ಸಮಾವೇಶದಲ್ಲಿ ಆಶೀರ್ವಚನ ಅನುಗ್ರಹಿಸಿದರು.

ಗುರು-ಗಣಪತಿಯ ಸಾನ್ನಿಧ್ಯ ಜತೆ ಜತೆಗೆ ಸಿಗುವುದು ಅಪರೂಪ. ಗುರು ನಮ್ಮ ಬದುಕಿಗೆ ದಾರಿ ತೋರಿದರೆ, ಆ ದಾರಿಯಲ್ಲಿ ಯಾವುದೇ ವಿಘ್ನಗಳು ಬಾರದಂತೆ ನಿವಾರಿಸುವವನು ಗಣಪತಿ. ಗುರು- ಗಣಪತಿಯ ಅನುಗ್ರಹದಿಂದ ಎಲ್ಲರ ಬದುಕಿನಲ್ಲಿ ಶಾಶ್ವತ ಸುಖದ ದಾರಿ ತೆರೆದುಕೊಳ್ಳಲಿ ಎಂದು ಆಶಿಸಿದರು.

ಕೃಷಿಕರು ಕಳೆ ಕಿತ್ತು ತೋಟ ಸ್ವಚ್ಛಗೊಳಿಸುವಂತೆ ನಮ್ಮ ಭಾಷೆಯಲ್ಲಿ ಸೇರಿಕೊಂಡಿರುವ ಆಂಗ್ಲಪದಗಳನ್ನು ಬಿಡಬೇಕು. ಸ್ವಭಾಷೆಯನ್ನು ಶುದ್ಧಗೊಳಿಸುವುದು ವಾಗ್ಮಯ ತಪಸ್ಸು ಎಂದು ಬಣ್ಣಿಸಿದರು.

ದಿನಕ್ಕೊಂದು ಆಂಗ್ಲ ಪದ ತ್ಯಜಿಸುವ ಅಭಿಯಾನದಲ್ಲಿ ಟಿಕೆಟ್ ಪದ ಕೈಬಿಡುವಂತೆ ಸಲಹೆ ಮಾಡಿದರು. ಪುರಾತನ ಕಾಲದಿಂದಲೂ ಕನ್ನಡದಲ್ಲಿ ಚೀಟಿ ಪದ ವ್ಯಾಪಕ ಬಳಕೆಯಲ್ಲಿತ್ತು. ಇದನ್ನು ಮತ್ತೆ ಚಾಲ್ತಿಗೆ ತರಬೇಕು. ದೇಶವನ್ನು ಕೊಳ್ಳೆಹೊಡೆಯಲು, ದಬ್ಬಾಳಿಕೆ ಮಾಡಲು ಬಂದವರ ಶಬ್ದಗಳನ್ನು ಉಳಿಸಿಕೊಳ್ಳುವುದು ನಮ್ಮ ಸೋಲಿನ ಸಂಕೇತ; ದಾಸ್ಯದ ಸಂಕೇತ. ಭಾಷಾಸಂಕರ ಯಾವ ಭಾಷೆಗೂ ಶೋಭೆಯಲ್ಲ; ಇಂಗ್ಲಿಷ್ ಭಾಷೆಯನ್ನೂ ವಿಕಾರ ಮಾಡಿ ಮಾತನಾಡಬಾರದು. ಇಂಗ್ಲಿಷ್ ಪದಗಳು ಅವರ ಭಾಷೆ ಸೇರಿಕೊಳ್ಳಲಿ; ಕನ್ನಡದಲ್ಲಿ ನಮ್ಮ ಪದಗಳೇ ವಿಜೃಂಭಿಸಲಿ ಎಂದು ಆಶಿಸಿದರು.

ಭಾಷೆಯಂತೆ ನಮ್ಮ ಹಬ್ಬ- ಆಚರಣೆಗಳನ್ನೂ ಶುದ್ಧ ಮಾಡಿಕೊಳ್ಳುವ ಸಂದರ್ಭ ಬಂದಿದೆ. ಭಕ್ತಿ, ಆರಾಧನೆಯ ವಿಷಯವಾದ ಗಣಪತಿಯನ್ನು ಹಾಸ್ಯದ ವಸ್ತುವಾಗಿ ಇಂದು ಬಿಂಬಿಸಲಾಗುತ್ತಿದೆ. ಗಣಪತಿ ಹಬ್ಬದ ಆಚರಣೆಯನ್ನು ನೋಡಿದರೆ ವಿವಿಧ ಭಂಗಿಗಳ ಗಣಪತಿಯನ್ನು ಎಲ್ಲೆಂದರಲ್ಲಿ ಪ್ರತಿಷ್ಠಾಪಿಸಿ ಹಬ್ಬದ ಹೆಸರಿನ ಆಚರಣೆಗಳು ನಡೆಯುತ್ತವೆ. ಆದರೆ ಸಂಸ್ಕೃತಿಯ ಹೆಸರಿನಲ್ಲಿ ಇಂಥ ವಿಕೃತ ಸಲ್ಲದು ಎಂದು ವಿಶ್ಲೇಷಿಸಿದರು.

ಮೂಲಾಧಾರಚಕ್ರದಲ್ಲಿ ದರ್ಶನ ನೀಡಿವಂತೆ ಆ ರೂಪದಲ್ಲೇ ಗಣಪತಿಯನ್ನು ನಿರ್ಮಿಸಬೇಕು. ಗಣಪತಿ ಮೂರ್ತಿ ನಿರ್ಮಾಣದಲ್ಲೂ ಹಲವು ಅಪಚಾರಗಳು ನಡೆಯುತ್ತಿವೆ. ಗಣಪತಿಗೆ ಬಣ್ಣದ ಹೆಸರಿನಲ್ಲಿ ವಿಷ ಬಳಿಯಲಾಗುತ್ತದೆ. ಯಾವುದೇ ವಿಗ್ರಹಗಳನ್ನು ಶುದ್ಧ ದ್ರವ್ಯಗಳಿಂದ ಮಾಡಬೇಕೇ ವಿನಃ ಕಲುಷಿತ ದ್ರವ್ಯಗಳಿಂದ ಮಾಡಬಾರದು. ಅಶುಚಿ ಪ್ರದೇಶದಲ್ಲಿ ಗಣಪತಿಪ್ರತಿಷ್ಠಾಪಿಸುವುದೂ ನಿಷಿದ್ಧ; ಬಲವಂತದ ಸಂಗ್ರಹ, ಸುಲಿಗೆ, ವಿಕೃತಿಯ ಮೆರೆದಾಟ ನಡೆಯುತ್ತಿದೆ. ಇದರಿಂದ ಖಂಡಿತವಾಗಿಯೂ ಗಣಪತಿ ಸಂತುಷ್ಟನಾಗಲಾರ ಎಂದರು.

ಗಣಪತಿ ಹಬ್ಬದ ಸಂದರ್ಭದಲ್ಲಿ ಮಹಾಭಾರತ ಬರೆದ ಗಣಪತಿಯ ಅನುಗ್ರಹದೊಂದಿಗೆ ವಿಷ್ಣು ಸಹಸ್ರನಾಮ ಲೇಖನಯಜ್ಞದ ಮೂಲಕ ಗೋಲೋಕ ಪ್ರಕಲ್ಪದಲ್ಲಿ ಪಾಲ್ಗೊಳ್ಳುವ ಸಂಕಲ್ಪ ಕೈಗೊಳ್ಳಿ ಎಂದು ಕರೆ ನೀಡಿದರು.

ಇದು ಮಳೆಗಾಲ ಮಣ್ಣು ಮತ್ತು ನೀರಿನ ಸಮಯ. ಮೃಣ್ಮಯ ಗಣಪತಿಯ ಬಿಂಬ ನಿಮ್ಮ ಮುಂದಿದೆ. ಮಣ್ಣಿನ ಗಣಪ ಮತ್ತೆ ನೀರಿನಲ್ಲಿ ವಿಸರ್ಜನೆಗೊಳ್ಳುತ್ತಾನೆ. ಮೂಲಾಧಾರ ಚಕ್ರದಲ್ಲಿ ಹುಟ್ಟಿ, ಸ್ವಾಧಿಷ್ಟಾನದಲ್ಲಿ ಲೀನವಾಗುವುದು ಗಣಪತಿಯ ವಿಶೇಷ. ಚಾತುರ್ಮಾಸ್ಯ ಗುರು ಮತ್ತು ಗಣಪತಿಯ ಸಂಯೋಗ. ದಾರಿ ತೋರಿಸುವ ಗುರು ಮತ್ತು ವಿಘ್ನನಾಶಕ ಗಣಪತಿ ಸೇರಿರುವ ಅಪೂರ್ವ ಸಂದರ್ಭ ಎಂದು ಬಣ್ಣಿಸಿದರು.

ಶಿಷ್ಯರು ದೊಡ್ಡಸಂಖ್ಯೆಯಲ್ಲಿ ಬಂದು ಲಕ್ಷ ತುಳಸಿ ಅರ್ಚನೆ ಸಂಪನ್ನಗೊಳಿಸಿದ್ದಾರೆ. ಶಂಕರರ ಆದಿಯಾಗಿ ಗುರುಪರಂಪರೆಯ ಪ್ರೀತ್ಯರ್ಥವಾಗಿ ಇದು ನಡೆದಿದ್ದು, ಆರ್ಷವಿದ್ಯೆಗಳ ಅಧ್ಯಯನ- ಅಧ್ಯಾಪನ ನಡೆದ ಸ್ಥಳದಲ್ಲಿ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಶಾಸನತಂತ್ರ ಕಾರ್ಯದರ್ಶಿ ಕೆ.ಪಿ. ಎಡಪ್ಪಾಡಿ, ಚಾತುರ್ಮಾಸ್ಯ ತಂಡದ ಮಂಜುನಾಥ ಸುವರ್ಣದ್ದೆ, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಪದಾಧಿಕಾರಿಗಳಾದ ಈಶ್ವರ ಪ್ರಸಾದ್, ಕೃಷ್ಣಮೂರ್ತಿ ಮಾಡಾವು, ಮಂಗಳೂರು ಮಂಡಲ ಅಧ್ಯಕ್ಷ ಉದಯಶಂಕರ ನೀರ್ಪಾಜೆ, ಕಾರ್ಯದರ್ಶಿ ರಮೇಶ್ ಭಟ್ ಸರವು, ಮುಳ್ಳೇರಿಯಾ ಮಂಡಲ ಕಾರ್ಯದರ್ಶಿ ಕೆರೆಮೂಲೆ ಸುಬ್ರಹ್ಮಣ್ಯ ಭಟ್, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಅರವಿಂದ ಧರ್ಬೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಹೆಗಡೆ, ಎಂಜಿನಿಯರ್ ವಿಷ್ಣು ಬನಾರಿ ಮತ್ತಿತರರು ಉಪಸ್ಥಿತರಿದ್ದರು. ಗುರುಪರಂಪರಾ ಪ್ರೀತ್ಯರ್ಥವಾಗಿ ಹಮ್ಮಿಕೊಂಡಿರುವ ಲಕ್ಷತುಳಸಿ ಅರ್ಚನೆಯ ಏಳನೇ ದಿನ ಗುರುವಾರ ಸಂಪನ್ನಗೊಂಡಿತು.