ಸಾರಾಂಶ
ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಭಕ್ತ ಹಿತ ಚಿಂತನಾ ಸಭೆ । ಮುದೇನೂರು ನಿಂಗಪ್ಪಗೆ ಗವಿಶ್ರೀ ಪ್ರಶಸ್ತಿ ಪ್ರದಾನಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ಬಸವಾದಿ ಶರಣರು ತಮ್ಮ ವಚನಗಳ ಮೂಲಕ ನಮಗೆಲ್ಲ ಕಾಯಕ ತತ್ವ ಹಾಗೂ ದಾಸೋಹ ಮಹತ್ವ ಸಾರಿದ್ದಾರೆ. ಅಂತಹ ಪರಂಪರೆಯನ್ನು ಎಲ್ಲರೂ ಉಳಿಸಿ ಬೆಳೆಸಿಕೊಳ್ಳಬೇಕಿದೆ ಎಂದು ಲಿಂಗನಾಯಕನಹಳ್ಳಿ ಜಂಗಮಕ್ಷೇತ್ರದ ಚನ್ನವೀರ ಸ್ವಾಮೀಜಿ ಹೇಳಿದರು.ಪಟ್ಟಣದ ಶಾಖಾ ಗವಿಸಿದ್ದೇಶ್ವರ ಸ್ವಾಮಿಯ 30ನೇ ವರ್ಷದ ಜಾತ್ರೆ ಅಂಗವಾಗಿ ಸೋಮವಾರ ರಾತ್ರಿ ಆಯೋಜಿಸಿದ್ದ, ಭಕ್ತ ಹಿತ ಚಿಂತನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಯಕ ಮತ್ತು ದಾಸೋಹ ತತ್ವಗಳು ನಮ್ಮ ಆತ್ಮ ಗೌರವದ ಪ್ರತೀಕವಾಗಿವೆ. ಮಠ ಮಾನ್ಯಗಳು ಧಾರ್ಮಿಕ, ಕಾಯಕದ ಬಗ್ಗೆ ಅರಿವು ಮೂಡಿಸುವ ಜತೆಗೆ ದಾಸೋಹ ಕಾರ್ಯವನ್ನು ಮುನ್ನೆಡೆಸಿಕೊಂಡು ಬಂದಿವೆ.
ಶರಣರ ಚಿಂತನೆಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಾಗ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.ಸಾನ್ನಿಧ್ಯ ವಹಿಸಿದ್ದ ನಾಡೋಜ ಮುಂಡರಗಿಯ ಡಾ. ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ಶ್ರೀಮಠದ ಲಿಂಗೈಕ್ಯ ಲಿಂಗೇಶ್ವರ ಸ್ವಾಮೀಜಿಯವರ ಆಶೋತ್ತರಗಳನ್ನು ಶ್ರೀಮಠದ ಡಾ. ಹಿರಿಶಾಂತವೀರ ಸ್ವಾಮೀಜಿ ಈಡೇರಿಸುತ್ತಿದ್ದಾರೆ. ಇವರ ಕರ್ತೃತ್ವ ಶಕ್ತಿ ಮತ್ತು ಭಕ್ತರ ಸಹಕಾರದಿಂದ ಎಲ್ಲ ಶಾಖಾ ಮಠಗಳು ಜಾಗೃತಗೊಂಡಿವೆ ಎಂದ ಅವರು, ಪ್ರತಿಯೊಬ್ಬರು ಧರ್ಮಪ್ರಜ್ಞೆ ಬೆಳೆಸಿಕೊಂಡು ಮೋಕ್ಷ ಪಡೆಯಬೇಕೆಂದು ಹೇಳಿದರು.
ಶ್ರೀಮಠದ ಗವಿಶ್ರೀ ಪ್ರಶಸ್ತಿ ಸ್ವೀಕರಿಸಿದ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕ ಡಾ.ನಿಂಗಪ್ಪ ಮುದೇನೂರು ಮಾತನಾಡಿ, ನನಗೆ ಶ್ರೀಮಠದಿಂದ ನೀಡಲಾಗುತ್ತಿರುವ ಪ್ರಶಸ್ತಿಯು, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಇತರೆ ಪುರಸ್ಕಾರಗಳಿಗಿಂತ ದೊಡ್ಡ ಪ್ರಶಸ್ತಿಯಾಗಿದೆ. ಇದರಿಂದ ನನ್ನ ಬದುಕನ್ನು ಸಾರ್ಥಕಗೊಳಿಸಿದೆ. ನನ್ನೊಳಗೆ ನೈತಿಕತೆಯ ಬೆಳಕು ನೀಡಿದೆ. ಇಲ್ಲಿನ ಗವಿಮಠವು ಮಕ್ಕಳಿಗೆ ಸಂಸ್ಕಾರ ನೀಡುವ ಜತೆಗೆ ಪ್ರತಿಭೆ ಬೆಳಗಲು ಸಹಕಾರಿಯಾಗಿದೆ ಎಂದರು.ಕೃತಕ ಬುದ್ದಿಮತ್ತೆ (ಎಐ) ತಂತ್ರಜ್ಞಾನವನ್ನು ನಾವು ಈಗ ಸಂಭ್ರಮಿಸುತ್ತೇವೆ. ಆದರೆ, ಅದು ನಮ್ಮ ಬುದ್ದಿಶಕ್ತಿಯನ್ನು ಕುಬ್ಜಗೊಳಿಸುತ್ತದೆ. ಮನುಷ್ಯನ ಮೆದುಳಿನ ಮೇಲೆ ತನ್ನ ಅಧಿಕಾರ ಸ್ಥಾಪಿಸಲಿದೆ. ದುಡಿಯುವ ಶ್ರಮ ಕಡಿಮೆಗೊಳಿಸಿ ಹಲವರ ಉದ್ಯೋಗ ಕಸಿಯಲಿದೆ. ಮುಂದಿನ ಪೀಳಿಗೆಗೆ ಇದು ಕಂಟಕವಾಗಲಿದೆ ಎಂದರು.
ಇಂತಹ ಕೆಡುಕುಗಳಿಗೆ ಮದ್ದು ನೀಡುವ ಕೆಲಸವನ್ನು ಮಠಗಳು ಹಾಗೂ ಧರ್ಮಗುರುಗಳು ಮಾಡುತ್ತಿದ್ದಾರೆ. ಸಾಮಾಜಿಕ, ಧಾರ್ಮಿಕ ಸೇವಾ ಕೈಂಕರ್ಯಗಳ ಮೂಲಕ ಮಠಮಾನ್ಯಗಳು ಸಮುದಾಯಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿವೆ ಎಂದರು.ಇಲ್ಲಿನ ಶಾಖಾ ಗವಿಸಿದ್ದೇಶ್ವರ ಮಠದ 30ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ಶ್ರೀಮಠದಿಂದ ನೀಡುವ ಗವಿಶ್ರೀ ಪ್ರಶಸ್ತಿಯನ್ನು ಈ ಬಾರಿ ಧಾರವಾಡದ ಕವಿವಿ ಡಾ. ಆರ್.ಸಿ ಹಿರೇಮಠ ಕನ್ನಡ ಅಧ್ಯಾಯನ ಪೀಠದ ಸಹಾಯಕ ಪ್ರಧ್ಯಾಪಕ ಡಾ. ಮುದೇನೂರು ನಿಂಗಪ್ಪ ಇವರಿಗೆ ನೀಡಿ ಗೌರವಿಸಲಾಯಿತು.
ಗವಿಸಿದ್ದೇಶ್ವರ ಮಠದ ಡಾ. ಹಿರಿಶಾಂತವೀರ ಸ್ವಾಮೀಜಿ, ಮಲ್ಲನಕೆರೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಮೈನಳ್ಳಿಯ ಸಿದ್ದೇಶ್ವರ ಸ್ವಾಮೀಜಿ, ಇಟಗಿಯ ಗುರುಶಾಂತ ಸ್ವಾಮೀಜಿ, ಹೆಬ್ಬಾಳ ನಾಗಭೂಷಣ ಸ್ವಾಮೀಜಿ, ಮಂಗಳೂರಿನ ಸಿದ್ದಲಿಂಗ ಸ್ವಾಮೀಜಿ, ಅಗಡಿಯ ಗುರುಸಿದ್ದ ಸ್ವಾಮೀಜಿ, ಹೊಳಲಿನ ಮಲ್ಲಿಕಾರ್ಜುನ ದೇವರು ಸಾನ್ನಿಧ್ಯ ವಹಿಸಿದ್ದರು.ಭಕ್ತಿಸೇವೆ ಸಲ್ಲಿಸಿದ ಭಕ್ತರಿಗೆ ಗುರುರಕ್ಷೆ ನೀಡಲಾಯಿತು. ಗವಿಶ್ರೀ ಅಕ್ಕನ ಬಳಗದವರಿಂದ ಸುಧಾಮ ಕೃಷ್ಣರ ಗೆಳೆತನ ಕಿರುನಾಟಕ ಪ್ರದರ್ಶನ ಮಾಡಿದರು.