ಬಂಡವಾಳಶಾಹಿಗಳಿಂದ ನೆಲ, ಜಲ ರಕ್ಷಣೆಯಾಗಲಿ: ಪೂಜಾರ

| Published : Jan 29 2025, 01:32 AM IST

ಬಂಡವಾಳಶಾಹಿಗಳಿಂದ ನೆಲ, ಜಲ ರಕ್ಷಣೆಯಾಗಲಿ: ಪೂಜಾರ
Share this Article
  • FB
  • TW
  • Linkdin
  • Email

ಸಾರಾಂಶ

ಸಿಪಿಐಎಂಎಲ್‌ ಮಾಸ್ ಲೈನ್ ಕೊಪ್ಪಳ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ವಾರ್ಷಿಕ ಸ್ಥಾಯಿ ನಿಧಿ ಆಂದೋಲನ ಕಾರ್ಯಕ್ರಮ ನಡೆಯಿತು. ರಾಜ್ಯ ಕಾರ್ಯದರ್ಶಿ ಡಿ.ಎಚ್. ಪೂಜಾರ ಕಾರ್ಯಕ್ರಮ ಉದ್ಘಾಟಿಸಿದರು.

ಸಿಪಿಐಎಂಎಲ್‌ ಮಾಸ್ ಲೈನ್ ವಾರ್ಷಿಕ ಸ್ಥಾಯಿ ನಿಧಿ ಆಂದೋಲನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊಪ್ಪಳ

ಸಿಪಿಐಎಂಎಲ್‌ ಮಾಸ್ ಲೈನ್ ಕೊಪ್ಪಳ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ವಾರ್ಷಿಕ ಸ್ಥಾಯಿ ನಿಧಿ ಆಂದೋಲನ ಕಾರ್ಯಕ್ರಮ ನಡೆಯಿತು. ರಾಜ್ಯ ಕಾರ್ಯದರ್ಶಿ ಡಿ.ಎಚ್. ಪೂಜಾರ ಕಾರ್ಯಕ್ರಮ ಉದ್ಘಾಟಿಸಿದರು.

ಆ ನಂತರ ಮಾತನಾಡಿದ ಅವರು, ನೆಲ, ಜಲ ಲೂಟಿ ಮಾಡುವ ಕಾರ್ಪೊರೇಟ್ ಬಂಡವಾಳಿಗರಿಂದ ರಕ್ಷಿಸಬೇಕಾಗಿದೆ. ನಿರುದ್ಯೋಗ, ಬಡತನ ಮತ್ತು ಹಸಿವು ಮುಕ್ತ ಸಮಾಜಕ್ಕಾಗಿ ಹೋರಾಡಬೇಕಾಗಿದೆ. ಶಾಂತಿ ಸೌಹಾರ್ದಕ್ಕಾಗಿ ಶ್ರಮಿಸಬೇಕು ಎಂದು ಹೇಳಿದರು.

ನವ ಉದಾರೀಕರಣ ನೀತಿಗಳನ್ನು ಆಕ್ರಮಣಕಾರಿಯಾಗಿ ಜಾರಿಗೊಳಿಸಿದ್ದರಿಂದ ದೇಶದ ಆರ್ಥಿಕತೆ ನಿರಂತರವಾಗಿ ಕುಸಿಯುತ್ತಾ ಸಾಗಿದೆ. ಇನ್ನೊಂದು ಕಡೆ ಕಾರ್ಪೊರೇಟ್ ಕಂಪನಿಗಳ ಮತ್ತು ದೊಡ್ಡ ಶ್ರೀಮಂತರ ಕೈಯಲ್ಲಿ ಸಂಪತ್ತಿನ ಕೇಂದ್ರೀಕರಣ ಮಿತಿ ಮೀರಿದೆ. 2014ರಲ್ಲಿ ₹53 ಲಕ್ಷ ಕೋಟಿ ಇದ್ದ ದೇಶದ ಸಾಲ ಕಳೆದ 11 ವರ್ಷಗಳಲ್ಲಿ ₹198 ಲಕ್ಷ ಕೋಟಿಗೆ ಏರಿಕೆಯಾಗಿದೆ. 2014ರಲ್ಲಿ ₹80 ಸಾವಿರ ಕೋಟಿ ಇದ್ದ ಅದಾನಿ ಸಂಪತ್ತು, 2024ಕ್ಕೆ ₹20 ಲಕ್ಷ ಕೋಟಿಗೆ ಹೆಚ್ಚಳವಾಗಿದೆ. ಪ್ರಸಕ್ತ ವರ್ಷ ದೇಶದ ಆಂತರಿಕ ಉತ್ಪನ್ನ (ಜಿಡಿಪಿ) ಶೇ. 5.4 ಕುಸಿದಿದೆ ಎಂದರು.

1 ಡಾಲರ್ ಎದುರು ₹85 ಕುಸಿತ ಉಂಟಾಗಿದೆ. ಹಸಿವಿನ ಸೂಚ್ಯಂಕದಲ್ಲಿ ಜಗತ್ತಿನ 127 ದೇಶಗಳಲ್ಲಿ ಭಾರತ 105ನೇ ಸಾಲಿನಲ್ಲಿದೆ. ದೇಶದ 40 ಪ್ರತಿಶತ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಗ್ರಾಮೀಣ ಭಾಗದ ಪ್ರತಿಶತ 45ರಷ್ಟು ಜನರಿಗೆ ಪ್ರತಿದಿನ ಎರಡು ಹೊತ್ತಿನ ಊಟದ ಭದ್ರತೆ ಇಲ್ಲವಾಗಿದೆ. ಗುತ್ತಿಗೆ ಕಾರ್ಮಿಕ ಕಾಯ್ದೆ ಜಾರಿಯಿಂದ ಜನರು ಕನಿಷ್ಠ ವೇತನಕಿಂತ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ರೈತರ ಕೃಷಿಗೆ ಸಬ್ಸಿಡಿ ಮತ್ತು ಪ್ರೋತ್ಸಾಹಧನ ನಿಲ್ಲಿಸಿದ್ದರಿಂದ ರೈತರು ನಿರಂತರವಾಗಿ ನಷ್ಟಕ್ಕೊಳಗಾಗುತ್ತಿದ್ದಾರೆ ಎಂದರು.

ಸಿಪಿಐಎಂಎಲ್‌ ಮಾಸ್ ಲೈನ್ ಕಳೆದ 30 ವರ್ಷಗಳಿಂದ ದೇಶದ ಹಿತಕ್ಕಾಗಿ ಸಮಾಜದ ಬದಲಾವಣೆಗಾಗಿ ಹೋರಾಡುತ್ತಿದೆ. ಪ್ರತಿವರ್ಷದಂತೆ ಈ ವರ್ಷವು ಜ. 23ರಿಂದ ಫೆ. 13ರ ವರೆಗೆ ವಾರ್ಷಿಕ ಸ್ಥಾಯಿ ನಿಧಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಕ್ಷದ ಎಲ್ಲ ಹೋರಾಟಗಳಿಗೆ ನೈತಿಕ ಬೆಂಬಲ ಕೊಡಬೇಕು ಎಂದು ಕೋರಲಾಗಿದೆ ಎಂದರು.

ಜಿಲ್ಲಾ ಕಾರ್ಯದರ್ಶಿ ಬಸವರಾಜ ನರೇಗಲ್, ಶಾಮಿದ ಸಾಬ್, ನಿರೂಪಾದಿ, ಶರಣಪ್ಪ, ದ್ಯಾಮಮ್ಮ ತಾವರಗೇರ, ಬಸಪ್ಪ, ಮಲ್ಲಪ್ಪ, ಪರಶುರಾಮ ಭಾಗವಹಿಸಿದ್ದರು.