ಸಾರಾಂಶ
ಮಕ್ಕಳ ರಕ್ಷಣೆಗೆ ಕಾಯ್ದೆ-ಕಾನೂನು ರೂಪಿಸುವುದು ಮಾತ್ರವಲ್ಲದೇ, ಅವರ ಬೆಳವಣಿಗೆಗೆ ಉತ್ತಮ ಪರಿಸರವನ್ನು ಸಹ ನೀಡಬೇಕಿದೆ.
ಮಕ್ಕಳ ರಕ್ಷಣೆಗೆ ಕಾನೂನುಗಳು ಪುಸ್ತಕ ಬಿಡುಗಡೆ ಸಮಾರಂಭ
ಕನ್ನಡಪ್ರಭವಾರ್ತೆ ಬಳ್ಳಾರಿಮಕ್ಕಳ ರಕ್ಷಣೆಗೆ ಕಾಯ್ದೆ-ಕಾನೂನು ರೂಪಿಸುವುದು ಮಾತ್ರವಲ್ಲದೇ, ಅವರ ಬೆಳವಣಿಗೆಗೆ ಉತ್ತಮ ಪರಿಸರವನ್ನು ಸಹ ನೀಡಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಕೆ.ಜಿ ಶಾಂತಿ ತಿಳಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರೀಡ್ಸ್ ಸಂಸ್ಥೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಮತ್ತು ಅರಣ್ಯ ಇಲಾಖೆ ಬಳ್ಳಾರಿ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ನ್ಯಾಯಾಲಯದ ವಿಸಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಕ್ಕಳ ರಕ್ಷಣೆಗೆ ಕಾನೂನುಗಳು ಎಂಬ ಪುಸ್ತಕ ಬಿಡುಗಡೆಗೊಳಿಸಿ, ಬಳಿಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳು ದೇವರ ಸಮಾನ. ಅವರು ಬೆಳವಣಿಗೆಯ ಪೂರಕವಾದ ಮನೆ, ಶಾಲೆ ವಾತಾವರಣದ ಸುತ್ತಮುತ್ತಲಿನಲ್ಲಿ ಗುಣಮಟ್ಟದ ಪರಿಸರ ಕಲ್ಪಿಸಬೇಕಿದೆ ಎಂದರು.ದೇಶದಲ್ಲಿ ಬಾಲಕಾರ್ಮಿಕರು, ಭಿಕ್ಷಾಟನೆ, ಮಾನವ ಕಳ್ಳ ಸಾಗಾಣಿಕೆ, ಬಾಲ್ಯ ವಿವಾಹ, ಪೋಕ್ಸೋದಂತಹ ಬೆಳವಣಿಗೆಗಳು ಕಂಡುಬರುತ್ತಿರುವುದು ವಿಷಾದನೀಯ ಸಂಗತಿಯಾಗಿದ್ದು, ಬಡತನ ಮತ್ತು ಶಿಕ್ಷಣ ಕೊರತೆ ಪ್ರಮುಖ ಕಾರಣವಾಗಿದೆ ಎಂದರು.ಮಕ್ಕಳ ರಕ್ಷಣೆಯಲ್ಲಿ ಎನ್ ಜಿಒಗಳ ಪಾತ್ರವೂ ಸಹ ಮುಖ್ಯವಾಗಿದ್ದು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರೀಡ್ಸ್ ಸಂಸ್ಥೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಈ ಪುಸ್ತಕ ಹೊರತರಲಾಗಿದ್ದು, ಶಾಲೆಗಳು, ಗ್ರಂಥಾಲಯಗಳಲ್ಲಿ ಇರಿಸಲಾಗುವುದು. ಮುಖ್ಯವಾಗಿ ಶಾಲೆಗಳಲ್ಲಿ ಮುಂಜಾನೆಯ ಪ್ರಾರ್ಥನೆಯ ನಂತರ ಬಾಲ್ಯ ವಿವಾಹ, ಪೋಕ್ಸೊ ಕಾಯ್ದೆಗಳ ಕುರಿತು ಮಾಹಿತಿ ನೀಡಬೇಕು. ಬಾಲ್ಯವಿವಾಹವಾಗುವುದಿಲ್ಲ ಎಂದು ಮಕಳ್ಳಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲು ತಿಳಿಸಬೇಕು ಎಂದರು.ಮಗುವಿಗೊಂದು ಮರ-ಶಾಲೆಗೊಂದು ವನ ಅಭಿಯಾನ ಕಾರ್ಯಕ್ರಮದಡಿ ಎಲ್ಲಾ ಶಾಯೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡು, ಅವುಗಳ ಪೋಷಣೆಯ ಹೊಣೆಗಾರಿಗೆ ಮಕ್ಕಳಿಗೆ ನೀಡಬೇಕು. ಮಕ್ಕಳಿಗೆ ಕಾಯ್ದೆ-ಕಾನೂನುಗಳು ಎಷ್ಟು ಮುಖ್ಯವೋ, ಪರಿಸರದಲ್ಲಿ ಗಿಡ-ಮರಗಳು ಅಷ್ಟೇ ಮುಖ್ಯವಾಗಿದೆ ಎಂದರು.ಇದೇ ವೇಳೆ ನ್ಯಾಯಾಧೀಶರು ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಹುತಾತ್ಮರಾದ ಯೋಧರಿಗೆ ಗೌರವ ನಮನ ಸಲ್ಲಿಸಿದರು.ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ವ್ಯಾಪ್ತಿಯಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದು ಅಗತ್ಯವಾಗಿದೆ . ಮಕ್ಕಳ ರಕ್ಷಣೆಗಿರುವ ಕಾನೂನುಗಳನ್ನು ಪ್ರತಿಯೊಬ್ಬರೂ ತಿಳಿದು, ಇತರರಿಗೂ ತಿಳಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಎಲ್ಲಾ ಇಲಾಖೆಗಳು ಸೇರಿ ಕೈಜೋಡಿಸೋಣ ಎಂದರು.ರೀಡ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸಿ.ತಿಪ್ಪೇಶಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಸದಸ್ಯ ಡಾ. ಎಚ್.ಸಿ. ರಾಘವೇಂದ್ರ ಪುಸ್ತಕ ಪರಿಚಯ ಮಾಡಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಜನಾರ್ದನ ಕಾರ್ಯಾಗಾರ ನಡೆಸಿದರು.ಕಾರ್ಯಕ್ರಮಕ್ಕೂ ಮುನ್ನ ಮಗುವಿಗೊಂದು ಮರ-ಶಾಲೆಗೊಂದು ವನ ಅಭಿಯಾನ ಕಾರ್ಯಕ್ರಮದಡಿ ನ್ಯಾಯಾಲಯದ ಆವರಣದಲ್ಲಿ ಗಣ್ಯರು ಗಿಡ ನೆಟ್ಟು ನಿರೂಣಿಸಿದರು.ಈ ಸಂದರ್ಭ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ, ಬಳ್ಳಾರಿ ಪ್ರಾದೇಶಿಕ ವಿಭಾಗದ ಅರಣ್ಯ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ತೋಶನ್ ಕುಮಾರ್ ಸೇರಿದಂತೆ ಜಿಲ್ಲಾ ನ್ಯಾಯಾಲಯದ ವಿವಿಧ ನ್ಯಾಯಾಧೀಶರು, ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿ.ಆರ್.ಸಿ., ಸಿ.ಆರ್.ಸಿ ಇ.ಸಿ.ಓ, ಕಾರ್ಮಿಕ ಅಧಿಕಾರಿಗಳು, ಪಿ.ಡಿ-ಎನ್.ಸಿ.ಎಲ್.ಪಿ, ಮಕ್ಕಳ ವಿಶೇಷ ಪೊಲೀಸ್ ಘಟಕ ಸಿಬ್ಬಂದಿ, ಡಿ.ಸಿ.ಪಿ.ಓ ಸಿಬ್ಬಂದಿ, ಚೈಲ್ಡ್ ಲೈನ್ ಸಿಬ್ಬಂದಿ, ಅಂಗನವಾಡಿ ಮೇಲ್ವಿಚಾರಕರು, ಪ್ಯಾರಾ ಲೀಗಲ್ ವಾಲೆಂಟೀಯರ್ಸ್, ಎಲ್ಲಾ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರುಗಳು, ರೀಡ್ಸ್ ಸಂಸ್ಥೆಯ ಸಿಬ್ಬಂದಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.