ಮಹಾತ್ಮರನ್ನು ಸ್ಮರಿಸೋಣ: ಬಸವರಾಜ ರಾಯರಡ್ಡಿ

| Published : Aug 16 2024, 12:58 AM IST

ಸಾರಾಂಶ

ಎಲ್ಲ ದೇಶಗಳ ಹೋರಾಟಕ್ಕಿಂತ ಭಾರತ ದೇಶದ ಹೋರಾಟ ವಿಭಿನ್ನ. ಸತ್ಯ, ಅಹಿಂಸೆ, ಸತ್ಯಾಗ್ರಹದ ಮೂಲಕ ಈ ದೇಶ ಸ್ವಾತಂತ್ರ್ಯ ಪಡೆದುಕೊಂಡಿರುವುದು ಅತ್ಯಂತ ವಿಶಿಷ್ಟ.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತ್ಯಾಗ, ಬಲಿದಾನ ಮಾಡಿದ ಮಹಾತ್ಮರನ್ನು ಸದಾ ಸ್ಮರಿಸುವ ಮೂಲಕ ಅವರ ತತ್ವಾದರ್ಶಗಳನ್ನು ಪ್ರತಿಯೂಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾಡಳಿತ ವತಿಯಿಂದ ಗುರುವಾರ ನಡೆದ ೭೮ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲ ದೇಶಗಳ ಹೋರಾಟಕ್ಕಿಂತ ಭಾರತ ದೇಶದ ಹೋರಾಟ ವಿಭಿನ್ನ. ಸತ್ಯ, ಅಹಿಂಸೆ, ಸತ್ಯಾಗ್ರಹದ ಮೂಲಕ ಈ ದೇಶ ಸ್ವಾತಂತ್ರ್ಯ ಪಡೆದುಕೊಂಡಿರುವುದು ಅತ್ಯಂತ ವಿಶಿಷ್ಟ ಎಂದರು.

ಕೊಪ್ಪಳ ಏತ ನೀರಾವರಿ ಯೋಜನೆಯಿಂದ ಜಿಲ್ಲೆ ಸೇರಿದಂತೆ ನಾನಾ ತಾಲೂಕುಗಳಲ್ಲಿ ಸುಮಾರು ೭೬ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ತಾತ್ವಿಕವಾಗಿ ಒಪ್ಪಿಕೊಳ್ಳಲಾಗಿತ್ತು. ಹಿಂದಿನ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರು ಕಳಪೆ ಕಾಮಗಾರಿಯಿಂದ ಪೈಪ್‌ಲೈನ್‌ಗಳು, ಟಿಸಿಗಳು ಸುಟ್ಟುಹೋಗಿವೆ. ಅವುಗಳನ್ನು ತ್ವರಿತವಾಗಿ ಸರಿಪಡಿಸಿ ಶೀಘ್ರದಲ್ಲೇ ಕೆರೆಗೆ ನೀರು ತುಂಬಿಸಿ ತಾಲೂಕಿನ ರೈತರಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದು ಹೇಳಿದರು.

ಇತ್ತೀಚಿನ ರಾಜಕಾರಣದಲ್ಲಿ ಹಣ, ಹೆಂಡ, ಜಾತಿ, ಧರ್ಮ, ದುರಾಸೆ ಹೆಚ್ಚಾಗಿ ಭ್ರಷ್ಟಾಚಾರ ತುಂಬಿತುಳುಕುತ್ತಿದೆ. ಇಂತಹ ರಾಜಕೀಯ ವ್ಯವಸ್ಥೆಯಿಂದ ಮೌಲ್ಯಯುತ ರಾಜಕಾರಣಿಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ ಬಸವರಾಜ ತೆನ್ನಳ್ಳಿ ಮಾತನಾಡಿ, ತಮ್ಮ ಪ್ರಾಣ ಬಲಿದಾನಕೊಟ್ಟು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಎಲ್ಲ ಮಹನೀಯರನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದರು.

ಗ್ರೇಡ್‌-೨ ತಹಸೀಲ್ದಾರ ಸತ್ಯಮ್ಮ, ತಾಪಂ ಇಒ ಸಂತೋಷ ಪಾಟೀಲ ಬಿರಾದಾರ, ಸಿಪಿಐ ಮೌನೇಶ್ವರ ಮಾಲಿಪಾಟೀಲ, ಮುಖ್ಯಾಧಿಕಾರಿ ನಾಗೇಶ ಹಾಗೂ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಕಾಂಗ್ರೆಸ್ ಮುಖಂಡರಾದ ಬಿ.ಎಂ. ಶಿರೂರ, ಕೆರಿಬಸಪ್ಪ ನಿಡಗುಂದಿ, ಪಪಂ ಮಾಜಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸದಸ್ಯರಾದ ಡಾ. ನಂದಿತಾ ದಾನರಡ್ಡಿ, ವಸಂತಕುಮಾರ ಭಾವಿಮನಿ, ರೇವಣೆಪ್ಪ ಹಿರೇಕುರಬರ, ಅಂದಯ್ಯ ಕಳ್ಳಿಮಠ, ಕಳಕಪ್ಪ ತಳವಾರ, ಅಶೋಕ ಅರಕೇರಿ, ರಿಯಾಜ ಖಾಜಿ, ಹನುಮಂತ ಭಜೇಂತ್ರಿ, ಇದ್ದರು. ಬಳಿಕ ನಾನಾ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.