ಪ್ಲಾಸ್ಟಿಕ್ ಮುಕ್ತವಾಗಿ ಮಾಡಲು ಸಂಕಲ್ಪ ಮಾಡೋಣ: ಆಯುಕ್ತೆ ರೇಣುಕಾ

| Published : Apr 25 2024, 01:07 AM IST

ಸಾರಾಂಶ

ಗಿಡ ನೆಡುವುದು, ಪ್ಲಾಸ್ಟಿಕ್‌ ತ್ಯಜಿಸುವುದು, ತ್ಯಾಜ್ಯವನ್ನು ಮರುಬಳಕೆ, ಭೂ ಸಂರಕ್ಷಣೆಗೆ ಜಾಗೃತಿ ಮೂಡಿಸುವುದು. ಪರಿಸರ ಮಾಲಿನ್ಯ ತಡೆ, ಪ್ರಾಣಿ ಪಕ್ಷಿಗಳ ರಕ್ಷಣೆ, ಮರಕಡಿತ ತಡೆ ಇಂತಹ ಕಾರ್ಯಗಳನ್ನು ಮಾಡುವ ಮೂಲಕ ಭೂಮಿಯನ್ನು ಕಾಪಾಡಲು ಪ್ರತಿಯೊಬ್ಬರೂ ವೈಯಕ್ತಿಕ ಜವಾಬ್ದಾರಿಗಳನ್ನು ಅನುಸರಿಸಬೇಕು

ಚಿತ್ರದುರ್ಗ: ಗಿಡ ನೆಡುವುದು, ಪ್ಲಾಸ್ಟಿಕ್‌ ತ್ಯಜಿಸುವುದು, ತ್ಯಾಜ್ಯವನ್ನು ಮರುಬಳಕೆ, ಭೂ ಸಂರಕ್ಷಣೆಗೆ ಜಾಗೃತಿ ಮೂಡಿಸುವುದು. ಪರಿಸರ ಮಾಲಿನ್ಯ ತಡೆ, ಪ್ರಾಣಿ ಪಕ್ಷಿಗಳ ರಕ್ಷಣೆ, ಮರಕಡಿತ ತಡೆ ಇಂತಹ ಕಾರ್ಯಗಳನ್ನು ಮಾಡುವ ಮೂಲಕ ಭೂಮಿಯನ್ನು ಕಾಪಾಡಲು ಪ್ರತಿಯೊಬ್ಬರೂ ವೈಯಕ್ತಿಕ ಜವಾಬ್ದಾರಿಗಳನ್ನು ಅನುಸರಿಸಬೇಕು ಎಂದು ನಗರಸಭೆ ಆಯುಕ್ತರಾದ ಎಂ.ರೇಣುಕಾ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಋಷಿ ಸಂಸ್ಕೃತಿ ಗುರುಕುಲ ಮಹಾಸಂಸ್ಥಾನ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ, ರಾಜ್ಯ ಶಿಕ್ಷಣ ಪರಿಷತ್‌ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಭೂಮಿ ದಿನಾಚರಣೆ ಮತ್ತು ಭೂಮಿ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಗರಸಭೆ ಇಂತಹ ಕಾರ್ಯಕ್ರಮಗಳಿಗೆ ಸದಾ ಸಹಕಾರ ನೀಡುತ್ತದೆ. ಪ್ಲಾಸ್ಟಿಕ್ ನಿಷೇಧ ಮತ್ತು ಜಲ ಸಂರಕ್ಷಣೆ, ಗಿಡಬೆಳೆಸುವುದು, ಭೂಮಿ ರಕ್ಷಣೆ ಬಗ್ಗೆ ಪ್ರಬಂಧ ಸ್ಪರ್ಧೆ ಮಾಡಲಾಗುವುದು. ಅದರಲ್ಲೂ ಮಹಿಳೆಯರು ಇರುವ ಕಾಲೇಜಿನಲ್ಲಿ ಅದು ಪರಿಣಾಮಕಾರಿಯಾಗಿರಲಿ. ಭೂಮಿಯ ಸುರಕ್ಷತೆಯಲ್ಲಿ ಪರಿಸರ ಪ್ರಮುಖ ಪಾತ್ರವಹಿಸುತ್ತದೆ. ಜಲ, ವಾಯುಮಾಲಿನ್ಯ, ಅರಣ್ಯನಾಶ ಹಾಗೂ ಇನ್ನೂ ಹಲವು ಪ್ರಮುಖ ಸಮಸ್ಯೆಗಳ ಬಗ್ಗೆ ಜನರು ಒಟ್ಟಾಗಿ ಮಾತನಾಡಬೇಕು. ಅಲ್ಲದೆ ಜನರಲ್ಲಿ ಸ್ವಯಂ ಜಾಗೃತಿ ಮೂಡಬೇಕು ಎಂಬುದು ಮಹತ್ವವಾಗಿದೆ. ನಗರದಲ್ಲಿ ಮರ ಕಡಿಯುವವರ ಮೇಲೆ ಎಫ್‌ಐಆರ್ ದಾಖಲಿಸಲಾಗುತ್ತದೆ ಎಂದರು.

ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೀತಾ ಭರಮಸಾಗರ ಮಾತನಾಡಿ, ಜೀವಿಗಳು ವಾಸಿಸಲು ಯೋಗ್ಯವಾದ ಒಂದೇ ಒಂದು ಸ್ಥಳ ಭೂಮಿ. ಹಾಗಾಗಿ ಭೂಮಿಗೆ ತಾಯಿ ಸ್ಥಾನ ನೀಡಲಾಗಿದೆ. ನೀರು ಸೇರಿದಂತೆ ವಾಯು, ಶಬ್ದ ಇತ್ಯಾದಿ ಮಾಲಿನ್ಯವಾಗುತ್ತಿವೆ. ಪ್ರಾಣಿಗಳು ಅಳಿವಿನಂಚಿಗೆ ತಲುಪಿವೆ. ಇದೆಲ್ಲ ಆಗಿದ್ದು ಮನುಷ್ಯನ ಶ್ರೀಮಂತಿಕೆಯ ದಾಹದಿಂದ. ಭೂಮಿ ಎಚ್ಚರಿಕೆಕೊಡುತ್ತಿದೆ ವಿದ್ಯಾರ್ಥಿಗಳು ಪರಿಸರ ಉಳಿಸುವ ಕಾಯಕ ಮಾಡೋಣ ಎಂದರು.

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಅರಸ್ ಮಾತನಾಡಿ, ಪರಿಸರವನ್ನು ರಕ್ಷಿಸುವ ತೀವ್ರ ಅಗತ್ಯತೆ ನಮ್ಮ‌ಮೇಲಿದೆ. ಮಿತಿಮೀರಿದ ಜನಸಂಖ್ಯೆ, ಜೀವ ವೈವಿಧ್ಯತೆಯ ನಷ್ಟ, ಓಝೋನ್ ಪದರದ ಸವಕಳಿ ಮತ್ತು ಹೆಚ್ಚುತ್ತಿರುವ ಮಾಲಿನ್ಯ, ಜಾಗತಿಕ ತಾಪಮಾನ ಏರಿಕೆ, ಇವೇ ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮತ್ತು ಸಮಕಾಲೀನ ಹಾಗೂ ಹೊಸ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಒಳಗೊಂಡಿದೆ. ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನದಿಂದ ರಾಜ್ಯಾದ್ಯಂತ ಗ್ರೀನ್ ಕರ್ನಾಟಕ ಟೀಮ್ ರಚನೆ ಮಾಡಿದ್ದು, ಹಸಿರು ಸಮೃದ್ಧವಾಗಲು ಎಲ್ಲರೂ ಕೈ ಜೋಡಿಸಿ ಎಂದರು.

ಗ್ರೀನ್ ಕರ್ನಾಟಕ ಟೀಮ್ ಕಮಿಷನರ್ ಡಾ.ಎಂ.ಸಿ.ನರಹರಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಚನ್ನಕೇಶವ, ಡಾ.ಮಧು, ಶಿವಣ್ಣ, ಕುಮಾರಸ್ವಾಮಿ, ಶಕುಂತಲಾ ಮತ್ತು ವಿವಿಧ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.