ಸಾರಾಂಶ
ಸಾರ್ವಜನಿಕರು ತಮ್ಮ ದುಡಿಮೆಯ ಹಣವನ್ನು ಸಹಕಾರಿ ಸಂಘಗಳಲ್ಲಿ ಠೇವಣಿ ಮಾಡಿದ್ದು ಅದನ್ನು ಶಿಸ್ತು ಬದ್ಧವಾಗಿ ನಿರ್ವಹಿಸಬೇಕಾಗಿದೆ.
ಹೊಸಪೇಟೆ: ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಪತ್ತಿನ ವ್ಯವಹಾರ ತನ್ನದೇ ಆದ ಮಹತ್ವ ಹೊಂದಿದೆ. ಅದನ್ನು ಶಿಸ್ತುಬದ್ಧವಾಗಿ ನಿರ್ವಹಿಸಬೇಕಾಗಿದೆ ಎಂದು ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಶೇಖರಗೌಡ ಮಾಲಿಪಾಟೀಲ್ ಹೇಳಿದರು.
ನಗರದ ಮಲ್ಲಿಗಿ ಸಭಾಂಗಣದಲ್ಲಿ ಸೋಮವಾರ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಯೂನಿಯನ್, ಬಿಡಿಸಿಸಿ ಬ್ಯಾಂಕ್ ಹಾಗೂ ಸಹಕಾರ ಇಲಾಖೆಯ ಸಹಯೋಗದಲ್ಲಿ ಕಲ್ಬುರ್ಗಿ ವಿಭಾಗದ ಪತ್ತಿನ ಸಹಕಾರಿ ಸಂಘಗಳ ಮುಖ್ಯ ಕಾರ್ಯ ನಿರ್ವಾಹಕರು ಹಾಗೂ ಆಡಳಿತ ಮಂಡಳಿಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರು ತಮ್ಮ ದುಡಿಮೆಯ ಹಣವನ್ನು ಸಹಕಾರಿ ಸಂಘಗಳಲ್ಲಿ ಠೇವಣಿ ಮಾಡಿದ್ದು ಅದನ್ನು ಶಿಸ್ತು ಬದ್ಧವಾಗಿ ನಿರ್ವಹಿಸಬೇಕಾಗಿದೆ. ಯಾವುದೇ ಒಂದು ಸಂಸ್ಥೆ ಮಾಡುವ ಅವ್ಯವಹಾರ ಇಡೀ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಪತ್ತನ್ನು ಗಂಭೀರವಾಗಿ ನಿರ್ವಹಿಸಬೇಕು. ಆ ಮೂಲಕ ಸಹಕಾರ ಚಳವಳಿಯನ್ನು ಬಲಪಡಿಸಬೇಕು ಎಂದರು.ಜಿಲ್ಲಾ ಯೂನಿಯನ್ ಅಧ್ಯಕ್ಷ ಜೆ.ಎಮ್.ಶಿವಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ಹಂತದಲ್ಲಿಯೂ ಕಾನೂನು ಬದಲಾವಣೆಗಳು ನಿರಂತರವಾಗಿದ್ದು, ಅವುಗಳನ್ನು ಸಹಕಾರಿ ಸಂಘಗಳಿಗೆ ತಿಳಿಯಪಡಿಸುವ ದೃಷ್ಟಿಯಿಂದ ತರಬೇತಿ ಹಮ್ಮಿಕೊಳ್ಳಲಾಗಿದೆ. ಕಲ್ಬುರ್ಗಿ ವಿಭಾಗದಲ್ಲಿ ಹಮ್ಮಿಕೊಂಡ ಮೊದಲ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದರು.
ಮುಖಂಡರಾದ ಬಿ.ಕೆ.ನಾಗರಾಜರಾವ್, ಬಂಡೆ ರಂಗಪ್ಪ, ಬಿ.ವಿ.ರವೀಂದ್ರನಾಥ್, ವರುಣ್ ಭಟ್, ಹಾಲಯ್ಯ ಉಡೇಚಾರ ಪಾಲ್ಗೊಂಡಿದ್ದರು.ಮಹಾಮಂಡಳದ ಅಧಿಕಾರಿ ರುದ್ರಪ್ಪ, ಮಲ್ಲಯ್ಯಶೆಟ್ಟಿ, ಯೂನಿಯನ್‌ನ ಸಿಇಒ ನಾಗರಾಜ, ಗುರುರಾಜ ಜೋಶಿ ನಿರ್ವಹಿಸಿದರು.
ಹೊಸಪೇಟೆಯಲ್ಲಿ ಸಹಕಾರ ಮಹಾಮಂಡಳದ ವತಿಯಿಂದ ಕಲ್ಬುರ್ಗಿ ವಿಭಾಗದ ಪತ್ತಿನ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಾಹಕರು ಹಾಗೂ ಆಡಳಿತ ಮಂಡಳಿಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನುಮಂಡಳದ ನಿರ್ದೇಶಕ ಶೇಖರಗೌಡ ಮಾಲಿಪಾಟೀಲ್ ಉದ್ಘಾಟಿಸಿದರು.