ಅಪರಾಧ ರಹಿತ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸೋಣ: ಸಂತೋಷ ಹೆಗಡೆ

| Published : Sep 20 2024, 01:34 AM IST

ಅಪರಾಧ ರಹಿತ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸೋಣ: ಸಂತೋಷ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಭ್ರಷ್ಟಾಚಾರ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ. ಹಿಂದಿನ ಸರ್ಕಾರದ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಈಗೇನು ಮಾಡುತ್ತಿದೆ? ಸ್ವಂತ ಲಾಭಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆಯೇ ಹೊರತು ಅಭಿವೃದ್ಧಿಗಾಗಿ ಅಲ್ಲ ಎಂದು ಸಂತೋಷ ಹೆಗಡೆ ಹೇಳಿದರು.

ಧಾರವಾಡ:

ಅತ್ಯಾಚಾರ ಹಾಗೂ ಕೊಲೆ ಅಂತಹ ಅಮಾನವೀಯ ಕೃತ್ಯಕ್ಕೆ ಮಾನವ ಮೌಲ್ಯಗಳ ಕುಸಿತ ಕಾರಣ ಎಂದು ಮಾಜಿ ಲೋಕಾಯುಕ್ತ ಹಾಗೂ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಹೇಳಿದರು.

ಆಲ್ ಇಂಡಿಯಾ ಡೆಮೊಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ವತಿಯಿಂದ ಇಲ್ಲಿಯ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾದ ಮಹಿಳೆಯರ ಘನತೆ ಮತ್ತು ಮಾನವ ಮೌಲ್ಯ ಉಳಿಸೋಣ ಯುವಜನರ ಸಂಕಲ್ಪ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ದೆಹಲಿಯಲ್ಲಿ ನಡೆದ ನಿರ್ಭಯ ಘಟನೆಯ ಸಂದರ್ಭದಲ್ಲಿ ಇಡೀ ದೇಶವೇ ಎಚ್ಚೆತ್ತುಕೊಂಡು ಪ್ರತಿಭಟನೆ ನಡೆಸಿತ್ತು. ಅದೇ ರೀತಿ ಇಂದು ಕೂಡ ಆಗಬೇಕಾಗಿದೆ. ಮಾದಕ ವಸ್ತುಗಳ ಹಾವಳಿ ಸಮಾಜದಲ್ಲಿ ಹೆಚ್ಚಾಗುತ್ತಿದ್ದು, ಅದರ ವಿರುದ್ಧ ಧ್ವನಿ ಎತ್ತಬೇಕಾಗಿದೆ. ಹಿಂದೆ ತಪ್ಪು ಮಾಡಿ ಜೈಲು ಶಿಕ್ಷೆ ಅನುಭವಿಸಿ ಬಂದವರನ್ನು ಸಮಾಜ ಬಹಿಷ್ಕಾರ ಮಾಡುತ್ತಿತ್ತು. ಅವರಿಗೆ ಸಾಮಾಜಿಕ ಶಿಕ್ಷೆ ಆಗುತ್ತಿತ್ತು. ಆದರೆ ಅವರನ್ನು ಇಂದು ಸನ್ಮಾನ ಮಾಡುವ ಸ್ಥಿತಿಗೆ ನಮ್ಮ ಸಮಾಜ ತಲುಪಿದೆ. ಶ್ರೀಮಂತಿಕೆಯನ್ನು ಪೂಜಿಸುವ ಹಂತಕ್ಕೆ ಸಮಾಜ ಒಂದು ನಿಂತಿದ್ದು, ಪ್ರಾಮಾಣಿಕರನ್ನು ಹುಚ್ಚನೆಂದು ಕರೆಯಲಾಗುತ್ತಿದೆ ಎಂದರು.

ಕೋರ್ಟ್‌ಗಳಲ್ಲಿ ವಿಚಾರಣೆ ನಡೆದು ಶಿಕ್ಷೆ ಆಗುವುದು ಸಮಯ ತೆಗೆದುಕೊಳ್ಳುತ್ತಿದೆ. ತೀರ್ಪು ಹೊರಬರುವಷ್ಟರಲ್ಲಿ ಆರೋಪಿಯೇ ಸತ್ತು ಹೋಗಿರುತ್ತಾನೆ. ಇದರಿಂದ ಅಪರಾಧ ಮಾಡುವವರಿಗೆ ಭಯವಿಲ್ಲವಾಗಿದೆ. ಯುವಕರು ಹಿರಿಯರು ಕಟ್ಟಿ ಬೆಳೆಸಿದ ಮಾನವ ಮೌಲ್ಯ ಅಳವಡಿಸಿಕೊಂಡು ಅಪರಾಧಗಳೇ ಇಲ್ಲದ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಎಐಡಿವೈಒ ಅಖಿಲ ಭಾರತ ಉಪಾಧ್ಯಕ್ಷ ಡಾ. ಜಿ. ಶಶಿಕುಮಾರ ಮಾತನಾಡಿ, ನಿರ್ಭಯ ಘಟನೆಗೆ ಇಡೀ ದೇಶವೇ ಒಂದಾಗಿ ಹೋರಾಟ ಮಾಡಿದ ಪರಿಣಾಮ ಜಸ್ಟಿಸ್ ವರ್ಮ ಕಮಿಟಿ ರಚಿಸಲಾಯಿತು. ಮಹಿಳೆಯರ ಅತ್ಯಾಚಾರ ಘಟನೆಗಳ ವಿರುದ್ಧ ತುರ್ತು ಕ್ರಮಕೈಗೊಳ್ಳಲು ಫಾಸ್ಟ್ ಟ್ರ್ಯಾಕ್ ಕೋರ್ಟ್‌ ನಿರ್ಮಿಸಲು ಶಿಫಾರಸು ಮಾಡಲಾಯಿತು. ಆಗಿನಿಂದ ಅಧಿಕಾರ ನಡೆಸಿದ ಯಾವುದೇ ಸರ್ಕಾರಗಳು ವರ್ಮಾ ಕಮಿಟಿಯ ಶಿಫಾರಸುಗಳನ್ನು ಸಂಪೂರ್ಣವಾಗಿ ಜಾರಿ ಮಾಡಲಿಲ್ಲ. ಪರಿಣಾಮವಾಗಿ ಇಂದೂ ಕೂಡ ಪ್ರತಿನಿತ್ಯ ಅಂತಹ ಘಟನೆಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಯುವಕರು ವೈಯಕ್ತಿಕ ಮಟ್ಟದಲ್ಲಿ ಹಾಗೂ ಸಾಮಾಜಿಕವಾಗಿ ಪ್ರತಿಭಟಿಸಬೇಕಾದ ಅವಶ್ಯಕತೆ ಇದೆ. ಮಾದಕ ವಸ್ತುಗಳು, ಅಶ್ಲೀಲ ಸಿನಿಮಾ, ಪೋರ್ನೋಗ್ರಫಿ ವಿರುದ್ಧ ಧ್ವನಿ ಎತ್ತಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಎಐಡಿವೈಒ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ್‌ ಮಾತನಾಡಿದರು. ಹಿರಿಯ ಮನೋಚಿಕಿತ್ಸಕರಾದ ನಡಹಳ್ಳಿ ವಸಂತ್, ಮನೋವೈದ್ಯರಾದ ಡಾ. ಸುಜ್ಞಾನಿ ದೇವಿ ಪಾಟೀಲ್, ಧಾರವಾಡ ಜನಜಾಗೃತಿ ಅಭಿಯಾನದ ಸಲಹೆಗಾರರಾದ ರಾಮಾಂಜನಪ್ಪ ಅಲ್ದಳ್ಳಿ ಇದ್ದರು.

ಕಾಂಗ್ರೆಸ್‌ ಈಗೇನು ಮಾಡುತ್ತಿದೆ?:ಭ್ರಷ್ಟಾಚಾರ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ. ಹಿಂದಿನ ಸರ್ಕಾರದ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಈಗೇನು ಮಾಡುತ್ತಿದೆ? ಸ್ವಂತ ಲಾಭಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆಯೇ ಹೊರತು ಅಭಿವೃದ್ಧಿಗಾಗಿ ಅಲ್ಲ. ಯಾರು ಆದರ್ಶವಾಗಿ ಇರಬೇಕು ಅವರು ಜೈಲಿನಲ್ಲಿ ಇದ್ದಾರೆ. ದಿನಗಳೆದಂತೆ ಮನುಷ್ಯನ ದುರಾಸೆ ಹೆಚ್ಚುತ್ತಿದೆ. ಸಮಾಜ ಇನ್ನಾದರೂ ಬದಲಾಗಬೇಕು. ಮುಂದಿನ ಪೀಳಿಗೆಗೆ ದೊಡ್ಡ ಬದಲಾವಣೆ ತರುವುದು ಅವಶ್ಯ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಬರಬೇಕು ಎಂದು ಸಮಾರಂಭಕ್ಕೂ ಮುಂಚೆ ಮಾಧ್ಯಮಗಳೊಂದಿಗೆ ನಿವೃತ್ತ ನ್ಯಾಯಾಧೀಶ ಸಂತೋಷ ಹೆಗಡೆ ಮಾತನಾಡಿದರು.