ಆರ್‌ಎಸ್‌ಎಸ್‌ ಬಗ್ಗೆ ಅರಿತುಕೊಳ್ಳಲಿ: ಬೆಲ್ಲದ

| Published : Oct 15 2025, 02:07 AM IST

ಸಾರಾಂಶ

ಮಳೆಯಿಂದ ಬೆಳೆಹಾನಿಯಾಗಿ ರೈತರು ಸಾಕಷ್ಟು ತೊಂದರೆಯಲ್ಲಿ ಇದ್ದರೂ ಸರ್ಕಾರ ಅವರ ನೆರವಿಗೆ ಧಾವಿಸಿಲ್ಲ. ಒಂದು ದಿನ ಜಾತಿ, ಮತ್ತೊಂದು ದಿನ ಧರ್ಮ, ಇನ್ನೊಂದು ದಿನ ಆರ್‌ಎಸ್‌ಎಸ್‌ ಮಾತನಾಡಿ ಜನರ ಹಾದಿ ತಪ್ಪಿಸಲಾಗುತ್ತಿದೆ.

ಧಾರವಾಡ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಟ್ರಾ ಲೆಫ್ಟಿಸ್ಟ್‌. ರೈತರ ಸಮಸ್ಯೆಗಳು ಸಾಕಷ್ಟಿದ್ದರೂ ಅದನ್ನು ನಿವಾರಿಸುವ ಬದಲು ಜನರ ಗಮನ ಬೇರೆಡೆ ಸೆಳೆಯುವುದಕ್ಕಾಗಿ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕಾ ಖರ್ಗೆ ಪತ್ರ ಬರೆಯುತ್ತಾರೆ. ಸಿದ್ದರಾಮಯ್ಯ ಪರಿಶೀಲಿಸುವಂತೆ ಸೂಚಿಸುತ್ತಾರೆ. ಸ್ವಲ್ಪವಾದರೂ ಸೂಕ್ಷ್ಮತೆ ಇದ್ದರೆ ಸಂಘದ ಬಗ್ಗೆ ಅರಿತುಕೊಳ್ಳಬೇಕು. ಸಂಘದ ಬಗ್ಗೆ ಸಾಕಷ್ಟು ಸಾಹಿತ್ಯವಿದೆ. ಏನು ಕೆಲಸ ಮಾಡುತ್ತಿದೆ. ಅದರ ವ್ಯಾಪ್ತಿಯೇನು? ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಇವರು ತಾಲಿಬಾನ್‌, ಭಯೋತ್ಪಾದಕ ಸಂಘಟನೆಗಳ ಬಗ್ಗೆ ಒಂಚೂರು ಮಾತನಾಡುವುದಿಲ್ಲ. ದೇಶದ್ರೋಹಿ ಕೇಸಿನಲ್ಲಿ ಜೈಲಿನಲ್ಲಿರುವವರ ಮೇಲಿನ ಪ್ರಕರಣಗಳನ್ನು ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಹಿಂಪಡೆಯುತ್ತಾರೆ ಎಂದರು.

ಮಳೆಯಿಂದ ಬೆಳೆಹಾನಿಯಾಗಿ ರೈತರು ಸಾಕಷ್ಟು ತೊಂದರೆಯಲ್ಲಿ ಇದ್ದರೂ ಸರ್ಕಾರ ಅವರ ನೆರವಿಗೆ ಧಾವಿಸಿಲ್ಲ ಎಂದು ಕಿಡಿಕಾರಿದ ಬೆಲ್ಲದ, ಒಂದು ದಿನ ಜಾತಿ, ಮತ್ತೊಂದು ದಿನ ಧರ್ಮ, ಇನ್ನೊಂದು ದಿನ ಆರ್‌ಎಸ್‌ಎಸ್‌ ಮಾತನಾಡಿ ಜನರ ಹಾದಿ ತಪ್ಪಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ಬಾಗಲಕೋಟೆಗೆ ಹೋಗುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಲಿ ರೈತರ ಬೆಳೆ ಏನಾಗಿದೆ ಎಂದು ನೋಡುವುದಿಲ್ಲ. ಧಾರವಾಡ ಜಿಲ್ಲೆಗೂ ಬಂದರೂ ರೈತರ ಪರಿಸ್ಥಿತಿ ಅರಿಯುವುದಿಲ್ಲ ಎಂದರು.

ರಾಜ್ಯದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು ಮೊಮ್ಮಕ್ಕಳ ವರೆಗೂ ದುಡ್ಡು ಮಾಡಬೇಕಿದ್ದು ಹಣ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ ಎಂದು ಆಪಾದಿಸಿದರು.

ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ:

ಆಡಳಿತ ಯಂತ್ರ ಸಂಪೂರ್ಣ ಕುಸಿದಿದ್ದು ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ ನೀಡಲಾಗುತ್ತಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಅಮಾಯಕ ಎಸ್ಸಿ ಅಧಿಕಾರಿ, ವರ್ಗಾವಣೆ ವಿಚಾರವಾಗಿ ಎಸ್ಟಿ ಸಮುದಾಯದ ಪೊಲೀಸ್ ಅಧಿಕಾರಿ, ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಸಹಾಯಕನ ಹೆಸರು ಬರೆದಿಟ್ಟು ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರು. ಇದೀಗ ಕಲಬುರಗಿಯ ಮಳಖೇಡದಲ್ಲಿ ಗ್ರಂಥಾಲಯದಲ್ಲಿ ಕೆಲಸ ಮಾಡುತ್ತಿದ್ದ ಭಾಗ್ಯವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರಿಯಾಂಕ ಖರ್ಗೆ ಅವರಿಗೆ ಬೆದರಿಕೆ ಕರೆ ಬರುತ್ತಿದ್ದರೆ ಅವರದೇ ಸರ್ಕಾರವಿದೆ. ಕರೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲಿ. ಪ್ರಚಾರಕ್ಕಾಗಿ ಈ ರೀತಿ ಹೇಳುವುದು ಸರಿಯಲ್ಲ.

ಅರವಿಂದ ಬೆಲ್ಲದ, ಉಪನಾಯಕ, ವಿಧಾನಸಭೆ ವಿರೋಧಪಕ್ಷ