''''ದುಡಿಯೋಣ ಬಾ ಅಭಿಯಾನ'''' ಆರ್ಥಿಕ ಸದೃಢತೆಗೆ ಕಾರಣ

| Published : May 09 2025, 12:34 AM IST

ಸಾರಾಂಶ

ನರೇಗಾ ಕೂಲಿ ಮೊತ್ತ 370 ರು.ಗಳಿಗೆ ಹೆಚ್ಚಳವಾಗಿದ್ದು, ಗ್ರಾಮೀಣ ಭಾಗದ ಅಕುಶಲ ಕೂಲಿಕಾರ್ಮಿಕರು ಆರ್ಥಿಕವಾಗಿ ಸದೃಢರಾಗಲು ಕಾರಣವಾಗಿದೆ ಎಂದು ತಾಪಂ ಇಓ ವಿಶ್ವನಾಥ ಹೊಸಮನಿ ಹೇಳಿದರು.

ಮುಂಡರಗಿ: ನರೇಗಾ ಕೂಲಿ ಮೊತ್ತ 370 ರು.ಗಳಿಗೆ ಹೆಚ್ಚಳವಾಗಿದ್ದು, ಗ್ರಾಮೀಣ ಭಾಗದ ಅಕುಶಲ ಕೂಲಿಕಾರ್ಮಿಕರು ಆರ್ಥಿಕವಾಗಿ ಸದೃಢರಾಗಲು ಕಾರಣವಾಗಿದೆ ಎಂದು ತಾಪಂ ಇಓ ವಿಶ್ವನಾಥ ಹೊಸಮನಿ ಹೇಳಿದರು.

ಅವರು ಬುಧವಾರ ತಾಲೂಕಿನ ಡೋಣಿ ಗ್ರಾಪಂ ಕಚೇರಿಯಲ್ಲಿ ''''''''ದುಡಿಯೋಣ ಬಾ'''''''' ಅಭಿಯಾನದ ಅಂಗವಾಗಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೇಸಿಗೆಯಲ್ಲಿ ಕೆಲಸದ ಕೊರತೆ ಗ್ರಾಮೀಣ ಭಾಗದ ಜನರನ್ನು ಬಾಧಿಸುತ್ತಿರುತ್ತದೆ. ಆ ಕೊರತೆ ನೀಗಿಸಲು ನರೇಗಾ ಯೋಜನೆಯನ್ನು ಜನರು ಬಳಸಿಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ನರೇಗಾ ಕಾಮಗಾರಿಗಳಲ್ಲಿ ಎನ್‌ಎಂಎಂಎಸ್ ಆ್ಯಪ್ ಮೂಲಕ ಎರಡು ಬಾರಿ ಹಾಜರಾತಿ ಕಡ್ಡಾಯವಾಗಿದ್ದು, ಈ ವಿಧಾನದಿಂದ ಮಾತ್ರ ಕೂಲಿಕಾರರಿಗೆ ಕೂಲಿಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ನಿರುದ್ಯೋಗ ಹಾಗೂ ಆರ್ಥಿಕ‌ ಸಂಕೋಲೆಯಿಂದ ತತ್ತರಿಸುವ ಬಡವರಿಗೆ ಈ ಅಭಿಯಾನ ಸಹಕಾರಿ. ಹಾಗಾಗಿ ಜಾಬ್ ಕಾರ್ಡ್ ಇಲ್ಲದ ದುರ್ಬಲ ವರ್ಗದವರಿಂದ ಅಗತ್ಯ ದಾಖಲೆ ಪಡೆದು ಉದ್ಯೋಗ ಚೀಟಿ ನೀಡುವುದು, ಕೆಲಸದ ಬೇಡಿಕೆ ಪಡೆಯುವ ಕಾರ್ಯವನ್ನು ತಾಲೂಕಿನ ಸಂಬಂಧಿಸಿದ ನರೇಗಾ ಸಿಬ್ಬಂದಿಗಳಿಗೆ ಈಗಾಗಲೇ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರತಿ ಕುಟುಂಬಕ್ಕೆ 100 ದಿನಗಳ ಉದ್ಯೋಗ ಪಡೆಯಲು ಅವಕಾಶವಿದ್ದು, ಅಷ್ಟು ದಿನ ಕೂಲಿಕಾರರಾಗಿ ಭಾಗವಹಿಸಿ ಯೋಜನೆಯ ಸಂಪೂರ್ಣ ಲಾಭ ಪಡೆದರೆ 37000 ರುಪಾಯಿ ರೈತರ ಖಾತೆಗೆ ನೇರವಾಗಿ ಜಮೆಯಾಗಲಿದೆ. ಗ್ರಾಮೀಣ ಭಾಗದ ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡ, ಬದು ಮುಂತಾದ ಕೃಷಿ ಚಟುವಟಿಕೆ ಜೊತೆಗೆ ಕೆರೆ ಹೂಳೆತ್ತುವುದು, ಜಲ ಮೂಲಗಳ ದಡದಲ್ಲಿ ಅರಣ್ಯೀಕರಣ, ನೆಡುತೋಪು ನಿರ್ಮಾಣ, ಕಾಲುವೆಗಳ ಪುನಶ್ಚೇತನ ಸೇರಿದಂತೆ ಮುಂತಾದ ಕಾರ್ಯಗಳಿಗೆ ಅವಕಾಶವಿದೆ ಹಾಗಾಗಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಅಭಿಯಾನವನ್ನು ಯಶಗೊಳಿಸಲು ಎಲ್ಲರೂ ಕಾರ್ಯೋನ್ಮುಖರಾಗಬೇಕು ಎಂದು ಸೂಚಿಸಿದರು.ಈ ವೇಳೆ ಸಹಾಯಕ ಕೃಷಿ ಇಲಾಖೆ ಅಧಿಕಾರಿ ಎಸ್.ಬಿ. ರಾಮೇನಹಳ್ಳಿ, ಪಿಡಿಓ ಪಾರ್ವತಿ ಹೊಂಬಳ, ಗ್ರಾಪಂ ಸದಸ್ಯರು, ಬಿಎಫ್ ಟಿ, ಜಿಕೆಎಂ, ಕಾಯಕ ಬಂಧುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.