ಸಾರಾಂಶ
ಹೂವಿನಹಡಗಲಿ: ವ್ಯಾಪಾರ ಉದ್ದೇಶದಿಂದ ಭಾರತಕ್ಕೆ ಬಂದ ಬ್ರಿಟಿಷರಿಂದ ಮುಕ್ತ ಮಾಡಲು, ಈ ದೇಶದ ನಾಯಕರು ಶತಮಾನಗಳ ಕಾಲ ಹೋರಾಟ ತ್ಯಾಗ, ಬಲಿದಾನದ ಫಲದಿಂದ ಸ್ವಾತಂತ್ರ್ಯ ಬಂದಿದೆ. ಇದನ್ನು ಸರಿಯಾಗಿ ಬಳಕೆ ಮಾಡಿಕೊಂಡು ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಎಲ್ಲರೂ ಶ್ರಮಿಸಬೇಕಿದೆ ಎಂದು ತಹಸೀಲ್ದಾರ್ ಜಿ. ಸಂತೋಷ ಕುಮಾರ ಹೇಳಿದರು.
ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಬದುಕು ನಮಗೆಲ್ಲಾ ಆದರ್ಶವಾಗಿದ್ದು, ಬ್ರಿಟಿಷರನ್ನು ಭಾರತದಿಂದ ಓಡಿಸಲು ನಡೆದ ಹೋರಾಟಗಳಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡ, ಅಸಹಕಾರ ಚಳವಳಿ ಮತ್ತು ಹರತಾಳಗಳು ಹೋರಾಟಕ್ಕೆ ಪುಷ್ಟಿ ನೀಡಿವೆ ಎಂದರು.ಈ ದೇಶದ ಸಂವಿಧಾನವನ್ನು ಎಲ್ಲರೂ ಗೌರವದಿಂದ ಕಾಣುವ ಜತೆಗೆ, ಅದರ ಆಶಯಗಳಿಗೆ ಧಕ್ಕೆ ಉಂಟು ಮಾಡದಂತೆ ಎಚ್ಚರಿಕೆ ವಹಿಸಿ, ಸಂವಿಧಾನದ ಪ್ರತಿಯೊಂದು ಅಂಶವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೃಷ್ಣನಾಯ್ಕ ಮಾತನಾಡಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳು ಕಳೆದಿವೆ. ಆದರೆ ಇನ್ನು ಕೆಲವು ವಸ್ತುಗಳಿಗಾಗಿ ಅನ್ಯ ದೇಶಗಳನ್ನು ಅವಲಂಬಿಸಿದ್ದೇವೆ. ಭಾರತ ಸಂಪೂರ್ಣ ಸ್ವಾವಲಂಬಿತನ ಸಾಧಿಸಿದಾಗ ಸ್ವಾತಂತ್ರ್ಯ ದಿನಾಚರಣೆ ಸಾರ್ಥಕವಾಗುತ್ತದೆ ಎಂದರು.ದೇಶದ ಕೃಷಿ, ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಬೇಕಿದೆ. ಇಂದು ದೇಶದಲ್ಲಿ ಆತ್ಮನಿರ್ಭರ ಭಾರತ, ವಿಕಸಿತ ಭಾರತ ಯೋಜನೆಗಳ ಮೂಲಕ ಸಾಕಷ್ಟು ಸಾಧನೆ ಮಾಡಿದ್ದೇವೆ. ಇದರಿಂದ ವಿಶ್ವದಲ್ಲಿ ಭಾರತ 4ನೇ ಸ್ಥಾನದಲ್ಲಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಸಾಧನೆಗೈದು 3ನೇ ಸ್ಥಾನಕ್ಕೆ ದಾಪುಗಾಲು ಇಡಬೇಕು ಎಂದು ಹೇಳಿದರು.
ಭಾರತದಲ್ಲಿ ಬಂಡವಾಳ ಹೂಡುವ ಕಂಪನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಅಭಿವೃದ್ಧಿಯ ಸಂಕೇತವಾಗಿದೆ. ಪ್ರಾದೇಶಿಕ ಮತ್ತು ಸಾಮಾಜಿಕ ಅಸಮತೋಲ ಹೋಗಲಾಡಿಸಿ, ನಗರ, ಪಟ್ಟಣ ಅಭಿವೃದ್ಧಿ ಹೊಂದುತ್ತಿರುವ ಹಾಗೆ, ಹಳ್ಳಿಗಳಲ್ಲಿಯೂ ಅಭಿವೃದ್ಧಿ ಕಾಣಬೇಕಿದೆ. ಪಕ್ಕದಲ್ಲೇ ತುಂಗಭದ್ರಾ ನದಿ ಹರಿದರೂ ಶೇ. 70ರಷ್ಟು ಭೂಮಿ ಮಳೆಯಾಶ್ರಿತವಾಗಿದೆ. ಸಂಪೂರ್ಣ ನೀರಾವರಿ ಯೋಜನೆಗೆ ಒಳಪಡಿಸಿ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕಿದೆ ಎಂದರು.ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಗಂಟಿ ಜಮಾಲಾಬೀ, ಉಪಾಧ್ಯಕ್ಷ ಸೊಪ್ಪಿನ ಮಂಜುನಾಥ, ಪುರಸಭೆಯ ಸರ್ವ ಸದಸ್ಯರು, ತಾಪಂ ಇಒ ಜಿ. ಪರಮೇಶ್ವರಪ್ಪ, ಬಿಇಒ ಮಹೇಶ ಪೂಜಾರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ. ಕೊಟ್ರಗೌಡ, ಹಣ್ಣಿ ಶಶಿಧರ, ಸಿಪಿಐ ದೀಪಕ ಬೂಸರಡ್ಡಿ ಇತರರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು.ದ್ವಾರಕೀಶ ರಡ್ಡಿ ಕಾರ್ಯಕ್ರಮ ನಿರೂಪಿಸಿದರು. ಎ. ಕೊಟ್ರಗೌಡ ಸ್ವಾಗತಿಸಿದರು. ಆನಂತರದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.