ಸಾರಾಂಶ
ಸಂಡೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರಿಗೆ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಲೀಡ್ ಕೊಡಿಸಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಜನಾರ್ಧನ ರೆಡ್ಡಿಯವರ ಕೆಆರ್‌ಪಿಪಿ ಬಿಜೆಪಿಯೊಂದಿಗೆ ವಿಲೀನವಾಗಿರುವುದು ಮತ್ತು ಪಕ್ಷದ ಮುಖಂಡರಾದ ಕೆ.ಎಸ್. ದಿವಾಕರ್ ಹಾಗೂ ಅವರ ಬೆಂಬಲಿಗರು ಬಿಜೆಪಿಗೆ ಮರಳಿರುವುದು ಕ್ಷೇತ್ರದಲ್ಲಿ ಬಿಜೆಪಿಗೆ ಮತ್ತಷ್ಟು ಶಕ್ತಿ ಹೆಚ್ಚಿಸಿದೆ. ಎಲ್ಲರೂ ಒಟ್ಟಾಗಿ ಮನೆ ಮನೆಗೆ ಭೇಟಿ, ಬೂತ್ ಮಟ್ಟದಲ್ಲಿ ಶ್ರಮಿಸಿ, ಬಿಜೆಪಿ ಅಭ್ಯರ್ಥಿಯನ್ನು ಹೆಚ್ಚಿನ ಲೀಡ್ ಮೂಲಕ ಗೆಲ್ಲಿಸಲು ಶ್ರಮಿಸೋಣ. ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸೋಣ. ಶುಕ್ರವಾರ ಬಿ.ಶ್ರೀರಾಮುಲು ನಾಮಪತ್ರ ಸಲ್ಲಿಸಲಿದ್ದಾರೆ. ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಬೇಕು. ಕ್ಷೇತ್ರದಲ್ಲಿನ ಬಿಜೆಪಿ ಪ್ರಚಾರ ಹೇಗಿರಬೇಕೆಂದರೆ, ಸ್ಥಳೀಯ ಶಾಸಕರಿಗೆ ನಿದ್ದೆ ಬಾರದ ಹಾಗೆ ಮಾಡಬೇಕು ಎಂದರು.
ಕೆ.ಎಸ್. ದಿವಾಕರ್ ಮಾತನಾಡಿ, ಬಿಜೆಪಿಗೆ ಮರಳಿದ್ದು ತಮಗೆ ಸ್ವಂತ ಮನೆಗೆ ಬಂದಷ್ಟೇ ಸಂತೋಷವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಉಂಟಾದ ಒಡಕಿನಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ಕ್ಷೇತ್ರದಲ್ಲಿ ಗೆಲ್ಲುವಂತಾಯಿತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಬಿ. ಶ್ರೀರಾಮುಲು ಅವರನ್ನು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಲೀಡ್‌ನಿಂದ ಗೆಲ್ಲಿಸಲು ಶ್ರಮಿಸೋಣ ಎಂದರು.ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ, ವಿ.ಕೆ. ಬಸಪ್ಪ, ಸಂಡೂರು ಮಂಡಲ ಅಧ್ಯಕ್ಷ ನಾನಾಸಾಹೇಬ್ ನಿಕ್ಕಂ ಪಕ್ಷ ಸಂಘಟನೆ, ಬಲಪಡಿಸುವ ಕುರಿತು ಮಾತನಾಡಿದರು.
ಕೆಆರ್‌ಪಿಪಿ ಮುಖಂಡರ ಸೇರ್ಪಡೆ:ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಕೆಆರ್‌ಪಿಪಿ ಮುಖಂಡರಾದ ಕೆ.ಎಸ್. ದಿವಾಕರ್ ಸೇರಿದಂತೆ ಹಲವು ಮುಖಂಡರಿಗೆ ಪಕ್ಷದ ಶಾಲು ಹಾಕಿ ಸ್ವಾಗತಿಸಿ, ಒಗ್ಗಟ್ಟಿನ ಮಂತ್ರ ಬೋಧಿಸಿದರು.
ಪಕ್ಷದ ಮುಖಂಡರಾದ ಆರ್.ಟಿ. ರಘುನಾಥ್, ದರೋಜಿ ರಮೇಶ್, ರಮೇಶ್, ವಿಶ್ವನಾಥರೆಡ್ಡಿ, ದೊಡ್ಡಬಸಪ್ಪ, ಕಿನ್ನೂರೇಶ್ವರ, ನಾಗರಾಜ, ಪುರುಷೋತ್ತಮ್, ವಿ.ಎಸ್.ಶಂಕರ್, ಪುಷ್ಪಾ, ದೀಪಾ, ರವಿಕಾಂತ್ ಮುಂತಾದವರು ಉಪಸ್ಥಿತರಿದ್ದರು.