ಸಾರಾಂಶ
ಕನ್ನಡಪ್ರಭ ವಾರ್ತೆ ಕಾರಟಗಿ
ಈ ಕಾಲದ ಯುವ ಪೀಳಿಗೆಯಲ್ಲಿ ಮನೆ ಮಾಡಿರುವ ದುಶ್ಚಟಗಳನ್ನು ಹೋಗಲಾಡಿಸಲು ಅವರಲ್ಲಿ ಕನ್ನಡ ಸಾಹಿತ್ಯಾಭಿರುಚಿ, ಕಲೆ, ಸಂಸ್ಕೃತಿ ಬಗ್ಗೆ ಅಭಿಮಾನ ಮೂಡಿಸುವ ಕೆಲಸ ಆಗಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಸಿ.ಬಿ. ಚಿಲ್ಕರಾಗಿ ಹೇಳಿದರು.ಇಲ್ಲಿನ ಶರಣಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್, ಸ್ಪಂದನ ಸಾಹಿತ್ಯ, ಸಾಂಸ್ಕೃತಿಕ, ಕಲಾ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಸ್ಪಂದನ ಓದು ಹೊತ್ತಿಗೆ ಬಳಗ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ಬರಹಗಾರ ರಮೇಶ ಸಿ. ಬನ್ನಿಕೊಪ್ಪ ಅವರ ಹಾಫ್ ಚಹಾ ಕೃತಿ ಬಿಡುಗಡೆ ಮತ್ತು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪರಸ್ಪರ ಸೌಹಾರ್ದತೆ, ಸಹಬಾಳ್ವೆ, ಸಹನೆಯಿಂದ ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಬೆಳೆಸಿಕೊಂಡರೆ ಸಮಾಜ ಹಾಗೂ ದೇಶದ ಅಭಿವೃದ್ಧಿ ಸಾಧ್ಯ. ತಿಳಿವಳಿಕೆಯ ಕೊರತೆ ಧರ್ಮ- ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಹಿಂದೂ ಮುಸಲ್ಮಾನರ ಸೌಹಾರ್ದತೆಗೆ ಧಕ್ಕೆ ಆಗಬಾರದು. ಮುಸಲ್ಮಾನರು ಉದಾತ್ತವಾದ, ಆಧ್ಯಾತ್ಮಿಕ ಚಿಂತನೆಯಿಂದ ಬೆಳೆದು ಬಂದಿದ್ದಾರೆ. ಧರ್ಮದ ಬಗೆಗಿನ ಅಜ್ಞಾನದಿಂದ ಸಂಘರ್ಷ ಸೃಷ್ಟಿಯಾಗುತ್ತಿದೆ. ಸಮಾಜಕ್ಕೆ ಆತಂಕ ತಂದೊಡ್ಡುವ ಕೆಲಸವನ್ನು ಯಾರೂ ಮಾಡಬಾರದು. ತಪ್ಪು ಮಾಡಿದ ವ್ಯಕ್ತಿಗೆ ಶಿಕ್ಷೆ ಆಗಬೇಕು. ಇತ್ತೀಚಿನ ದಿನಗಳಲ್ಲಿ ದೊಂಬಿ, ಕೊಲೆ ಸಂಘರ್ಷಗಳು ಸಂಭವಿಸಿದಾಗ ಜಾತಿ ಹುಡುಕುವ ಕೆಲಸ ಆಗುತ್ತಿದೆ. ಅಂತಹ ಘಟನೆಗಳು ಮರುಕಳಿಸಬಾರದು. ಯುವಕರು ಯಾವತ್ತು ಆಕ್ರೋಶಕ್ಕೆ ಒಳಗಾಗಬಾರದು. ಕೆಲ ಯುವಕರು ಇಂದು ಮಾದಕ ವ್ಯಸನಿಗಳಾಗಿ ಸಮಾಜಕ್ಕೆ ಕಂಟಕರಾಗುತ್ತಿದ್ದಾರೆ. ಯುವಕರಲ್ಲಿ ಜಾಗೃತಿ ಕೆಲಸ ಮೂಡಿಸುವ ಕೆಲಸ ಮಾಡಬೇಕಿದೆ. ಕ್ಷುಲ್ಲಕ ಕಾರಣಕ್ಕೆ ಮನುಷ್ಯತ್ವ ಕಳೆದುಕೊಳ್ಳುವಂತಾಗಬಾರದು ಎಂದರ.
ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಹಿತ್ಯ, ಕಲೆಯಂಥ ಸೃಜನಶೀಲ ಚಟುವಟಿಕೆಗಳಿಂದ ಮಾತ್ರ ಸೌಹಾರ್ದಯುತ ಸಮಾಜ ಕಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ಕಸಾಪ ಸಾಹಿತ್ಯ ಚಟುವಟಕೆಗಳ ಮೂಲಕ ಯುವ ಜನತೆಗೆ ದಾರಿ ದೀಪವಾಗುತ್ತಿದೆ ಎಂದರು.ಇಲ್ಲಿನ ಫೇಮಸ್ ಟೀ ಸ್ಟಾಲ್ ಮಾಲೀಕ ಎಸ್.ಎಂ. ಮೊಹಿದ್ದಿನ್ ಪುಸ್ತಕ ಬಿಡುಗಡೆ ಮಾಡಿದರು. ಕೃತಿ ಕುರಿತು ಸಿಂಧನೂರಿನ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ರಾಮಣ್ಣ ಹಿರೇಭೇರಿಗಿ ಮಾತನಾಡಿದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ೧೫ಕ್ಕೂ ಹೆಚ್ಚು ಯುವ ಕವಿಗಳು ತಮ್ಮ ಕವಿತೆ ವಾಚಿಸಿದರು.ಈ ವೇಳೆ ಕೃತಿಕಾರ ರಮೇಶ ಸಿ. ಬನ್ನಿಕೊಪ್ಪ, ಮುಖ್ಯಗುರುಗಳಾದ ಅಮರೇಶ ಪಾಟೀಲ್, ಮಹಾಂತೇಶ ಗದ್ದಿ, ಕಸಾಪ ನಿಕಟಪೂರ್ವ ಅಧ್ಯಕ್ಷ ಚನ್ನಬಸಪ್ಪ ವಕ್ಕಳದ, ಬಸವರಾಜ ರ‍್ಯಾವಳದ, ಬಸವರಾಜ ಶೆಟ್ಟರ್, ರಮೇಶ ಮಾವಿನಮಡಗು, ಮಲ್ಲಿಕಾರ್ಜುನ ಯತ್ನಟ್ಟಿ, ಶಿವಲೀಲಾ ಅಯೋಧ್ಯ, ತಿಮ್ಮಣ್ಣ ನಾಯಕ, ಭೀಮಣ್ಣ ಕರಡಿ, ಮಾರುತಿ ಎನ್. ಸೇರಿ ಇತರರು ಇದ್ದರು. ಶರಣಪ್ಪ ಕೋಟ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಚಿಕ್ಕೇನಕೊಪ್ಪ, ಪಂಪಾಪತಿ ನಾಡಿಗೇರ ಮತ್ತು ಮೆಹಬೂಬ್ ಕಿಲ್ಲೇದಾರ ಕಾರ್ಯಕ್ರಮ ನಿರ್ವಹಿಸಿದರು.