ಸಾರಾಂಶ
ಬ್ಯಾಡಗಿ: ಆಶ್ರಯ ನಿವೇಶನ ಹಂಚಿಕೆ ವಿಳಂಬ ನೀತಿ ಖಂಡಿಸಿ ಪಟ್ಟಣದ ಆಶ್ರಯ ನಿವೇಶನ ವಂಚಿತ ಫಲಾನುಭವಿಗಳು ಸೋಮವಾರ ಪತ್ರ ಚಳವಳಿ ನಡೆಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದರು.ಪಟ್ಟಣದ ಪೋಸ್ಟ್ ಆಫೀಸ್ ಬಳಿ ಸೇರಿದ ಮುನ್ನೂರಕ್ಕೂ ಹೆಚ್ಚು ಆಕಾಂಕ್ಷಿಗಳು ವಿಳಂಬ ನೀತಿಯನ್ನು ಖಂಡಿಸಿ ಪುರಸಭೆ ಆಶ್ರಯ ಸಮಿತಿ, ಪುರಸಭೆ ಸರ್ವ ಸದಸ್ಯರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಹಾಕಿದರು.ಹಂಚಿಕೆಯಾಗಿಲ್ಲ: ಈ ವೇಳೆ ಮಾತನಾಡಿದ ಆಶ್ರಯ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಅವರು, ಪಟ್ಟಣದಲ್ಲಿನ ನಿವೇಶನ ರಹಿತರಿಗೆ ಕಳೆದ 8 ವರ್ಷಗಳ ಹಿಂದೆ ಮಲ್ಲೂರು ರಸ್ತೆಯಲ್ಲಿ ಪುರಸಭೆ ವತಿಯಿಂದ ಒಟ್ಟು 10 ಎಕರೆ ಜಾಗವನ್ನು ಖರಿದೀಸಿದ್ದು, ಇಲ್ಲಿಯವರೆಗೂ ನಿವೇಶನ ಹಂಚಿಕೆ ಮಾಡಿಲ್ಲ. ಕೈಯಲ್ಲಿರುವ 10 ಎಕರೆ ಜಾಗ ಹಂಚಿಕೆ ಮಾಡಲು 15 ವರ್ಷಗಳ ಬೇಕೆ ಎಂದು ಪ್ರಶ್ನಿಸಿದರು?ವಿಷ ಕುಡಿಯಬೇಕೆ?: ಫರೀದಾಬಾನು ನದಿಮುಲ್ಲಾ ಮಾತನಾಡಿ, ಪಟ್ಟಣದಲ್ಲಿನ ನಿವೇಶನರಹಿತರಿಗೆ ನಿವೇಶನ ಹಂಚಿಕೆ ಮಾಡುವಂತೆ ಪುರಸಭೆ ಎದುರು ಕಳೆದ 6 ತಿಂಗಳ ಹಿಂದೆ ಅಹೋರಾತ್ರಿ ಧರಣಿ ನಡೆಸಲಾಗಿತ್ತು. ಆಗ ಮಾರ್ಚ್ ಒಳಗೆ ನಿವೇಶನ ಹಂಚಿಕೆ ಮಾಡುವುದಾಗಿ ಭರವಸೆ ನೀಡಿದ್ದ ಆಶ್ರಯಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ತಿರುಗಿ ಮೇ ತಿಂಗಳು ಬಂದರೂ ಯಾವುದೇ ಪ್ರಕ್ರಿಯೆ ನಡೆಸದೇ ಬಡವರ ಬದುಕನ್ನು ಬೀದಿಗೆ ತಂದಿದ್ದಾರೆ. ಆದ್ದರಿಂದ ಒಂದೋ ನಮಗೆ ನಿವೇಶನ ಕೊಡಿ, ಇಲ್ಲವೇ ವಿಷ ಕೊಡಿ ಎಂದು ಆಕ್ರೋಶ ಹೊರಹಾಕಿದರು.ಅಧ್ಯಕ್ಷರೇ ರಾಜೀನಾಮೆ ಕೊಡಿ: ಪಾಂಡುರಂಗ ಸುತಾರ ಮಾತನಾಡಿ, ಕಳೆದ ಬಾರಿ ಹೋರಾಟ ನಡೆಸಿದ ಸಂದರ್ಭದಲ್ಲಿ ಶೀಘ್ರ ನಿವೇಶನ ಹಂಚಿಕೆ ಭರವಸೆ ಕೊಟ್ಟು ವಾಪಸ್ ಕಳಿಸಿದ್ದ ಅಶ್ರಯ ಸಮಿತಿ ಅಧ್ಯಕ್ಷ ಮುನಾಫ್ ಎರೆಶೀಮಿ ಹಾಗೂ ಸದಸ್ಯರು ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ವಿಫರಾಗಿದ್ದಾರೆ. ಇವರಿಗೆ ರಾಜಕೀಯ ಸ್ಥಾನಮಾನ ಪಡೆದುಕೊಳ್ಳಲಷ್ಟೇ ಅಧ್ಯಕ್ಷರಾದಂತೆ ಕಾಣುತ್ತದೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಆಗ್ರಹಿಸಿದರು.ವಂತಿಕೆ ಹಣ ಬಡ್ಡಿ ಸಹಿತ ಮರಳಿಸಿ: ರೇಣುಕಾ ಮಡಿವಾಳರ ಮಾತನಾಡಿ, ನಿವೇಶನ ಕೊಡುವುದಾಗಿ ನಂಬಿಸಿ ಫಲಾನುಭವಿಗಳಿಂದ ₹30 ಸಾವಿರ ಹಣವನ್ನು ಭರಣ ಮಾಡಿಸಿಕೊಂಡು ಎರಡು ವರ್ಷ ಕಳೆದಿದೆ. ಆ ಮೊತ್ತ ವಾಪಸ್ ಕೊಡುವ ಭರವಸೆ ನೀಡಿದ ನೀವು ಹಣವನ್ನು ಕೊಡದೇ ನಮಗೆ ಅನ್ಯಾಯವೆಸಗಿದ್ದಿರಿ. ವಂತಿಕೆ ಹಣ ₹1.75 ಕೋಟಿ ಎಲ್ಲಿ ಹೋಗಿದೆ ತಿಳಿಸಿ ಎಂದು ಪ್ರಶ್ನಿಸಿದರು.ಈ ವೇಳೆ ಫರೀದಾಬಾನು ಕೊಳಕೆರಿ, ಮಂಜುಳಾ ವಡ್ಡರ, ಜ್ಯೋತಿ ದುರಮಗೇರ, ಅನ್ನಪೂರ್ಣ ಎಸ್.ಎಚ್. ರೇಣುಕಾ ಗಡಾದ, ಸುಧಾ ಬೇವಿನಮರದ, ಈರಮ್ಮ ಕಾಡಸಾಲಿ ಸೇರಿದಂತೆ ಆಶ್ರಯ ಮನೆ ಹೋರಾಟ ಸಮಿತಿ ಸದಸ್ಯರು ಹಾಗೂ ನೂರಾರು ಫಲಾನುಭವಿಗಳು ಭಾಗವಹಿಸಿದ್ದರು.