ಸಾರಾಂಶ
ಪುತ್ತೂರು : ಭೂತಾನ್‌ನಿಂದ ಭಾರತಕ್ಕೆ ಅಡಕೆ ಆಮದು ನಡೆಯುತ್ತಿರುವುದರಿಂದ ಇಲ್ಲಿನ ಅಡಕೆ ಬೆಳೆಗಾರರಿಗೆ ಆರ್ಥಿಕ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ತನ್ನ ಈ ಆದೇಶ ವಾಪಸ್ ಪಡೆಯಬೇಕು ಮತ್ತು ವಿದೇಶದಿಂದ ಅಕ್ರಮವಾಗಿ ಅಡಕೆ ಭಾರತಕ್ಕೆ ಬರುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದೆ. ಅದರಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯೆಲ್‌ಗೆ ಪತ್ರ ಬರೆದು ಆಗ್ರಹಿಸಿದ್ದಾರೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಅವರು ಶನಿವಾರ ಶಾಸಕ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಯಾವುದೇ ರೀತಿಯ ಕನಿಷ್ಠ ಆಮದು ನಿಯಮಗಲಿಲ್ಲದೆ ಭೂತಾನ್ ದೇಶದಿಂದ ಅಡಕೆ ಆಮದು ಮಾಡಲು ಕೇಂದ್ರ ಸರಕಾರ ಅನುಮತಿ ನೀಡಿದೆ. ಇದರಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಅಡಕೆ ಧಾರಣೆ ಕುಸಿತಗೊಂಡು ರೈತರು ಕಂಗಾಲಾಗಿದ್ದಾರೆ. ಅಡಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಕೇಂದ್ರ ಸರಕಾರದ ಮೇಲೆ ಒತ್ತಡ ತರುವಂತೆ ವಿನಂತಿ ಮಾಡಿದ್ದೆ. ಅದರಂತೆ ಕೇಂದ್ರ ಸಚಿವರಿಗೆ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ ಎಂದು ಅವರು ತಿಳಿಸಿದರು.
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಡಕೆ ಪ್ರಮುಖ ಬೆಳೆಯಾಗಿದೆ. ಅಡಕೆ ಬೆಳೆಗಾರರ ಹಿತಾಸಕ್ತಿ ಕಾಪಾಡುವಲ್ಲಿ ಪಕ್ಷ ಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ. ಜಿಲ್ಲೆಯ ಸಂಸದರು, ನಾವು ಶಾಸಕರು ಎಲ್ಲ ಸೇರಿ ಸರಕಾರಗಳ ಮೇಲೆ ಒತ್ತಡ ತರಬೇಕಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.