ಸಾರಾಂಶ
ಮೇ 7ರಂದು ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುವಂತೆ ವಸತಿ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ಬುಧವಾರ ಪತ್ರ ಬರೆಯುವ ಮೂಲಕ ಮತದಾನ ಜಾಗೃತಿ ಮೂಡಿಸಿದರು.
ಧಾರವಾಡ:
ಪ್ರೀತಿಯ ತಂದೆ, ತಾಯಿ, ಅಣ್ಣ, ಅಕ್ಕಂದಿರಿಗೆ ನಮ್ಮ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಮೇ 7ರಂದು ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುವಂತೆ ವಸತಿ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ಬುಧವಾರ ಪತ್ರ ಬರೆಯುವ ಮೂಲಕ ಮತದಾನ ಜಾಗೃತಿ ಮೂಡಿಸಿದರು.ಎಸ್ಸೆಸ್ಲೆಲ್ಸಿ ನಂತರದ ವಸತಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ಮತದಾನದಿಂದ ದೂರ ಉಳಿಯದೇ ನಿಮ್ಮ ಮತದಾನದ ಹಕ್ಕನ್ನು ಚಲಾಯಿಸಿ. ಸದೃಢ ಭಾರತ ನಿರ್ಮಾಣಕ್ಕೆ ಕೈ ಜೋಡಿಸಿ ಎಂದು ಪತ್ರಗಳ ಮೂಲಕ ಮನವಿ ಮಾಡಿದರು.ಮೂರ್ನಾಲ್ಕು ದಶಕಗಳ ಹಿಂದೆ ಜನರಿಗೆ ಪತ್ರಗಳಿಂದ ಬೇರೆ ಬೇರೆ ಸ್ಥಳಗಳಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಮಾಹಿತಿ ದೊರೆಯುತ್ತಿತ್ತು. ಇಂದು ಮೊಬೈಲ್, ಅಂತರ್ಜಾಲ, ಮಾಹಿತಿ ತಂತ್ರಜ್ಞಾನ ಬೆಳವಣಿಗೆಯಿಂದ ಕ್ಷಣಾರ್ಧದಲ್ಲಿ ಮಾಹಿತಿ ಪಡೆಯಬಹುದಾಗಿದೆ. ಮಕ್ಕಳು ತಮ್ಮ ಪಾಲಕರಿಗೆ ಪತ್ರ ಬರೆಯುವ ಮೂಲಕ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರಣೆ ನೀಡಿದ್ದಾರೆ. ಮಕ್ಕಳ ಪತ್ರ ಬರೆದಿರುವುದನ್ನು ಓದಿದಾಗ ಪಾಲಕರಿಗೆ ಖುಷಿ ನೀಡಲಿದೆ. ಅಲ್ಲದೇ ತಪ್ಪದೇ ಮತ ಚಲಾಯಿಸುವುದರಿಂದ, ಮತದಾನ ಪ್ರಮಾಣ ಹೆಚ್ಚಳವಾಗಲಿದೆಯೆಂದು ಸ್ವೀಪ್ ನೋಡಲ್ ಅಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.
ಜಿಪಂ ಯೋಜನಾ ನಿರ್ದೇಶಕ ದೀಪಕ ಮಡಿವಾಳರ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಗೋಪಾಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳಿದ್ದರು.