ಕೊಪ್ಪಳ ನಗರಸಭೆ ಮುಂದೆ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ 67ನೇ ದಿನದ ಧರಣಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸಾಮೂಹಿಕ ಪತ್ರ ಬರೆಯಲಾಯಿತು.

ಕೊಪ್ಪಳ: ನಗರಸಭೆ ಮುಂದೆ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ 67ನೇ ದಿನದ ಧರಣಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸಾಮೂಹಿಕ ಪತ್ರ ಬರೆಯಲಾಯಿತು.

ಕೊಪ್ಪಳ-ಭಾಗ್ಯನಗರ 1.5 ಲಕ್ಷ ಜನರ ಆರೋಗ್ಯ ರಕ್ಷಣೆಯ ಉದ್ದೇಶದಿಂದ ₹54 ಸಾವಿರ ಕೋಟಿ ಹೂಡಿಕೆ ಮಾಡಿ ಬಿಎಸ್‌ಪಿಎಲ್‌ ವಿಸ್ತರಣೆ ಮಾಡುವುದನ್ನು ತಡೆಯಬೇಕು, ಈಗಿರುವ ಎಂಎಸ್‌ಪಿಎಲ್‌ ಪೆಲ್ಲೆಟ್ ಘಟಕದಿಂದ ನಗರದ ಅರ್ಧಭಾಗ ಮಾಲಿನ್ಯವಾಗಿದ್ದರ ಆಧಾರದಲ್ಲಿ ಆ ಘಟಕ ಕಾರ್ಯಾಚರಣೆ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಆಂದೋಲನ ನಡೆಸಲಾಯಿತು.

ಈ ಪತ್ರ ಚಳವಳಿಗೆ ಚಾಲನೆ ನೀಡಿದ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, 20 ಕಾರ್ಖಾನೆ ಬಾಧಿತ ಹಳ್ಳಿಗಳ ಮಾಲಿನ್ಯ ಪರಿಸ್ಥಿತಿ ಎಲ್ಲೆ ಮೀರಿ ಹೋಗಿದೆ. ಅವರು ಗ್ರಾಮಗಳ ಸತ್ಯ ದರ್ಶನ ಮಾಡಬೇಕು ಎಂದು ಕರೆಯುತ್ತಿದ್ದೇವೆ. ಆದರೂ ಇತ್ತ ಕಡೆ ಹೊರಳಿ ನೋಡಲಾರರು. ಇಲ್ಲಿನ ಶಾಸಕರು, ಸಂಸದರು, ಸಚಿವರು, ಮುಖ್ಯಮಂತ್ರಿ ಸಲಹೆಗಾರರು ಹೋರಾಟಕ್ಕೆ ಬೆಂಬಲಿಸುತ್ತೇವೆ ಎನ್ನುವುದನ್ನು ಬಿಡಬೇಕು. ಮೊದಲು ಸರ್ಕಾರದಿಂದ ಬಿಎಸ್‌ಪಿಎಲ್‌ ವಿಸ್ತರಣೆಯ ತಡೆ ಆದೇಶ ತರಬೇಕು ಎಂದು ಹೇಳಿದರು.

ಸಂಚಾಲಕ ಡಿ.ಎಚ್. ಪೂಜಾರ ಮಾತನಾಡಿ, ಜನಸಾಮಾನ್ಯರು, ವಿದ್ಯಾರ್ಥಿಗಳು, ನಗರದ ಪ್ರಜ್ಞಾವಂತ ಜನರು ಈ ಪತ್ರ ಚಳವಳಿಯ ಆಂದೋಲನದಲ್ಲಿ ಪಾಲ್ಗೊಳ್ಳಲಿ ಎಂದರು.

ಧರಣಿಯಲ್ಲಿ ಪ್ರಕಾಶಕ ಡಿ.ಎಂ. ಬಡಿಗೇರ, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಕವಿಯತ್ರಿ ಪುಷ್ಪಲತಾ ಏಳುಬಾವಿ, ಶರಣು ಗಡ್ಡಿ, ಎಸ್.ಬಿ. ರಾಜೂರು, ಚಾರಣ ಬಳಗದ ಚಂದ್ರಗೌಡ ಪಾಟೀಲ್, ಸಾವಿತ್ರಿ ಮುಜುಮದಾರ್, ಮಹಾದೇವಪ್ಪ ಎಸ್. ಮಾವಿನಮಡು, ಯಮನೂರಪ್ಪ ಹಾಲಳ್ಳಿ ಬಸಾಪುರ, ಗವಿಸಿದ್ದಪ್ಪ ಹಲಿಗಿ, ರವಿ ಕಾಂತನವರ, ಭುಜಂಗ ಸ್ವಾಮಿ, ಶಿವಪ್ಪ ಜಲ್ಲಿ, ರಾಜಶೇಖರ ಏಳುಬಾವಿ, ಹನುಮಪ್ಪ ಕಟಿಗಿ, ಶಿವಕುಮಾರ ಕುಸುಮ, ಬಸವರಾಜ್ ನರೇಗಲ್, ಶೇಖರಯ್ಯ ಹೊಸಮನಿ, ಶಿವಪ್ಪ ಹಡಪದ ಪತ್ರ ಚಳವಳಿ ಆಂದೋಲನ ನಡೆಸಿದರು.