ಸಾರಾಂಶ
ಗೌರವಧನ ಹೆಚ್ಚಿಸಿ ಕನಿಷ್ಠ ವೇತನ ಜಾರಿಗೆಗೆ ಆಗ್ರಹ ಮಾಡಲಾಯಿತು. ವಿವಿಧ ಬೇಡಿಕೆ ಈಡೇರಿಸಲು ಪಿಎಂ, ಸಿಎಂಗೆ ಮನವಿಯನ್ನು ಸಿಂಧನೂರಿನಲ್ಲಿ ಅಂಚೆ ಮೂಲಕ ಕಳಿಸಲಾಯಿತು.
ಕನ್ನಡಪ್ರಭ ವಾರ್ತೆ ಸಿಂಧನೂರು
ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಶನ್ ರಾಜ್ಯ ಸಮಿತಿಯ ಕರೆಯ ಮೇರೆಗೆ ಸಿಂಧನೂರು ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರತ್ಯೇಕ ಪತ್ರ ಬರೆದು ಸಾಮೂಹಿಕವಾಗಿ ನಗರದ ಮುಖ್ಯ ಅಂಚೆ ಕಚೇರಿಯಲ್ಲಿರುವ ಅಂಚೆ ಪೆಟ್ಟಿಗೆಯಲ್ಲಿ ಹಾಕಿದರು.ದೇಶದಾದ್ಯಂತ ಐಸಿಡಿಎಸ್ ಯೋಜನೆಯಲ್ಲಿ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕರಿಗೆ ಕ್ರಮವಾಗಿ ರು.4500, ರು.2250 ಗೌರವಧನದಲ್ಲಿ ದುಡಿಸಿಕೊಳ್ಳುತ್ತಿದ್ದು, ಕಳೆದ 10 ವರ್ಷಗಳಿಂದ ಗೌರವಧನ ಹೆಚ್ಚಿಸಿರುವುದಿಲ್ಲ. ಕಾರಣ ಗೌರವಧನ ಹೆಚ್ಚಿಸಿ ಕನಿಷ್ಠ ವೇತನ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಗ್ರಾಚ್ಯುಟಿ, ವೈದ್ಯಕೀಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನೀಡುತ್ತಿರುವ ಅನುದಾನ ಹೆಚ್ಚಳ ಹಾಗೂ ಪೋಷಣ್ ಕಾರ್ಯಕ್ರಮದಡಿ ಮೊಬೈಲ್ ಹಣ ಹೆಚ್ಚಳ ಮಾಡಿ ಬೆಲೆ ಏರಿಕೆಗೆ ತಕ್ಕಂತೆ ಗುಣಮಟ್ಟದ ಮೊಬೈಲ್ ಖರೀದಿಗೆ ಹಣ ಬಿಡುಗಡೆ ಮಾಡುವಂತೆ ಪ್ರಧಾನ ಮಂತ್ರಿಗೆ ಪತ್ರ ಬರೆದರು.ಅದೇ ರೀತಿ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬರೆದ ಪತ್ರದಲ್ಲಿ ರು.15 ಸಾವಿರ ಕಾರ್ಯಕರ್ತೆಯರಿಗೆ, ರು.10 ಸಾವಿರ ಸಹಾಯಕಿಯರಿಗೆ ಮತ್ತು ನಿವೃತ್ತಿಯಾದವರಿಗೆ ರು.3 ಲಕ್ಷ ಇಡಿಗಂಟು ಕೊಡುವುದಾಗಿ ನೀಡಿದ 6ನೇ ಗ್ಯಾರಂಟಿ ಭರವಸೆ ಜಾರಿಗೊಳಿಸಬೇಕು. ಕನಿಷ್ಠ ವೇತನವನ್ನು ವೈಜ್ಞಾನಿಕವಾಗಿ ಮತ್ತು ಶಾಸನಬದ್ಧವಾಗಿ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಜಾರಿ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಮುಖಂಡರಾದ ಡಿ.ಎಚ್.ಕಂಬಳಿ, ಗಿರಿಜಮ್ಮ ದಢೇಸುಗೂರು, ಆದಿಲಕ್ಷ್ಮಿ, ಸುಲೋಚನಾ, ಲಕ್ಷ್ಮಿ ದಢೇಸುಗೂರು, ಶಾಂತಾ ಗೊರೇಬಾಳ, ಅಂಬುಜಾ ಇದ್ದರು.