ಪಾರದರ್ಶಕ ಚುನಾವಣೆಗಾಗಿ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ

| Published : Feb 03 2024, 01:47 AM IST

ಸಾರಾಂಶ

ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ದೇಶಾದ್ಯಂತ ಆನ್‌ಲೈನ್‌ ಹಣಕಾಸು ವ್ಯವಹಾರ ಸ್ಥಗಿತಗೊಳಿಸುವದು ಸೇರಿದಂತೆ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜೈ ಭಾರತ ಮಾತಾ ಸೇವಾ ಸಮಿತಿ ಒತ್ತಾಯಿಸಿದೆ.
ಕನ್ನಡಪ್ರಭ ವಾರ್ತೆ, ಬೀದರ್‌

ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ದೇಶಾದ್ಯಂತ ಆನ್‌ಲೈನ್‌ ಹಣಕಾಸು ವ್ಯವಹಾರ ಸ್ಥಗಿತಗೊಳಿಸುವದು ಸೇರಿದಂತೆ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜೈ ಭಾರತ ಮಾತಾ ಸೇವಾ ಸಮಿತಿ ಒತ್ತಾಯಿಸಿದೆ.ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಸದ್ಗುರು ಹವಾ ಮಲ್ಲಿನಾಥ ಮಹಾರಾಜರ ಮಾರ್ಗದರ್ಶನದಂತೆ ಸಮಿತಿ ರಾಷ್ಟ್ರೀಯ ವಕ್ತಾರ ವೈಜನಾಥ ಝಳಕಿ, ರಾಜ್ಯ ಸಮಿತಿ ಪ್ರಮುಖರಾದ ನಿವೃತ್ತ ಪೊಲೀಸ್‌ ಅಧಿಕಾರಿಗಳಾದ ಎಸ್‌.ವಿ. ಆವಂಟಿ, ಗುರುಸಿದ್ದಪ್ಪ ಬೆನಕನಳ್ಳಿ ಅವರು ಗುರುವಾರ ಬೆಂಗಳೂರಿನಲ್ಲಿ ರಾಜ್ಯ ಚುನಾವಣಾ ಆಯುಕ್ತರ ಮೂಲಕ ಭಾರತ ಚುನಾವಣಾ ಆಯೋಗದ ಮುಖ್ಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ ವಿವಿಧ ಬೇಡಿಕೆ ಮುಂದಿಟ್ಟಿದ್ದಾರೆ.

ಚುನಾವಣೆ ನ್ಯಾಯಸಮ್ಮತ, ಮುಕ್ತ ಹಾಗೂ ಪಾರದರ್ಶಕವಾಗಿ ನಡೆಯಬೇಕು. ಹೀಗಾಗಿ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ದಿನದಿಂದ ಚುನಾವಣೆ ಫಲಿತಾಂಶ ಪ್ರಕಟವಾಗುವವರೆಗೆ ಫೋನ್‌-ಪೇ, ಜಿ-ಪೇ ನಂತಹ ಆನ್‌ಲೈನ್‌ ಹಣಕಾಸು ವ್ಯವಹಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಎಂದಿದ್ದಾರೆ.ಮದ್ಯದ ಉತ್ಪಾದನೆ ಜೊತೆಗೆ ಮಾರಾಟವನ್ನು ನಿಷೇಧಿಸಬೇಕು. ಸಿಗರೇಟ್‌, ಗುಟ್ಕಾ ಇನ್ನಿತರೆ ಮಾದಕ ವಸ್ತು ಮಾರಾಟ ನಿಲ್ಲಿಸಬೇಕು. ಮದ್ಯದಂಗಡಿ, ಧಾಬಾ, ಪಬ್‌, ಬಾರ್‌ಗಳನ್ನು ಸಹ ಈ ಅವಧಿಯಲ್ಲಿ ಮುಚ್ಚಿಡಬೇಕು ಎಂದು ಒತ್ತಾಯಿಸಿದ್ದಾರೆ. ಚುನಾವಣೆಯಲ್ಲಿ ಮತದಾರರ ಮೇಲೆ ಆಮೀಷವೊಡ್ಡುವ ವಿವಿಧ ಪ್ರಯತ್ನ ನಡೆಯುತ್ತವೆ. ಇದೀಗ ಆನ್‌ಲೈನ್‌ ಹಣಕಾಸಿನ ದಂಧೆ ಜೋರಾಗಿದೆ. ಹೀಗಾಗಿ ಮೊಬೈಲ್‌ ಆ್ಯಪ್‌ಗಳಿಂದ ಹಣ ವರ್ಗಾವಣೆ ನಡೆಸಬಾರದು. ಮದ್ಯ ಸೇರಿ ಮಾದಕ ವಸ್ತುಗಳ ತಯಾರಿಕೆ, ಮಾರಾಟವನ್ನು ಸಂಪೂರ್ಣ ಬಂದ್‌ ಮಾಡಬೇಕು. ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಅಕ್ರಮ ನಡೆಯಬಾರದು ಎಂದಿದ್ದಾರೆ.

ಪ್ರತಿಯೊಬ್ಬರು ಮತದ ಹಕ್ಕನ್ನು ದೇಶದ ಹಿತ ಹಾಗೂ ಪ್ರಜಾಪ್ರಭುತ್ವ, ಸಂವಿಧಾನ ಗಟ್ಟಿಗೊಳಿಸಲು ಬಳಸಬೇಕು. ಯಾವುದೇ ಕಾರಣಕ್ಕೂ ಚುನಾವಣೆ ವ್ಯವಸ್ಥೆಯಲ್ಲಿ ಅಕ್ರಮಗಳು ನಡೆಯಬಾರದು. ಈ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದೇಶದ ಜನರಲ್ಲಿ ರಾಷ್ಟ್ರಪ್ರೇಮ ಮೂಡಬೇಕು ಎಂದು ತಿಳಿಸಿದ್ದಾರೆ. ಎಲ್ಲಕಿಂತಲೂ ರಾಷ್ಟ್ರಧರ್ಮ ಶ್ರೇಷ್ಠ ಎಂಬ ಸಂದೇಶ ಸಾರುತ್ತ ಜೈ ಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕರಾದ ಹವಾ ಮಲ್ಲಿನಾಥ ಮಹಾರಾಜ ಅವರು ದೇಶವ್ಯಾಪಿ ಸಂಚರಿಸುತ್ತಿದ್ದಾರೆ. ಪಾರದರ್ಶಕ ಚುನಾವಣೆ ನಡೆಯಬೇಕು ಹಾಗೂ ಯೋಗ್ಯರ ಆಯ್ಕೆ ಆಗಬೇಕೆಂಬುವದು ಪೂಜ್ಯರ ಆಶಯವಾಗಿದೆ. ಅವರ ಮಾರ್ಗದರ್ಶನದಲ್ಲಿ ಬರುವ ದಿನಗಳಲ್ಲಿ ಇನ್ನಷ್ಟು ಜನಜಾಗೃತಿ ಮತ್ತು ಸಮಾಜಮುಖಿ ಕಾರ್ಯಕ್ರಮಗಳು ಜರುಗಲಿವೆ ಎಂದು ವೈಜಿನಾಥ ಝಳಕಿ ತಿಳಿಸಿದ್ದಾರೆ.