ಸಾರಾಂಶ
ಶಿವಮೊಗ್ಗ: ಶಿವಮೊಗ್ಗದ ವಿಮಾನ ನಿಲ್ದಾಣ ಕಾಮಗಾರಿ ಸೇರಿದಂತೆ ಹಲವು ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದ್ದು, ಎಲ್ಲ ಯೋಜನೆಗಳ ಕುರಿತು ತನಿಖೆ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ವಿಮಾನ ನಿಲ್ದಾಣ ಕಾಮಗಾರಿಗೆ ಮೊದಲು ₹172 ಕೋಟಿ ನಿಗದಿಯಾಗಿತ್ತು. ಪೂರ್ಣಗೊಳ್ಳುವ ಹೊತ್ತಿಗೆ ₹450 ಕೋಟಿ ಆಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದು ಸಮಗ್ರ ತನಿಖೆಗೆ ಆಗ್ರಹಿಸಿದ್ದೇನೆ ಎಂದರು.ಕೇವಲ ಶಿವಮೊಗ್ಗದ ವಿಮಾನ ನಿಲ್ದಾಣ ಮಾತ್ರವಲ್ಲ, ಇಲ್ಲಿ ಹೆದ್ದಾರಿ ಕಾಮಗಾರಿಗಳಾಗಿವೆ. ಮುಖ್ಯವಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವಾರು ಕಾಮಗಾರಿಗಳು ಕಳಪೆ ಮತ್ತು ಅವ್ಯವಹಾರದಿಂದ ಕೂಡಿವೆ. ಈ ಕುರಿತು ಸಾಕಷ್ಟು ದೂರು ಬಂದಿವೆ. ಇವುಗಳನ್ನು ಕೂಡ ತನಿಖೆ ಮಾಡಲಾಗುವುದು. ಈಗಾಗಲೇ ಮುಖ್ಯಮಂತ್ರಿ ಅವರಿಗೆ ಈ ವಿಷಯ ತಿಳಿಸಿ ತನಿಖೆಗೆ ಆಗ್ರಹಿಸಿದ್ದೇನೆ ಎಂದರು.
ಬಿಜೆಪಿ ಸರ್ಕಾರವಿದೆ ಎಂಬ ಭ್ರಮೆ:ರಾಜ್ಯದಲ್ಲಿ ಇನ್ನೂ ಬಿಜೆಪಿ ಸರ್ಕಾರವೇ ಇದೆ ಎಂಬ ಭ್ರಮೆಯಲ್ಲಿ ಸಂಸದ ರಾಘವೇಂದ್ರ ಇರುವಂತಿದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ, ಜಿಲ್ಲೆಯಲ್ಲಿ ನಾನೊಬ್ಬ ಉಸ್ತುವಾರಿ ಸಚಿವನಿದ್ದೇನೆ ಎಂಬ ಅರಿವು ಅವರಿಗೆ ಇರಬೇಕು ಎಂದು ಸಚಿವ ಮಧು ಬಂಗಾರಪ್ಪ ತೀವ್ರ ವಾಗ್ದಾಳಿ ನಡೆಸಿದರು.
ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದಿದ್ದರೂ ಟೇಪ್ ಕಟ್ ಮಾಡುವ ಹುಚ್ಚಾಟ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಕೆಲಸವಾದರೂ ಅವು ರಾಜ್ಯ ಸರ್ಕಾರದ ಅಡಿಯಲ್ಲಿಯೇ ಬರುತ್ತವೆ. ಯಾವುದೇ ಕಾರ್ಯಕ್ರಮವೇ ಆಗಲಿ, ಉದ್ಘಾಟನೆ ಆಗಬೇಕಾದರೆ ಅದಕ್ಕೊಂದು ನಿಯಮ ಇರುತ್ತದೆ. ಆದರೆ, ಸಂಸದರು ಅದನ್ನೇ ಮರೆತಂತಿದೆ ಎಂದು ಎಂದು ಟೀಕಿಸಿದರು.- - - -ಫೋಟೋ: ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ