ಸಾರಾಂಶ
- ಜಿಲ್ಲಾಮಟ್ಟದ ಬ್ಯಾಂಕರ್‌ಗಳ ಭದ್ರತಾ ಸಭೆಯಲ್ಲಿ ಡಿಸಿ ಗಂಗಾಧರ ಸ್ವಾಮಿ
- - - ಕನ್ನಡಪ್ರಭ ವಾರ್ತೆ ದಾವಣಗೆರೆನ್ಯಾಮತಿ ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ಕಳೆದ ತಿಂಗಳು ನಡೆದ ಬಹುಕೋಟಿ ಚಿನ್ನಾಭರಣ ದರೋಡೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯುವುದಾಗಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಮಟ್ಟದ ಬ್ಯಾಂಕರ್‌ಗಳ ಭದ್ರತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಸ್‌ಬಿಐ ದರೋಡೆ ಪ್ರಕರಣ ಅತ್ಯಂತ ಗಂಭೀರವಾದುದು. ಬ್ಯಾಂಕ್‌ಗಳಲ್ಲಿ ಸಾರ್ವಜನಿಕರಿಗೆ ಸೇರಿದ ₹5 ಕೋಟಿಗಿಂತ ಹೆಚ್ಚು ಹಣ ಮೋಸವಾದರೆ ಅಂತಹ ಪ್ರಕರಣಗಳನ್ನು ಸ್ವಯಂ ಆಗಿ ಸಿಬಿಐ ತನಿಖೆಗೆ ಒಪ್ಪಿಸಬೇಕು. ಈ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿಲ್ಲಾಡಳಿತಕ್ಕೆ ಪತ್ರ ಬರೆದರೆ, ನ್ಯಾಮತಿ ಬ್ಯಾಂಕ್ ದರೋಡೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಸರ್ಕಾರಕ್ಕೆ ಪತ್ರ ಬರೆಯುವೆ ಎಂದು ತಿಳಿಸಿದರು.ಈವರೆಗೆ ಬ್ಯಾಂಕ್‌ಗಳ ಖಾತೆಗಳಲ್ಲಿ ಮೋಸವಾಗಿದ್ದನ್ನು ಕಂಡಿದ್ದೆ. ಆದರೆ, ಬ್ಯಾಂಕ್‌ನಲ್ಲಿಟ್ಟಿದ್ದ ಆಭರಣ, ಹಣವೇ ದರೋಡೆಯಾದರೆ ಜನ ಯಾರನ್ನು ನಂಬಬೇಕು? ಪ್ರತಿ 3 ತಿಂಗಳಿಗೊಮ್ಮೆ ಬ್ಯಾಂಕ್ ಗಳ ರಕ್ಷಣೆ, ಸುರಕ್ಷತೆಗೆ ಸಂಬಂಧಿಸಿದಂತೆ ಆಡಿಟ್ ಮಾಡದಿದ್ದರೆ ಜನರು ನಿಮ್ಮ ಮೇಲೆ ಹೇಗೆ ನಂಬಿಕೆ ಇಡಬೇಕು? ನಮ್ಮ ತಾತನ ಕಾಲದ ಸುರಕ್ಷತಾ ಕ್ರಮಗಳನ್ನೇ ಇಂದಿಗೂ ನಂಬಿಕೊಂಡು ಕುಳಿದರೆ ಈ ಕಾಲದಲ್ಲೂ ಬ್ಯಾಂಕ್‌ಗಳನ್ನು ಹೇಗೆ ನಡೆಸಲು ಸಾಧ್ಯ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಪ್ರತಿ 1 ಲಕ್ಷ ಜನರ ರಕ್ಷಣೆಗೆ ಇರುವುದು ಕೇವಲ 145 ಪೊಲೀಸರು ಮಾತ್ರ. ಪೊಲೀಸ್ ಇಲಾಖೆಯಲ್ಲೂ ಸಿಬ್ಬಂದಿ ಕೊರತೆ ಇದೆ. ಪೊಲೀಸರದ್ದು ಬರೀ ಬ್ಯಾಂಕ್‌ಗಳನ್ನೇ ಕಾಯುವುದೇ ಕೆಲಸವಲ್ಲ. ಆಯಾ ಕೆಲಸವನ್ನು ಬ್ಯಾಂಕ್‌ಗಳೇ ಮಾಡಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಮಾತಿನ ಚಾಟಿ ಬೀಸಿದರು.ಬಹುಕೋಟಿ ಮೌಲ್ಯದ ಚಿನ್ನಾಭರಣ, ನಗದು ದರೋಡೆ ಪ್ರಕರಣದ ನಂತರವಾದರೂ ಬ್ಯಾಂಕ್‌ಗಳ ರಕ್ಷಣೆ ಸಂಬಂಧ ಯಾವುದಾದರೂ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೀರಾ? ಈ ಬಗ್ಗೆ ಜಿಲ್ಲಾಡಳಿತದಿಂದ ರಾಜ್ಯದ ಎಲ್ಲ ಬ್ಯಾಂಕ್‌ನ ಕೇಂದ್ರ ಕಚೇರಿ ಮುಖ್ಯಸ್ಥರಿಗೆ, ಎಸ್‌ಎಲ್‌ಬಿಸಿ ಪ್ರಧಾನ ಕಾರ್ಯದರ್ಶಿಗಳಿಗೂ ಪತ್ರ ಬರೆಯಲಾಗುವುದು. ಬ್ಯಾಂಕ್ ಭದ್ರತೆ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಬ್ಯಾಂಕ್ ನಿಯಮ- ನಿಬಂಧನೆಗಳನ್ನು ಅಧಿಕಾರಿಗಳು ಮೊದಲು ಕಡ್ಡಾಯವಾಗಿ ಪಾಲಿಸಬೇಕು ಎಂದು ತಾಕೀತು ಮಾಡಿದರು.
ಬ್ಯಾಂಕ್‌ಗಳು ತಮ್ಮ ಮುಖ್ಯ ಕೆಲಸ ಸಾಲ ವಿತರಣೆ ಬಗ್ಗೆ ಗಮನಹರಿಸಲಿ. ಪ್ರಸ್ತುತ ಬಡ್ಡಿ ದರಗಳು ಜನರಿಗೆ ತೀರಾ ಕಷ್ಟವಾಗಿವೆ. ಹಾಗಾಗಿ, ಬಡ್ಡಿ ದರಗಳನ್ನು ಬ್ಯಾಂಕ್‌ಗಳು ಕೈಗೆಟುಕುವಂತೆ ಮಾಡಲಿ. ಸಾರ್ವಜನಿಕರಿಗೆ ನೀವು ದಾರಿ ದೀಪವಾಗಬೇಕು. ಜನರ ನಂಬಿಕೆಗಾಗಿ ನೀವು ಕೆಲಸ ಮಾಡಿ, ನಿಮ್ಮ ಬ್ಯಾಂಕ್ ಭದ್ರತೆ ಗಟ್ಟಿಗೊಳಿಸಿ. ಜನರಿಗೆ ಸಾಲದ ವಿವರದ ಬಗ್ಗೆ ಸರಿಯಾದ ಮಾಹಿತಿ ನೀಡಿ. ಸಾಲ ಪಡೆದವರು ಮರುಪಾವತಿ ವಿಳಂಬವಾದರೆ ಒಂದೆರಡು ತಿಂಗಳ ಕಾಲವಕಾಶ ನೀಡಿ ಎಂದು ಡಿಸಿ ಸೂಚಿಸಿದರು.ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಜಿಪಂ ಮುಖ್ಯ ನಿರ್ವಹಣಾಧಿಕಾರಿ ಸುರೇಶ ಬಿ. ಇಟ್ನಾಳ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ.ಸಂತೋಷ್, ಲೀಡ್ ಬ್ಯಾಂಕ್ ಮ್ಯಾನೇಜರ್ ಸಿದ್ಧಾರ್ಥ್, ಪೊಲೀಸ್ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ ಇದ್ದರು.
- - - -19ಕೆಡಿವಿಜಿ51: ದಾವಣಗೆರೆಯಲ್ಲಿ ನಡೆದ ಜಿಲ್ಲಾಮಟ್ಟದ ಬ್ಯಾಂಕರ್‌ಗಳ ಭದ್ರತಾ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಮಾತನಾಡಿದರು.