ಮಂಗಳವಾರ ಪೇಟೆ ಗ್ರಾಮದ ಸರ್ವೇ ನಂಬರ್ 52, 53 ಮತ್ತು 67ರಲ್ಲಿ ಉಳುವವನೆ ಭೂಮಿ ಒಡೆಯ ಯೋಜನೆಯಲ್ಲಿ 16 ಮಂದಿ ರೈತರಿಗೆ ಜಮೀನು ಮಂಜೂರಾಗಿದೆ. ಕಳೆದ 70 ವರ್ಷಗಳಿಂದ ಅನುಭೋಗದಲ್ಲಿದ್ದು, ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಸಿದ್ದೇಗೌಡ ಎಂಬ ವ್ಯಕ್ತಿ ಹಣ ಬಲ, ತೋಳ್ಬಲ ಪ್ರಯೋಗಿಸಿ ಜಮೀನನ್ನು ವಶಕ್ಕೆ ಪಡೆಯುವ ಪ್ರಯತ್ನ ಮಾಡುತ್ತಿದ್ದಾನೆ.

ಕನ್ನಡಪ್ರಭ ವಾರ್ತೆ ರಾಮನಗರ

ಚನ್ನಪಟ್ಟಣ ತಾಲೂಕು ಮಂಗಳವಾರ ಪೇಟೆ ಗ್ರಾಮದಲ್ಲಿ ಉಳುವವನೆ ಭೂಮಿ ಒಡೆಯ ಯೋಜನೆಯಲ್ಲಿ ಸಿಕ್ಕ ಕೃಷಿ ಭೂಮಿ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುವ 16 ರೈತ ಕುಟುಂಬಗಳು ಇದೀಗ ದಯಾಮರಣ ಕೋರಿ ರಾಷ್ಟ್ರಪತಿಗಳ ಮೊರೆ ಹೋಗಿದ್ದಾರೆ.

ಕೃಷಿ ಭೂಮಿಗಾಗಿ ಹೋರಾಟ ನಡೆಸುತ್ತಿರುವ ರೈತರ ಪೈಕಿ ವಿಶ್ವನಾಥ್ ವಿಷ ಸೇವಿಸಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ 16 ಕುಟುಂಬಗಳ ರೈತರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ದಯಾಮರಣ ಕೋರಿದ್ದಾರೆ.

ಮಂಗಳವಾರ ಪೇಟೆ ಗ್ರಾಮದ ಸರ್ವೇ ನಂಬರ್ 52, 53 ಮತ್ತು 67ರಲ್ಲಿ ಉಳುವವನೆ ಭೂಮಿ ಒಡೆಯ ಯೋಜನೆಯಲ್ಲಿ 16 ಮಂದಿ ರೈತರಿಗೆ ಜಮೀನು ಮಂಜೂರಾಗಿದೆ. ಕಳೆದ 70 ವರ್ಷಗಳಿಂದ ಅನುಭೋಗದಲ್ಲಿದ್ದು, ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಸಿದ್ದೇಗೌಡ ಎಂಬ ವ್ಯಕ್ತಿ ಹಣ ಬಲ, ತೋಳ್ಬಲ ಪ್ರಯೋಗಿಸಿ ಜಮೀನನ್ನು ವಶಕ್ಕೆ ಪಡೆಯುವ ಪ್ರಯತ್ನ ಮಾಡುತ್ತಿದ್ದಾನೆ ಎಂದು ರೈತಸಂಘ ಮುಖಂಡ ಶ್ರೀನಿವಾಸ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದರು.

ಈ ಜಮೀನು ಮೂಲತಃ ಸಕ್ಕುಬಾಯಿ ಅವರಿಗೆ ಸೇರಿದ್ದಾಗಿದೆ. ಇಂದಿರಾಗಾಂಧಿ ಅವರ ಸರ್ಕಾರದಲ್ಲಿ 1975ರಲ್ಲಿ ಭೂ ಸುಧಾರಣೆ ಮತ್ತು ಗೇಣಿದಾರರ ಕಾಯ್ದೆ ಜಾರಿಯಾದಾಗ ರೈತರಿಗೆ ಸಿಕ್ಕ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈ ಮಧ್ಯೆ ಗ್ರಾಮದ ಸಿದ್ದೇಗೌಡ ಎಂಬುವರು ವರದೇಗೌಡರು ಶಾಸಕರಾಗಿದ್ದ ಅವಧಿಯಲ್ಲಿ 17 ಎಕರೆ 10 ಗುಂಟೆಯನ್ನುು ಅಕ್ರಮವಾಗಿ ಪಹಣಿ ಮಾಡಿಸಿಕೊಂಡಿದ್ದಾರೆ ಎಂದು ದೂರಿದರು.

ರೈತರಿಗೆ ಜೀವನ ನಡೆಸಲು ಈ ಭೂಮಿ ಹೊರತು ಪಡಿಸಿ ಬೇರೇನೂ ಇಲ್ಲ. ಭೂಮಿಯಲ್ಲಿ ಬೆಳೆದಿರುವ ಬೆಳೆಯನ್ನು ಕಟಾವು ಮಾಡಲು ಅವಕಾಶ ನೀಡುತ್ತಿಲ್ಲ. ಕಷ್ಟು ಪಟ್ಟು ಬೆಳೆದ ಬೆಳೆ ಮಣ್ಣು ಪಾಲಾಗುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯವರಲ್ಲಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಭೂಮಿ ಮತ್ತು ರೈತರದು ತಾಯಿ- ಮಕ್ಕಳ ಸಂಬಂಧ. ಭೂಮಿ ಕಳೆದುಕೊಂಡಿರುವ ರೈತ ಕುಟುಂಬಗಳು ನೋವಿನಿಂದ ಜೀವನ ನಡೆಸುವಂತಾಗಿದೆ. ಒಂದು ಕಡೆ ನ್ಯಾಯವೂ ಮರೀಚಿಕೆಯಾಗಿದೆ. ಭೂ ತಾಯಿಯನ್ನು ಕಳೆದುಕೊಂಡಿರುವ ರೈತರು ಬದುಕು ನಡೆಸಲು ಸಾಧ್ಯವಿಲ್ಲ. ಆದ್ದರಿಂದ ರೈತ ಕುಟುಂಬಗಳು ರಾಷ್ಟ್ರಪತಿಗಳಲ್ಲಿ ದಯಾಮರಣ ಕೋರಿದ್ದಾರೆ ಎಂದು ಶ್ರೀನಿವಾಸ್ ತಿಳಿಸಿದರು.

ರೈತ ಹೋರಾಟಗಾರ್ತಿ ಅನುಸೂಯಮ್ಮ ಮಾತನಾಡಿ, ಮಂಗಳವಾರ ಪೇಟೆ ಗ್ರಾಮದ ಭೂಮಿ ಬೆಲೆ ಹೆಚ್ಚಾಗಿರುವ ಕಾರಣ ದುಷ್ಟರ ವಕ್ರ ದೃಷ್ಟಿ ಕೃಷಿ ಭೂಮಿ ಮೇಲೆ ಬಿದ್ದಿದೆ. ರಾತ್ರೋರಾತ್ರಿ ಕೃಷಿ ಭೂಮಿಗೆ ಬೇಲಿ ಹಾಕಿದ್ದಾರೆ. ಆಡಳಿತ ವರ್ಗ ಮತ್ತು ಪೊಲೀಸ್ ಇಲಾಖೆ ರೈತರ ರಕ್ಷಣೆಗೆ ಬರದೆ, ಬಲಾಢ್ಯರ ಪರವಾಗಿ ನಿಂತಿದೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ದಯಾಮರಣ ಕೋರಿರುವ ರೈತ ಕುಟುಂಬದ ರಾಜಣ್ಣ, ರಮೇಶ್ , ದೇವರಾಜು, ಜಯಲಕ್ಷ್ಮಮ್ಮ, ಶಿವರತ್ನಮ್ಮ ಇದ್ದರು.

--

14ಕೆಆರ್ ಎಂಎನ್ 6.ಜೆಪಿಜಿ

ರೈತಸಂಘ ಮುಖಂಡ ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

-