ಸಾರಾಂಶ
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಸರ್ಕಾರ ಪತ್ರ ಬರಹಗಾರ ವೃತ್ತಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದನ್ನು ಉಳಿಸಿಕೊಳ್ಳಲು ಪತ್ರ ಬರಹಗಾರರು ಸಂಘಟಿತರಾಗಬೇಕು ಎಂದು ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪರವಾನಗಿ ಪಡೆದ ಪತ್ರ ಬರಹಗಾರರ ಒಕ್ಕೂಟ ರಾಜ್ಯಾಧ್ಯಕ್ಷ ಡಿ.ಕೆ.ಸಂಗಮೇಶ ಎಲಿಗಾರ್ ಸಲಹೆ ನೀಡಿದರು.ನಗರದ ಸಂತೇಮರಹಳ್ಳಿ ರಸ್ತೆಯಲ್ಲಿರುವ ರಾಯಲ್ ಬ್ರದರ್ಸ್ ಪಾರ್ಟಿ ಹಾಲ್ ನಲ್ಲಿ ನಡೆದ ಚಾಮರಾಜನಗರ ತಾಲೂಕು ಪರವಾನಗಿ ಹೊಂದಿದ ಜಿಲ್ಲಾ ಪತ್ರ ಬರಹಗಾರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನಾ ಸಮಾರಂಭ ಹಾಗೂ ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ ಪತ್ರ ಬರಹಗಾರ ಒಕ್ಕೂಟದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದರು.
ಹಂತ ಹಂತವಾಗಿ ನಮ್ಮನ್ನು ಸಂಬಂಧಪಟ್ಟ ಕಂದಾಯ ಇಲಾಖೆ ಸಚಿವರು ಕಾವೇರಿ-1 ಹಾಗೂ ಕಾವೇರಿ-2 ತಂದರು. ಕಾವೇರಿ- 3 ತಂತ್ರಾಂಶದಲ್ಲಿ ಎಲ್ಲವನ್ನೂ ಅಪ್‌ಲೋಡ್ ಮಾಡಿ ಪತ್ರ ನೊಂದಣಿಗೆ ಎಲ್ಲ ಅವಕಾಶ ಮಾಡಿ ಕೊಟ್ಟರು. ಮೂರನೇ ಹಂತದಲ್ಲಿ ಪತ್ರ ಬರಹಗಾರರನ್ನು ಸಂಪೂರ್ಣವಾಗಿ ಹತ್ತಿಕ್ಕುವ ಕೆಲಸ ಮಾಡಿದ್ದಾರೆ ಎಂದು ದೂರಿದರು.ಪತ್ರ ಬರಹಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಬೆಳಗಾಂ ಅಧಿವೇಶನದಲ್ಲಿ ಸಚಿವ ಕೃಷ್ಣ ಭೈರೇಗೌಡರು, ಅಧಿಕಾರಿ ಮಲ್ಲಿಕಾರ್ಜುನ, ಆರ್.ಆಶೋಕ್, ಮಹೇಶ್ ತೆಂಗಿನಕಾಯಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆಲ್ಲ ಮನವಿ ಸಲ್ಲಿಸಲಾಗಿದೆ. ಯಾವುದೇ ಪ್ರಯೋಜನವಾಗಿಲ್ಲ. ಮತ್ತೆ ಕಳೆದ ಒಂದು ತಿಂಗಳಿಂದೆ ಮನವಿ ಸಲ್ಲಿಸಿದಾದ ನಮ್ಮನ್ನು ನಿಮ್ಮನ್ನು ಪ್ರಪಂಚ ನೋಡುತ್ತಿದೆ ಎಂದು ಹೇಳುತ್ತಾರೆ. ನಮ್ಮನ್ನು ಏಕೆ ಪ್ರಪಂಚ ನೋಡಬೇಕು ಎಂದು ಪ್ರಶ್ನಿಸಿದರು.
ಸರ್ಕಾರ ಡಿಜಿಟಲೀಕರಣ ಮಾಡಿ ಪತ್ರ ಬರಹಗಾರ ವೃತ್ತಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಸರ್ಕಾರ ಎಲ್ಲ ಕ್ಷೇತ್ರದವರಿಗೂ ಸೇವಾಭದ್ರತೆ ಒದಗಿಸುತ್ತಿದೆ. ಆದರೆ ಸರ್ಕಾರವೇ ಪರವಾನಗಿ ನೀಡಿ ನಮಗೆ ಯಾವುದೇ ಸೌಲಭ್ಯ ನೀಡಿಲ್ಲ. ಬದಲಾಗಿ ವೃತ್ತಿಯನ್ನು ನಾಶ ಮಾಡಲು ಹೋರಾಟಿದೆ ಎಂದು ಆರೋಪಿಸಿದರು.ಪತ್ರ ಬರಹಗಾರರು ಸಂಘಟಿತರಾಗಬೇಕು, ವೃತ್ತಿ ಉಳಿವಿಗಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಆಶಾ ಕಾರ್ಯಕರ್ತರು, ಗ್ರಾಪಂ ನೌಕರರು, ಶಿಕ್ಷಕರು ವೇತನ ಇದ್ದರೂ ಕೂಡ ಹೋರಾಟ ಮಾಡುತ್ತಿದ್ದಾರೆ. ನಮಗೆ ಯಾವುದೇ ವೇತನ ಇಲ್ಲ ಆಗಾಗಿ ವೃತ್ತಿಯನ್ನು ಉಳಿಸಿಕೊಳ್ಳಲು ಸಂಘಟಿತರಾಗಬೇಕು ಎಂದರು.
ಒಕ್ಕೂಟದ ರಾಜ್ಯ ಕಾರ್ಯದರ್ಶಿ ಧರ್ಮರಾಜ್ ವಿ.ಏಕಬೋಟೆ ಮಾತನಾಡಿ, ಪತ್ರ ಬರಹಗಾರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಹಾಗಾಗಿ ಅಳಿವಿಯಂಚಿವಿನಲ್ಲಿರುವ ಪತ್ರ ಬರಹಗಾರ ವೃತ್ತಿ ಉಳಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪರವಾನಗಿ ಪಡೆದ ಪತ್ರ ಬರಹಗಾರರ ಒಕ್ಕೂಟ ಸ್ಥಾಪನೆಯಾಗಿದೆ ಎಂದರು.ಮಂಡ್ಯ ಜಿಲ್ಲಾ ನೋಂದಣಾಧಿಕಾರಿ ಎಸ್.ಸಿದ್ದೇಶ್ ಸಂಘದ ನಾಮಫಲಕ ಅನಾವರಣಗೊಳಿಸಿದರು. ಸಂಘದ ಅಧ್ಯಕ್ಷ ಜಿ.ನಂದೀಶ್ವರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಸಿ.ಎನ್.ಬಾಲರಾಜು ಪ್ರಾಸ್ತಾವಿಕ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಚಾಮರಾಜನಗರ ಹಿರಿಯ ಉಪ- ನೋಂದಣಾಧಿಕಾರಿ ಎ.ರಾಘವೇಂದ್ರ, ಪ್ರಥಮದರ್ಜೆ ಸಹಾಯಕರಾದ ಕೆ.ಎನ್.ಉಮೇಶ್, ಮಂಜುನಾಥ್, ಒಕ್ಕೂಟದ ಕಾರ್ಯದರ್ಶಿ ನವೀನ್ ಕುಮಾರ್, ನಂಜನಗೂಡು ತಾಲೂಕು ಅಧ್ಯಕ್ಷ ಪ್ರಕಾಶ್ ರಾಜೇ ಅರಸ್, ನರಸೀಪುರ ಸಂಘದ ಕಾರ್ಯಾಧ್ಯಕ್ಷ ಲೋಕೇಶ್, ಚಾಮರಾಜನಗರ ತಾಲೂಕು ಉಪಾಧ್ಯಕ್ಷ ಕಾಂತರಾಜು, ಕಾರ್ಯದರ್ಶಿ ಮಹಾದೇವಸ್ವಾಮಿ, ಸಹ ಕಾರ್ಯದರ್ಶಿ ರವಿ, ಖಜಾಂಚಿ ಹೊಮ್ಮ ರಾಮನಾಯಕ, ಕಾನೂನು ಸಲಹೆಗಾರ ಎಸ್.ಕೆ.ಮಹದೇವಯ್ಯ, ಸಂಘಟನಾ ಕಾರ್ಯದರ್ಶಿ ಗಳಾದ ಶಂಕರ್, ಸೈಯದ್ ಮುಸವ್ವೀರ್, ಎಂ.ಸಿದ್ದರಾಜು, ಚಂದ್ರು ಜೆ.ಬಿ.ಸಿದ್ದರಾಜು ಶೆಟ್ಟಿ, ಮಹದೇವಸ್ವಾಮಿ, ಸದಸ್ಯರು, ಕೊಳ್ಳೇಗಾಲ, ಹನೂರು, ಕುದೇರು, ಯಳಂದೂರು, ಗುಂಡ್ಲುಪೇಟೆ ಪತ್ರ ಬರಹಗಾರರು ಹಾಜರಿದ್ದರು.