ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ತಾವೆಲ್ಲರೂ ಕಟಿಬದ್ದರಾಗಿ ಕೆಲಸ ಮಾಡಬೇಕೆಂದು ಕೆಪಿಸಿಸಿ ಲೀಗಲ್ ಸೆಲ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಧನಂಜಯ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ತುಮಕೂರು
ಕಾಂಗ್ರೆಸ್ ಪಕ್ಷದ ವಕೀಲರ ಸೆಲ್‌ನವರು ಕೇವಲ ಲೆಟರ್‌ಹೆಡ್ ಪದಾಧಿಕಾರಿಗಳಾಗುವುದರಿಂದ ಯಾವುದೇ ಪ್ರಯೋಜನವಿಲ್ಲ. ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ತಾವೆಲ್ಲರೂ ಕಟಿಬದ್ದರಾಗಿ ಕೆಲಸ ಮಾಡಬೇಕೆಂದು ಕೆಪಿಸಿಸಿ ಲೀಗಲ್ ಸೆಲ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಧನಂಜಯ ತಿಳಿಸಿದ್ದಾರೆ.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕೀಲರ ಸೆಲ್‌ನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕೆಪಿಸಿಸಿ ವಕೀಲರ ಸೆಲ್ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಧನಂಜಯ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪ್ರಜಾತಂತ್ರಕ್ಕೆ ಮಾರಕವಾಗಿರುವ ಎಸ್.ಐ.ಆರ್.ನಲ್ಲಿ ಅರ್ಹ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗದಂತೆ ಕಾಪಾಡುವ ಗುರುತರ ಹೊಣೆಗಾರಿಕೆ ವಕೀಲರ ವಿಭಾಗದ ಮೇಲಿದೆ. ನಾನು ಕೂಡು ಸಾಮಾನ್ಯ ಕಾರ‍್ಯಕರ್ತನಾಗಿ ಪಕ್ಷಕ್ಕೆ ಸೇರ್ಪಡೆಗೊಂಡು ಇಂದು ಕೆಪಿಸಿಸಿ ವಕೀಲರ ಸೆಲ್ ಅಧ್ಯಕ್ಷನಾಗಿದ್ದೇನೆ. ಅದಲ್ಲದೆ ಕೆಲವು ಅವಕಾಶಗಳು ಬಂದಾಗ ಕೊಂಚ ಎಡವಿದ್ದರ ಪರಿಣಾಮ, ಶಾಸಕನಾಗುವ ಅವಕಾಶದಿಂದ ವಂಚಿತನಾದೆ. ಹಾಗಾಗಿ ಪಕ್ಷದ ನಿಷ್ಠಾವಂತ ಕಾರ‍್ಯಕರ್ತರು ಒಂದೊಮ್ಮೆ ಅದು ಸಣ್ಣದೋ,ದೊಡ್ಡದೋ ಅವಕಾಶ ದೊರೆತಾಗ ನಿರ್ಲ್ಯಕ್ಷ ಮಾಡಬೇಡಿ ಎಂದರು.ವಕೀಲರ ಪರಿಷತ್ತಿನ ನಿರ್ದೇಶಕ ನಾರಾಯಣಸ್ವಾಮಿ ಮಾತನಾಡಿ, ಈ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟಿದ್ದು ಕಾಂಗ್ರೆಸ್, ಪಂಚವಾರ್ಷಿಕ ಯೋಜನೆಗಳ ಮೂಲಕ ಜೀರೋ ದಿಂದ ಇಂದಿನ ಬೆಳವಣಿಗೆಯವರಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಇದೆ ಎಂದರು.
ಕೆಪಿಸಿಸಿ ವಕೀಲರ ವಿಭಾಗದ ಆನಂತನಾಯ್ಕ್ ಮಾತನಾಡಿ, ನಾಗರಿಕರಿಗೆ ಮತದಾನ ಸೇರಿದಂತೆ ಹಲವಾರು ಹಕ್ಕುಗಳನ್ನು ನೀಡಿದ್ದು ಕಾಂಗ್ರೆಸ್ ಪಕ್ಷ.ಆದರೆ ಬಿಜೆಪಿ ಎಸ್.ಐ.ಆರ್ ಮೂಲಕ ಬಡವರು, ದಲಿತರು, ಹಿಂದುಳಿದ ವರ್ಗಗಳ ಮತದಾನದ ಹಕ್ಕನ್ನು ಕಸಿಯಲು ಹೊರಟಿದೆ ಎಂದರು.ಮಾಜಿ ಶಾಸಕ ಎಸ್.ಷಪಿ ಅಹಮದ್ ಮಾತನಾಡಿ, ತುಮಕೂರು ಜಿಲ್ಲಾ ಕಾಂಗ್ರೆಸ್ ವಕೀಲರ ಘಟಕ ಇಂದು ಮಹತ್ವದ ಹೆಜ್ಜೆ ಇಟ್ಟಿದೆ ಎಂದರು. ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಇಷ್ಟೊಂದು ಜನ ವಕೀಲರು ಆಗಮಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು.
ತುಮಕೂರು ಜಿಲ್ಲಾ ಕಾಂಗ್ರೆಸ್ ವಕೀಲರ ವಿಭಾಗದ ಅಧ್ಯಕ್ಷ ಸುರೇಶ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಮಾತನಾಡಿ, ನಾನು ಕೂಡ ವಕೀಲನಾಗಿ ಹಲವು ವರ್ಷಗಳ ಕಾಲ ಪ್ರಾಕ್ಟೀಸ್ ಮಾಡಿದ್ದೇನೆ. ತದನಂತರ ಪಕ್ಷಕ್ಕೆ ಬಂದು,ತಳಮಟ್ಟದಿಂದ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದೇನೆ ಎಂದರು.ವಕೀಲರಾದ ಹಿರೇಹಳ್ಳಿ ಮಹೇಶ್, ಎಸ್ಸಿ ಸೆಲ್ ಅಧ್ಯಕ್ಷ ಬಿ.ಜಿ.ಲಿಂಗರಾಜು, ಷಣ್ಮುಗಪ್ಪ,ಮಧುಸೂಧನ್ ಮತ್ತಿತರರು ಮಾತನಾಡಿದರು. ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಫೈಯಾಜ್, ಮಹೇಶ್,ಎಸ್ಟಿ ಸೆಲ್ ಅಧ್ಯಕ್ಷ ಕುಮಾರಸ್ವಾಮಿ, ಕಾರ್ಮಿಕ ಘಟಕದ ಸೈಯದ್ ದಾದಾಪೀರ್,ಸೇವಾದಳದ ಬೈಲಸ್ವಾಮಿ,ಒಬಿಸಿ ಘಟಕದ ಅನಿಲ್,ಅಲ್ಪಸಂಖ್ಯಾತರ ಘಟಕದ ರ‍್ಫಾನ್,ವಕೀಲರಾದ ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
