ಸಿದ್ದಾಪುರ: ಪುಸ್ತಕ ಎಂಬುದು ಕೇವಲ ಅಚ್ಚಾದ ವಸ್ತುವಲ್ಲ; ಅದು ಪ್ರತಿಯೊಬ್ಬ ಓದುಗನಲ್ಲೂ ಹೊಸ ಅರ್ಥವನ್ನು ಸೃಷ್ಟಿಸುವ ಜೀವಂತ ದ್ರವ್ಯ ಎಂದು ಸಿದ್ದಾಪುರದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ಅಭಿಪ್ರಾಯಪಟ್ಟರು.

ಪೌರ್ಣಿಮಾ ಸಾಹಿತ್ಯ ವೇದಿಕೆ ಹಾಗೂ ಪ್ರಯೋಗ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಪಟ್ಟಣದ ಲಯನ್ಸ್‌ ಬಾಲಭವನದಲ್ಲಿ ಆಯೋಜಿಸಲಾದ ಪತ್ರಕರ್ತ, ಸಾಹಿತಿ ಗಂಗಾಧರ ಕೊಳಗಿ ಅವರ ಮರುಮುದ್ರಣಗೊಂಡ ಕೃತಿಗಳ ಅವಲೋಕನ ಕಾರ್ಯಕ್ರಮದಲ್ಲಿ ಕಾಡಂಚಿನ ಯಾನ: ಪರಿಸರದ ಅನುಭವ ಕಥನ ಕೃತಿಯ ಕುರಿತು ಅವರು ಮಾತನಾಡಿದರು. ಮನುಷ್ಯ ನಿರ್ಮಿತವಾದ ಯಾವುದೂ ಶಾಶ್ವತವಲ್ಲದಿದ್ದರೂ, ಅವನು ಸೃಷ್ಟಿಸಿದ ಅಕ್ಷರ ಮತ್ತು ಸಾಹಿತ್ಯ ಮಾತ್ರ ಮನುಕುಲ ಇರುವವರೆಗೂ ಶಾಶ್ವತವಾಗಿರುತ್ತದೆ. 2003 ಮತ್ತು 2019ರಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹವಾದ ಈ ಕೃತಿಯು ಮರುಮುದ್ರಣಗೊಂಡಿದ್ದು, ಇದು ಲೇಖಕರ ಸಾಮಾಜಿಕ ಹೊಣೆಗಾರಿಕೆ ಮತ್ತು ನಮ್ಮ ಸುತ್ತಮುತ್ತಲಿನ ಪರಿಸರವನ್ನು ನೋಡುವ ಒಳನೋಟವನ್ನು ಪರಿಚಯಿಸುತ್ತದೆ ಎಂದರು. ಕಾಡಂಚಿನ ಯಾನ ಕೇವಲ ಪ್ರವಾಸ ಕಥನವಾಗಿ ಉಳಿಯದೆ, ನಮ್ಮ ಬದುಕಿನ ಯಾನವನ್ನು ಪ್ರತಿಬಿಂಬಿಸುವ ಒಂದು ವಾಸ್ತವ ಕನ್ನಡಿಯಾಗಿದೆ. ಈ ಅಪೂರ್ವ ಕೃತಿಯನ್ನು ಪ್ರತಿಯೊಬ್ಬ ಸಾಹಿತ್ಯಾಸಕ್ತರೂ ಓದಿ, ಪರಿಸರ ಮತ್ತು ಬದುಕಿನ ಸೂಕ್ಷ್ಮತೆಗಳನ್ನು ಅರಿತುಕೊಳ್ಳಬೇಕು ಎಂದರು.

ಮನಸ್ಸು ಆಕಾಶದ ನೀಹಾರಿಕೆ ಕೃತಿಯ ಕುರಿತು ಮಾತನಾಡಿದ ಉಪನ್ಯಾಸಕ ರತ್ನಾಕರ ನಾಯ್ಕ, ಗಂಗಾಧರ ಕೊಳಗಿ ಅವರ ಸಾಹಿತ್ಯವು ಕೇವಲ ಸ್ಥಳೀಯತೆಗೆ ಸೀಮಿತವಾಗದೆ, ಮನುಷ್ಯನ ಮನಸ್ಸಿನ ಒಳತಲ್ಲಣಗಳನ್ನು ವೈಚಾರಿಕ ನೆಲೆಯಲ್ಲಿ ವಿಶ್ಲೇಷಿಸುವ ಶಕ್ತಿಯನ್ನು ಹೊಂದಿದೆ. ಈ ಸಂಕಲನದ ಆರು ಕಥೆಗಳಲ್ಲಿ ನವ್ಯ ಸಾಹಿತ್ಯದ ಛಾಯೆ ಗಾಢವಾಗಿದ್ದು, ವ್ಯಕ್ತಿ ಕೇಂದ್ರಿತ ನೆಲೆಯಲ್ಲೇ ಕಥೆಗಳು ವಿಸ್ತರಿಸುತ್ತವೆ. ಕೃತಿಯಲ್ಲಿನ ಪ್ರೇರಣೆ, ಕುರುಹು, ಅಧ್ಯಾಯ, ದಿಗ್ಭ್ರಮೆ, ಮತ್ತು ಅನ್ವೇಷಣೆಯಂತಹ ಕಥೆಗಳು ಕಾಲ ಮತ್ತು ಸ್ಥಳದ ಹಿನ್ನೆಲೆಯಲ್ಲಿ ಭಿನ್ನವಾಗಿದ್ದರೂ, ಇವುಗಳ ಅಂತಃಸತ್ವದಲ್ಲಿ ಸ್ಥಳೀಯ ಪ್ರೀತಿ, ಕಾಮದ ಅವಾಂತರಗಳು ಮತ್ತು ಸಂಬಂಧಗಳ ಜಿಜ್ಞಾಸೆ ಎದ್ದುಕಾಣುತ್ತವೆ. ಸಂಪ್ರದಾಯಗಳನ್ನು ಗೌರವಿಸುತ್ತಲೇ ಅದರಲ್ಲಿನ ಮೌಢ್ಯಗಳನ್ನು ಪ್ರಶ್ನಿಸುವ ವೈಚಾರಿಕತೆ ಕೊಳಗಿ ಅವರ ಬರಹದ ವೈಶಿಷ್ಟ್ಯವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಗದ್ಯ ಸಾಹಿತ್ಯದ ಪರಂಪರೆಯಲ್ಲಿ ಗಂಗಾಧರ ಕೊಳಗಿ ಅವರು ತಮ್ಮ ವಿಶಿಷ್ಟ ಶೈಲಿಯ ಮೂಲಕ ಮಹತ್ವದ ಸ್ಥಾನವನ್ನು ಪಡೆದಿದ್ದಾರೆ. ಶೀರ್ಷಿಕೆಯ ಕಥೆಯು ಸಾವು ಮತ್ತು ಸಂಬಂಧಗಳ ಹೊಸ ಪ್ರಶ್ನೆಗಳನ್ನು ಓದುಗರ ಮುಂದೆ ತೆರೆದಿಡುತ್ತದೆ ಎಂದು ಅವರು ವಿಶ್ಲೇಷಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಕುಂಬ್ರಿಗದ್ದೆ, ಲಯನ್ಸ್ ಅಧ್ಯಕ್ಷ ರಾಘವೇಂದ್ರ ಭಟ್ಟ, ಕೃಷಿ ಅಧಿಕಾರಿ ಪ್ರಶಾಂತ ಜಿ.ಎಸ್. ಮಾತನಾಡಿದರು. ಪ್ರೊ. ಎಂ.ಕೆ. ನಾಯ್ಕ ಹೊಸಳ್ಳಿ, ಕೃತಿಕಾರ ಗಂಗಾಧರ ಕೊಳಗಿ ಅನಿಸಿಕೆ ವ್ಯಕ್ತಪಡಿಸಿದರು.

ಪೌರ್ಣಿಮಾ ಸಾಹಿತ್ಯ ವೇದಿಕೆಯ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕವಿಯಿತ್ರಿ ಸುಧಾರಾಣಿ ಕಾರ್ಯಕ್ರಮ ನಿರ್ವಹಿಸಿದರು. ಜಾನಪದ ಗಾಯಕ ಗೋಪಾಲ ಕಾನಳ್ಳಿ ಕವಿತೆ ಹಾಡಿದರು. ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ಶಿರಳಗಿ ಸ್ವಾಗತಿಸಿದರು. ಕವಿ ವೆಂಕಟೇಶ ಮಡಿವಾಳ ಕೃತಿಕಾರರನ್ನು ಪರಿಚಯಿಸಿದರು.