ಗ್ರಂಥಾಲಯಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗಿರಲಿ

| Published : May 09 2025, 12:31 AM IST

ಗ್ರಂಥಾಲಯಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗಿರಲಿ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಂಥಾಲಯಗಳಲ್ಲಿ ವಿವಿಧ ಸ್ಪರ್ಧೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಪುಸ್ತಕಗಳು ಸಹಕಾರಿಯಾಗಬೇಕು

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಿಲ್ಲೆಯಲ್ಲಿ ಯುವಕರು ಯುಪಿಎಸ್‌ಸಿ ಪರೀಕ್ಷೆಗಳನ್ನು ಪಾಸ್ ಆಗುವ ಮೂಲಕ ಸಾಧನೆ ಮಾಡಿದ್ದಾರೆ. ಗ್ರಂಥಾಲಯಗಳಲ್ಲಿ ಚರಿತ್ರೆ, ಸಾಮಾಜಿಕ, ಕಥೆ, ಕಾದಂಬರಿಗಳ ಪುಸ್ತಕಗಳ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಂಥಾಲಯಗಳಲ್ಲಿ ವಿವಿಧ ಸ್ಪರ್ಧೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಪುಸ್ತಕಗಳು ಸಹಕಾರಿಯಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಗ್ರಾಮ ಪಂಚಾಯಿತಿ ಗ್ರಂಥಪಾಲಕರು, ಮೇಲ್ವಿಚಾರಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾಹಿತಿ ಸಂಗ್ರಹಣೆಗೆ ಸಹಾಯ ಮಾಡುವುದೇ ಗ್ರಂಥಾಲಯದ ಮೂಲ ಕರ್ತವ್ಯ. ಮಾಹಿತಿ-ತಂತ್ರಜ್ಞಾನದ ಪ್ರಭಾವದಿಂದ ಗ್ರಂಥಾಲಯವು ತನ್ನ ಸೇವೆ ಹಾಗೂ ಕಾರ್ಯಕ್ಷಮತೆಯಲ್ಲಿ ಹೆಚ್ಚಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯ ನಿರ್ವಹಿಸಬೇಕು ಎಂದರು.

ಗ್ರಂಥಾಲಯದ ಮಾಹಿತಿ ವಿಸ್ತರಣೆಯು ಕಲಿಕೆಗೆ ಅಭಿರುಚಿಗೆ, ಚಿಂತನಶೀಲತೆ, ತಂತ್ರಗಾರಿಕೆ, ಯೋಜನಾ ಅಧ್ಯಯನ, ಬೌದ್ಧಿಕ ಸಾಮರ್ಥ್ಯ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಅನುಕೂಲವಾಗುವ ಮಾಹಿತಿ ಪೂರೈಸುವಂತಾಗಬೇಕು ಎಂದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಅವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಂಥಾಪಾಲಕರ ವೇತನ ಪಾವತಿಗೆ ಕಡ್ಡಾಯವಾಗಿ ಬಯೋಮೆಟ್ರಿಕ್ ಅನ್ವಯವಾಗಲಿದೆ. ಬಯೋಮೆಟ್ರಿಕ್ ಹಾಜರಾತಿ ವರದಿಯ ಆಧಾರಿತ ವೇತನ ಪಾವತಿ ಮಾಡಲಾಗುವುದು ಎಂದು ತಿಳಿಸಿದರು.

ಗ್ರಂಥಪಾಲಕರು ಗ್ರಂಥಾಲಯದ ವೇಳೆಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಬೇಕು. ಸರ್ಕಾರದ ನಿರ್ದೇಶನದಂತೆ ಎಲ್ಲ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಹಾಗೂ ಗ್ರಂಥ ಪಾಲಕರಿಗೆ ಬಯೋಮೆಟ್ರಿಕ್ ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.

ಗ್ರಂಥಾಲಯದ ಸ್ವಚ್ಚತೆ, ಬುಕ್ಸ್ ಸ್ಟಾಕ್ ಸಂಗ್ರಹಣೆ ವ್ಯವಸ್ಥೆ ಅಚ್ಚುಕಟ್ಟಾಗಿರಬೇಕು. ಅಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಅಧಿಕಾರಿಗಳಾಗಿ, ಜನಪ್ರತಿನಿಧಿಯಾಗಿ ಉದಾರಣೆ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಗ್ರಂಥಪಾಲಕರು ಗ್ರಂಥಾಲಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಸಭೆಯಲ್ಲಿ ಎಲ್ಲ ಗ್ರಾಮ ಪಂಚಾಯತಿ ಗ್ರಂಥಪಾಲಕರು, ಮೇಲ್ವಿಚಾರಕರು ಉಪಸ್ಥಿತರಿದ್ದರು.