ಸಾರಾಂಶ
ಶಾಲೆಗೆ ಟಾಟಾ ಟ್ರಸ್ಟ್ ವಿದ್ಯಾರ್ಥಿಗಳಿಗೆ ಬೇಕಾಗುವ ಅಗತ್ಯ ಪುಸ್ತಕಗಳನ್ನು ಪೂರೈಸಿದೆ. ಇದರೊಂದಿಗೆ ಸಂಘ-ಸಂಸ್ಥೆಗಳು ಸಹ ವಿದ್ಯಾರ್ಥಿಗಳ ಪುಸ್ತಕದ ಆಸಕ್ತಿ ಕಂಡು ಮುಂದೆ ಬಂದು ಪುಸ್ತಕಗಳನ್ನು ದಾನ ನೀಡುತ್ತಿವೆ.
ಏಕನಾಥ ಜಿ. ಮೆದಿಕೇರಿ
ಹನುಮಸಾಗರ:ಮೊಬೈಲ್ ಗೀಳಿಗೆ ಅಂಟಿಕೊಂಡು ಓದುನತ್ತ ನಿರಾಸಕ್ತಿ ತೋರುತ್ತಿರುವ ಯುವಜನತೆ ನಡುವೆ ತಾಲೂಕಿನ ಮಿಯಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ದಾನಿಗಳು ನೀಡಿದ, ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದ ಹಾಗೂ ಹಠಕ್ಕೆ ಬಿದ್ದು ಪಾಲಕರಿಂದ ಪುಸ್ತಕ ಕೊಡಿಸಿಕೊಂಡು ಮನೆಯಲ್ಲಿಯೇ ಗ್ರಂಥಾಲಯ ನಿರ್ಮಿಸಿಕೊಂಡಿದ್ದಾರೆ. ಇದಕ್ಕೆ ಶಿಕ್ಷಕರು ಸಹ ಸಾಥ್ ನೀಡಿದ್ದು ವಿವಿಧ ಸಂಸ್ಥೆಗಳಿಂದ ಪುಸ್ತಕಗಳನ್ನು ದಾನ ಪಡೆದು ಮಕ್ಕಳ ಓದಿನ ದಾಹ ತೀರಿಸುತ್ತಿದ್ದಾರೆ.
ಹೌದು. ಮಿಯಾಪುರ ಸರ್ಕಾರಿ ಶಾಲೆಯಲ್ಲಿ 1ರಿಂದ 7ನೇ ತರಗತಿಯಲ್ಲಿ 150 ವಿದ್ಯಾರ್ಥಿಗಳಿದ್ದು, ಇದರಲ್ಲಿ 5ರಿಂದ 7ನೇ ತರಗತಿಯ 34 ವಿದ್ಯಾರ್ಥಿಗಳು ಮನೆಯಲ್ಲಿಯೇ ಗ್ರಂಥಾಲಯ ಮಾಡಿಕೊಂಡು ಓದಿನತ್ತ ಆಸಕ್ತಿ ತೋರಿಸಿದ್ದಾರೆ.ಪುಸ್ತಕಗಳ ದಾನ:
ಶಾಲೆಗೆ ಟಾಟಾ ಟ್ರಸ್ಟ್ ವಿದ್ಯಾರ್ಥಿಗಳಿಗೆ ಬೇಕಾಗುವ ಅಗತ್ಯ ಪುಸ್ತಕಗಳನ್ನು ಪೂರೈಸಿದೆ. ಇದರೊಂದಿಗೆ ಸಂಘ-ಸಂಸ್ಥೆಗಳು ಸಹ ವಿದ್ಯಾರ್ಥಿಗಳ ಪುಸ್ತಕದ ಆಸಕ್ತಿ ಕಂಡು ಮುಂದೆ ಬಂದು ಪುಸ್ತಕಗಳನ್ನು ದಾನ ನೀಡುತ್ತಿವೆ. ಹೀಗೆ ಪಡೆದ ಪುಸ್ತಕಗಳನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. ಇದರೊಂದಿಗೆ ಪಾಲಕರೊಂದಿಗೆ ತಮಗೇ ಬೇಕಾದ ಪುಸ್ತಕಗಳನ್ನು ಕೊಡಿಸಿಕೊಂಡು ವಿದ್ಯಾರ್ಥಿಗಳು ಮನೆಯಲ್ಲಿಯೇ ಮಿನಿ ಗ್ರಂಥಾಲಯ ಮಾಡಿಕೊಂಡಿದ್ದಾರೆ. ಇದು ಪಾಲಕರ ಖುಷಿ ಹೆಚ್ಚಿಸಿದೆ.ಯಾವ್ಯಾವ ಪುಸ್ತಕ?:
ಪ್ರತಿಯೊಬ್ಬ ವಿದ್ಯಾರ್ಥಿಗಳ ಮನೆಗಳಲ್ಲಿ ತಮಗೆ ಆಸಕ್ತಿ ಇರುವ ಪುಸ್ತಕಗಳಾದ ತೆನಾಲಿ ರಾಮ, ಶಿವಶರಣರು, ವಚನಕಾರರು, ಬಸವಣ್ಣನವರ ವಚನ, ವಿಜ್ಞಾನ ವಿಸ್ಮಯ ಕ್ವಿಜ್, ದೇಶ ಭಕ್ತಿ ಗೀತೆ, ಭಾವಗೀತೆ, ಜನಪದ ಗೀತೆ, ಗಾದೆ ಮಾತು, ಆರೋಗ್ಯದ ಗುಟ್ಟು, ಭಾಷಣದ ಕಲೆ, ಸಾಮಾನ್ಯ ಜ್ಞಾನ, ಸ್ವಾಮಿ ವಿವೇಕಾನಂದ, ಕಿತ್ತೂರ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ಡಾ. ಎಪಿಜೆ ಅಬ್ದುಲ್ ಕಲಾಂ.. ಹೀಗೆ ನಾನಾ ರೀತಿಯ ಮಹಾತ್ಮರ ಜೀವನ ಚರಿತ್ರೆಯ ಪುಸ್ತಕಗಳನ್ನು ಹೊಂದಿದ್ದು ಜ್ಞಾನವನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ.ಶಿಕ್ಷಕರ ಸಾಥ್:
ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಅಂಟಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಶಿಕ್ಷಕರು ಮೊದಮೊದಲು ಪುಸ್ತಕಗಳನ್ನು ನೀಡಿ ಓದಿನತ್ತ ಆಸಕ್ತಿ ಬೆಳೆಸಿದ್ದಾರೆ. ಬಳಿಕ ಪುಸ್ತಕ ಓದುವುದರಿಂದ ಹೊಸ ವಿಚಾರ ತಿಳಿದುಕೊಳ್ಳುವುದು, ಜ್ಞಾನ ವೃದ್ಧಿ, ಸ್ಪರ್ಧಾತ್ಮಕ ಪರೀಕ್ಷೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬಹುದು ಎಂಬುದರ ಕುರಿತು ಮನದಟ್ಟು ಮಾಡಿದ್ದಾರೆ. ಇದರಿಂದ ಪ್ರೇರಿತರಾದ ವಿದ್ಯಾರ್ಥಿಗಳು ಪಾಲಕರ ದುಂಬಾಲು ಬಿದ್ದು ಹೊಸ ಪುಸ್ತಕಗಳನ್ನು ಖರೀದಿಸಿಕೊಂಡಿದ್ದಾರೆ. ಪ್ರತಿ ವಿದ್ಯಾರ್ಥಿ ಮನೆಯಲ್ಲಿ ಗ್ರಂಥಾಲಯ ಇರಬೇಕೆಂದು ಶಿಕ್ಷಕರು ಆಶಯ ವ್ಯಕ್ತಪಡಿಸಿದ್ದಾರೆ.ಪ್ರಾಥಮಿಕ ಶಿಕ್ಷಣದಿಂದಲೇ ಪುಸ್ತಕ ಓದುವತ್ತ ಮಕ್ಕಳು ಆಸಕ್ತಿ ವಹಿಸಿದ್ದು ಜೀವನಕ್ಕೆ ಅದು ಉಪಯುಕ್ತವಾಗಿದೆ. ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವುದು ಇಂದಿನ ಅಗತ್ಯವಾಗಿದೆ. ಮನೆಯಲ್ಲಿ ಮಕ್ಕಳು ಗ್ರಂಥಾಲಯ ನಿರ್ಮಿಸಿಕೊಳ್ಳಲು ಟಾಟಾ ಟ್ರಸ್ಟ್ ಸಹಕಾರವು ಇದೆ.ಮಹ್ಮದ್ ಖಾಜಾಹುಸೇನ ಒಂಟೆಳಿ. ಮುಖ್ಯಶಿಕ್ಷಕ ಮಿಯಾಪುರ
ಮನೆಗೆ ಮಕ್ಕಳು ಬರುತ್ತಿದ್ದಂತೆ ಮೊಬೈಲ್ ತೆಗೆದುಕೊಂಡು ಆಟವಾಡುತ್ತಿದ್ದರು. ಇದೀಗ ಪುಸ್ತಕ ಹಿಡಿದು ಓದಿಕೊಳ್ಳುವುದನ್ನು ನೋಡಿದರೆ ಸಂತೋಷವಾಗುತ್ತದೆ. ಇದು ಉತ್ತಮ ಬೆಳವಣಿಗೆಯಾಗಿದೆ. ಇದರಲ್ಲಿ ಶಿಕ್ಷಕರ ಶ್ರಮವೂ ಇದ್ದು, ಅವರಿಗೆ ಧನ್ಯವಾದ.
ಗುರುಶಾಂತಯ್ಯ ಹಿರೇಮಠ ಪಾಲಕರು