ಜ್ಞಾನಾರ್ಜನೆಗೆ ಗ್ರಂಥಾಲಯ ಸಹಕಾರಿ

| Published : Aug 15 2025, 01:00 AM IST

ಸಾರಾಂಶ

ವಿದ್ಯಾರ್ಥಿಗಳು ಪಠ್ಯದ ಕಲಿಕೆಯಾಚೆಗೆ ಓದಿಗಾಗಿ ಗ್ರಂಥಾಲಯಗಳನ್ನು ಆಶ್ರಯಿಸಬೇಕು. ಕಾಲೇಜಿನ ಗ್ರಂಥಾಲಯ ಅಲ್ಲದೇ ತಮ್ಮ ಊರಿನ ಗ್ರಂಥಾಲಯದಲ್ಲಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.

ಗಂಗಾವತಿ:

ಉತ್ತಮ ಜ್ಞಾನಾರ್ಜನೆಗೆ ಗ್ರಂಥಾಲಯಗಳು ಸಹಕಾರಿಯಾಗುತ್ತವೆ ಎಂದು ಪ್ರಾಚಾರ್ಯ ಪ್ರೊ. ಕರಿಗೂಳಿ ಹೇಳಿದರು.

ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಹಾಗೂ ಡಾ. ಎಸ್.ಆರ್. ರಂಗನಾಥನ್ ಅವರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜಿನ ವಿದ್ಯಾರ್ಥಿಗಳು ಪಠ್ಯದ ಕಲಿಕೆಯಾಚೆಗೆ ಓದಿಗಾಗಿ ಗ್ರಂಥಾಲಯಗಳನ್ನು ಆಶ್ರಯಿಸಬೇಕು. ಕಾಲೇಜಿನ ಗ್ರಂಥಾಲಯ ಅಲ್ಲದೇ ತಮ್ಮ ಊರಿನ ಗ್ರಂಥಾಲಯದಲ್ಲಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ನಿಮ್ಮ ಸ್ನೇಹಿತರಂತೆ ಗ್ರಂಥಗಳನ್ನು ಪ್ರೀತಿಸಿ ಹಾಗೂ ಉತ್ತಮ ಜ್ಞಾನಾರ್ಜನೆ ಮಾಡಿಕೊಳ್ಳಿ ಎಂದು ಕರೆ ನೀಡಿದರು.

ಆಧುನಿಕ ಕಾಲದಲ್ಲಿ ಗ್ರಂಥಪಾಲಕನ ಕಾರ್ಯಗಳು ತುಂಬಾ ಉನ್ನತೀಕರಣವಾಗಿವೆ. ಕೇವಲ ಪುಸ್ತಕ ನೀಡುವುದು ಮಾತ್ರವಲ್ಲದೆ ತಂತ್ರಜ್ಞಾನದ ಎಲ್ಲ ಮಜಲುಗಳ ಅರಿವಿರಬೇಕಾಗಿದೆ. ಏಕೆಂದರೆ ಗ್ರಂಥಗಳನ್ನು ಸಂಗ್ರಹಿಸಿ ವಿತರಿಸಿ ಮಾಹಿತಿ ಒದಗಿಸುವ ವ್ಯವಸ್ಥೆ ಕಲ್ಪಿಸುವುದು ಕೂಡ ಒಂದು ಕಲೆ ಮತ್ತು ವಿಜ್ಞಾನ ಎಂದರು.

ಇದೇ ಸಂದರ್ಭದಲ್ಲಿ ಅವರು ಡಾ. ಎಸ್.ಆರ್. ರಂಗನಾಥನ್ ಅವರು ನೀಡಿದ ಪಂಚಸೂತ್ರಗಳ ಕುರಿತು ತಿಳಿಸಿದರು. ಕಾಲೇಜಿನಲ್ಲಿ ''''''''ತಿಂಗಳಿನ ಅತ್ಯುತ್ತಮ ಓದುಗ'''''''' ಎಂದು ಗುರುತಿಸಿ ಅಂತಹ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ''''''''ಪುಸ್ತಕ ಬಹುಮಾನ'''''''' ನೀಡಲಾಗುವುದು ಎಂದರು.

ಸಹ ಪ್ರಾಧ‍್ಯಾಪಕ ಡಾ. ಸರ್ಫರಾಜ್ ಅಹ್ಮದ್ ಮಾತನಾಡಿ, ಗ್ರಂಥಾಲಯ ನಿರ್ವಹಣೆ ಮಾಡುವುದು ಕೂಡ ಒಂದು ವಿಜ್ಞಾನವಾಗಿದೆ ಎಂದರು. ಸಹಾಯಕ ಪ್ರಾಧ್ಯಾಪಕ ವಿರೂಪಾಕ್ಷ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು.

ಐಕ್ಯೂಎಸಿ ಸಂಚಾಲಕ ರವಿಕುಮಾರ, ಸಹಾಯಕ ಪ್ರಾಧ್ಯಾಪಕ ವೀರೇಶ, ಶಂಕ್ರಪ್ಪ ಎಂ., ಉಪನ್ಯಾಸಕರಾದ ಪೀರಾವಲಿ, ಅರ್ಜುನ್, ಜಬೀನಾ ಬೇಗಂ, ವಿನಾಯಕ, ಚಿನ್ನ ವರಪ್ರಸಾದ್, ಶರಣಬಸವ ಮತ್ತು ಶಾಂತಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.