ಸಾರಾಂಶ
ನರಗುಂದ: ಗ್ರಾಮೀಣ ಪ್ರದೇಶದಲ್ಲಿ ಜ್ಞಾನ ಸಂಪಾದನೆಗೆ ಅತ್ಯಂತ ಸರಳ ಮತ್ತು ಸುಲಭವಾದ ಮಾರ್ಗಗಳನ್ನು ಗ್ರಂಥಾಲಯ ಒದಗಿಸುತ್ತದೆ. ಯುವಕರು, ಗ್ರಾಮಸ್ಥರು ಗ್ರಂಥಾಲಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಗ್ರಾಮದ ಮುಖಂಡ ಡಾ. ಸಿ.ಕೆ. ರಾಚನಗೌಡ್ರ ಹೇಳಿದರು.
ಅವರು ಬುಧವಾರ ತಾಲೂಕಿನ ಬೆನಕನಕೊಪ್ಪ ಗ್ರಾಪಂ ವ್ಯಾಪ್ತಿಯ ಸಂಕದಾಳ ಗ್ರಾಮದಲ್ಲಿ ನೂತನ ಉಪ ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲೆಯಲ್ಲಿ ಗ್ರಂಥಾಲಯ ತೆರೆದಿರುವುದರಿಂದ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ. ವಿದ್ಯಾರ್ಥಿಗಳು ಪಠ್ಯದ ಜತೆ ಇತರ ಪುಸ್ತಕಗಳನ್ನು ಓದುವುದಕ್ಕೆ ಸಹಕಾರಿಯಾಗಿದೆ. ಜತೆಗೆ ದಿನಪತ್ರಿಕೆ, ಸ್ಪರ್ಧಾತ್ಮಕ ಪರೀಕ್ಷೆಗಳ ಬಗೆಗಿನ ಪುಸ್ತಕ ಓದುವ, ಓದಿದ್ದನ್ನು ಮನನ ಮಾಡಿಕೊಳ್ಳುವುದನ್ನು ರೂಢಿಸಿಕೊಂಡಲ್ಲಿ ಸಾಧನೆ ಮಾಡಬಹುದಾಗಿದೆ ಎಂದರು.ಗ್ರಂಥಾಲಯಗಳು ಸಾರ್ವಜನಿಕರ ಜ್ಞಾನದಾಹ ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಓದುಗರಿಗೆ ಸಹಾಯವಾಗುವಂತೆ ಅನೇಕ ಪುಸ್ತಕಗಳನ್ನು ಒದಗಿಸಲಾಗುತ್ತಿದೆ. ಐಎಎಸ್, ಐಪಿಎಸ್ ಓದುವಂತವರಿಗೂ ಇಲ್ಲಿ ಪುಸ್ತಕಗಳನ್ನು ಒದಗಿಸುತ್ತೇವೆ. ಇನ್ನೂ ಪುಸ್ತಕಗಳ ಬೇಡಿಕೆ ಸಲ್ಲಿಸಿದರೆ ತರಿಸಿಕೊಡಲಾಗುವುದು ಎಂದರು.
ತಾಪಂ ಅಧಿಕಾರಿ ಎಸ್.ಕೆ. ಇನಾಮದಾರ ಮಾತನಾಡಿ, ಪ್ರತಿ ಗ್ರಾಮದಲ್ಲಿ ಅಕ್ಷರಸ್ಥರಾಗಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಪ್ರತಿ ಗ್ರಾಪಂಯಲ್ಲಿ ಗ್ರಂಥಾಲಯ ಸ್ಥಾಪನೆ ಮಾಡಿವೆ. ಅದರ ಹೊರತಾಗಿಯೂ ಉಪ ಗ್ರಂಥಾಲಯ ಸ್ಥಾಪನೆ ಮಾಡಿ ಪ್ರತಿ ಹಳ್ಳಿಗಳಿಗೂ ಗ್ರಂಥಾಲಯ ಸ್ಥಾಪನೆ ಮುಂದಾಗಿದೆ. ಆ ನಿಟ್ಟಿನಲ್ಲಿ ಸಂಕದಾಳ ಗ್ರಾಮದಲ್ಲಿ ಉದ್ಘಾಟನೆಯಾಗಿದೆ. ತಾಲೂಕಿನಲ್ಲಿ 26 ಗ್ರಂಥಾಲಯಗಳ ಸದ್ಯ ಸ್ಥಾಪನೆಯಾಗಿದ್ದು, ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಿದೆ ಎಂದರು.ಈ ವೇಳೆ ತಾಪಂ ಅಧಿಕಾರಿ ಅಂಗನವಾಡಿ ಕಟ್ಟಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನೂತನ ಗ್ರಂಥಾಲಯಕ್ಕೆ ಜಾಗವಿದೆ, ಸ್ವಂತ ಕಟ್ಟಡ ನಿರ್ಮಿಸಿಕೊಡಲು ಗ್ರಾಮಸ್ಥರು ಮನವಿ ಮಾಡಿದರು. ಗ್ರಾಪಂ ಅಧ್ಯಕ್ಷೆ ಶಾಂತವ್ವ ಕೊವಿ, ಉಪಾಧ್ಯಕ್ಷೆ ಪಾರ್ವತೆವ್ವ ಮಾದರ, ಸದಸ್ಯರಾದ ಸಿದ್ದಣ್ಣ ಅಂಗಡಿ, ನಾಗನಗೌಡ ಪೊಲೀಸ್ ಪಾಟೀಲ, ವೀರಪ್ಪ ನಾಯ್ಕರ, ಬಸಪ್ಪ ಭೂಮಣ್ಣನವರ, ಸಿದ್ದನಗೌಡ ಚನ್ನಪ್ಪಗೌಡ್ರ, ಪಿಡಿಒ ಎಲ್.ಬಿ. ಕಲ್ಲಾಪುರ, ಕಾರ್ಯದರ್ಶಿ ಶರಣಪ್ಪ ಬಾರಕೇರ ಇದ್ದರು.