ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾವರ
ಕಲಿಕೆ ಎನ್ನುವುದು ನಿರಂತರ. ಕೇವಲ ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದಷ್ಟೆ ಶಿಕ್ಷಣ ಎಂದೆನೆಸಿಕೊಳ್ಳುವುದಿಲ್ಲ. ಅಂಕಗಳಿಗೆ ಸೀಮಿತವಾಗಿ ವಿದ್ಯಾರ್ಥಿಗಳು ಬೆಳೆಯಬಾರದು. ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಭಾವನೆ ಬೆಳೆಯಬೇಕು. ಪುಸ್ತಕ ಪ್ರೀತಿ ಸಹ ಜಾಗೃತಿ ಆಗಬೇಕು ಎಂಬ ಉದ್ದೇಶದೊಂದಿಗೆ ತಾಲೂಕಿನ ಖರ್ವಾ ಕೊಳಗದ್ದೆಯ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಸ್ಥಳೀಯ ಗ್ರಂಥಾಲಯಕ್ಕೆ ಭೇಟಿ ನೀಡುವ ಫೀಲ್ಡ್ ವಿಸಿಟ್ ಹಮ್ಮಿಕೊಳ್ಳಲಾಗಿತ್ತು.ಖರ್ವಾ ಗ್ರಾಪಂ ಆವರಣದಲ್ಲಿರುವ ಸಾರ್ವಜನಿಕ ಗ್ರಂಥಾಲಯಕ್ಕೆ (ಅರಿವು ಮತ್ತು ಮಾಹಿತಿ ಕೇಂದ್ರ) ಭೇಟಿ ನೀಡಿ ಗ್ರಂಥಪಾಲಕರಿಂದ ಮಾಹಿತಿ ಪಡೆದುಕೊಂಡರು.
ಶಿಕ್ಷಕರ ಮಾರ್ಗದರ್ಶನದಲ್ಲಿ ಎರಡು ಗುಂಪುಗಳಲ್ಲಿ ಶಿಸ್ತುಬದ್ಧವಾಗಿ ತೆರಳಿದ ವಿದ್ಯಾರ್ಥಿಗಳು ಅಲ್ಲಿಯ ಮೇಲ್ವಿಚಾರಕ ಜಿ.ಕೆ. ಗೌಡ ಅವರಿಗೆ ಗ್ರಂಥಾಲಯಕ್ಕೆ ಸಂಬಂಧಪಟ್ಟಂತ ಪ್ರಶ್ನೆ ಕೇಳಿ, ಅನುಮಾನ ಪರಿಹರಿಸಿಕೊಂಡರು. ಪ್ರಶ್ನೆಗಳಿಗೆ ನಗುಮೊಗದಿಂದಲೇ ಉತ್ತರಿಸಿದ ಮೇಲ್ವಿಚಾರಕರು ಗ್ರಂಥಾಲಯಕ್ಕೆ ಸಂಬಂಧಪಟ್ಟ ಹಲವಾರು ಮಾಹಿತಿ ಹಾಗೂ ತಮ್ಮ ಅನುಭವ ಹಂಚಿಕೊಂಡರು.ವಿದ್ಯಾರ್ಥಿಗಳು ಗ್ರಂಥಾಲಯ ಪ್ರಾರಂಭವಾದ ವರ್ಷ, ಅಲ್ಲಿರುವ ಪುಸ್ತಕಗಳ ಸಂಖ್ಯೆ, ಪಾಲಿಸಬೇಕಾದ ನಿಯಮಗಳು,ನಿರ್ವಹಿಸಬೇಕಾದ ದಾಖಲೆಗಳು, ಸಮಯ, ವಾರದ ರಜೆ, ಸದಸ್ಯತ್ವ ಪಡೆಯುವ ಬಗ್ಗೆ, ಸದ್ಯದ ಸದಸ್ಯರ ಸಂಖ್ಯೆ, ಅಲ್ಲಿ ಲಭ್ಯವಿರುವ ದಿನ ಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳ ಬಗ್ಗೆ, ಕ್ಯಾರಮ್, ಚೆಸ್ ಹಾಗೂ ವಿವಿಧ ಒಳಾಂಗಣ ಆಟಿಕೆಗಳು, ವಿಶೇಷಚೇತನರಿಗೆ ಅದರಲ್ಲೂ ಮುಖ್ಯವಾಗಿ ಅಂಧರಿಗಾಗಿ ಇರುವ ಆಟಿಕೆಗಳು, ಬರವಣಿಗೆ ಸಾಮಗ್ರಿ ಹಾಗೂ ಬ್ರೈಲ್ ಲಿಪಿ, ಗ್ರಂಥಾಲಯದಲ್ಲಿ ಇತ್ತೀಚೆಗೆ ಪ್ರಸಿದ್ಧಿಗೆ ಬಂದಿರುವ ಡಿಜಿಟಲ್ ಲೈಬ್ರರಿ ವ್ಯವಸ್ಥೆ, ವೈಫೈ ಸೌಲಭ್ಯ,ಲ್ಯಾಪ್ ಟಾಪ್, ಟ್ಯಾಬ್ಲೆಟ್, ಮೊಬೈಲ್, ಕಂಪ್ಯೂಟರ್ ಹಾಗೂ ಪ್ರಿಂಟರ್ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.
ಇದೇ ಸಂದರ್ಭ ಖರ್ವಾ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದ ಹಾಗೂ ಗ್ರಂಥಾಲಯ ಸ್ಥಾಪನೆಗೆ ಕಾರಣರಾದ ದಿ. ವೆಂಕಟ್ರಮಣ ನಾರಾಯಣ ಹೆಗಡೆ ಅವರನ್ನು ಸ್ಮರಿಸಲಾಯಿತು.ಅಲ್ಲದೆ ವಿದ್ಯಾರ್ಥಿಗಳು ತಾವು ಕಂಡ ದೊಡ್ಡ ಕನಸುಗಳನ್ನು ಈಡೇರಿಸಿಕೊಳ್ಳಲು ಪುಸ್ತಕಗಳು ಸಹಕಾರಿಯಾಗಲಿವೆ. ಯಾವುದೋ ವ್ಯಕ್ತಿಯಿಂದ ಪ್ರೇರಣೆಗೊಂಡು ವಿದ್ಯಾರ್ಥಿಗಳು ಸಹ ತಾವು ಇದೇ ರೀತಿ ಆಗಬೇಕು ಎಂಬುದಕ್ಕೆ ಈ ರೀತಿಯ ಗ್ರಂಥಾಲಯ ಭೇಟಿ ಕಾರಣವಾಗಬಹುದು.
ಮೊಬೈಲ್ ಬಳಕೆ ಮುಂದೆ ಪುಸ್ತಕ ಪ್ರೀತಿ ಮಾಯ.!:ಇನ್ನು ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ದಿನೇ ದಿನೇ ಕುಸಿಯುತ್ತಿದೆ. ಇದಕ್ಕೆ ಕಾರಣ ಮುಖ್ಯವಾಗಿ ಮೊಬೈಲ್. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗಿನವರೂ ಸಹ ಮೊಬೈಲ್ ಮೇಲೆ ವಿಶೇಷ ಪ್ರೀತಿ ಹೊಂದಿದ್ದಾರೆ. ಬೇಕಾದ್ದನ್ನು ಕುಳಿತಲ್ಲಿಯೆ ಪಡೆಯಬಹುದಾದ್ದರಿಂದ ಪುಸ್ತಕದ ಮೇಲಿನ ಪ್ರೀತಿ ಮಾಯವಾಗುತ್ತಿದೆ. ಆದರೆ ಮಕ್ಕಳು ಗ್ರಂಥಾಲಯಕ್ಕೆ ಭೇಟಿ ನೀಡಿ ಅದರ ಬಗ್ಗೆ ಮಾಹಿತಿ ಪಡೆಯಬೇಕು. ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂಬುದು ಈ ಕ್ಷೇತ್ರ ಭೇಟಿಯ ಹಿಂದಿನ ಮುಖ್ಯ ಉದ್ದೇಶವಾಗಿದೆ. ಈ ರೀತಿಯ ಕಾರ್ಯ ಮಾಡುತ್ತಿರುವ ಶಾಲೆಯ ಬಗ್ಗೆ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.