ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ದಿನಾಚರಣೆ ಮತ್ತು ಪುಸ್ತಕ ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಯಡೂರಿನ ಬಿ.ಟಿ. ಚನ್ನಯ್ಯ ಗೌರಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾಲೇಜಿನ ಗ್ರಂಥಾಲಯ ವಿಭಾಗ ಮತ್ತು ಐ.ಕ್ಯೂ.ಎ.ಸಿ. ಸಹಯೋಗದೊಂದಿಗೆ ಶುಕ್ರವಾರ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ದಿನಾಚರಣೆ ಮತ್ತು ಪುಸ್ತಕ ಪ್ರದರ್ಶನ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಡಿ. ಹರ್ಷ ಉದ್ಘಾಟಿಸಿದರು. ನಂತರ ಮಾತನಾಡಿ, ಪ್ರತಿಯೊಂದು ಮನೆಗಳಲ್ಲೂ ಪುಟ್ಟ ಗ್ರಂಥಾಲಯ ಇರುವುದು ಅವಶ್ಯಕ. ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಗ್ರಂಥಾಲಯದ ಪ್ರಾಮುಖ ಪಾತ್ರ ವಹಿಸುತ್ತದೆ. ಓದುವ ಹವ್ಯಾಸ ಇಲ್ಲದಿದ್ದಲ್ಲಿ ಅನಕ್ಷರಸ್ಥರಿಗೂ ಅಕ್ಷರಸ್ಥರಿಗೂ ವ್ಯತ್ಯಾಸ ಇರುವುದಿಲ್ಲ. ದಿನದ ಅಲ್ಪ ಸಮಯವನ್ನಾದರೂ ಗ್ರಂಥಾಲಯಕ್ಕೆ ಮೀಸಲಿಡಬೇಕು. ಪ್ರತಿ ವಿದ್ಯಾರ್ಥಿಯೂ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ಐ.ಕ್ಯೂ.ಎ.ಸಿ. ಸಂಚಾಲಕರು ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಎಂ.ಎಂ. ಸುನಿತಾ, ಕನ್ನಡ ವಿಭಾಗದ ಮುಖ್ಯಸ್ಥರಾದ ಎಚ್. ಹುಚ್ಚೇಗೌಡ, ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಬಿ.ಎಸ್. ವಿನೋದ್, ಗ್ರಂಥಪಾಲಕರಾದ ಎಸ್. ದಿವ್ಯ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಮಂಟೇಲಿಂಗ ಕಾರ್ಯಕ್ರಮವನ್ನು ನಿರೂಪಿಸಿ ವಿದ್ಯಾರ್ಥಿಗಳಾದ ರಶ್ಮಿ ಮತ್ತು ನಿತ್ಯಾ ಅವರು ಪ್ರಾರ್ಥನೆ ಮಾಡಿದರು.ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಗ್ರಂಥಾಲಯದ ಮಹತ್ವ ಎಂಬ ವಿಷಯ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿ, ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಪುಸ್ತಕ ಪ್ರದರ್ಶನದಲ್ಲಿ ಸಾಹಿತ್ಯ, ವಿಜ್ಞಾನ, ಕಲೆ, ಸಂಶೋಧನಾ ಕಲೆ, ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಎಲ್ಲಾ ವಿಭಾಗಗಳ 500ಕ್ಕೂ ಹೆಚ್ಚು ಆಕರ್ಷಕ ಪುಸ್ತಕಗಳನ್ನು ಪ್ರದರ್ಶಿಸಲಾಗಿತ್ತು.