ಸಾರಾಂಶ
ಎಲ್ಲಾ ತಂಬಾಕು ಮಾರಾಟಗಾರರು ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆಯಿಂದ ಕಡ್ಡಾಯವಾಗಿ ಉದ್ಯಮ ಪರವಾನಗಿ ಪಡೆದುಕೊಳ್ಳಬೇಕು
ಚಿತ್ರದುರ್ಗ: ಎಲ್ಲಾ ತಂಬಾಕು ಮಾರಾಟಗಾರರು ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆಯಿಂದ ಕಡ್ಡಾಯವಾಗಿ ಉದ್ಯಮ ಪರವಾನಗಿ ಪಡೆದುಕೊಳ್ಳಬೇಕು ಎಂದು ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್ ತಿಳಿಸಿದರು.
ಇಲ್ಲಿನ ನಗರಸಭೆ ಸಭಾಂಗಣದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದವತಿಯಿಂದ ಪೌರಾಡಳಿತ ಇಲಾಖೆ ಎಲ್ಲಾ ಪೌರಾಯುಕ್ತರು, ಮುಖ್ಯಾಧಿಕಾರಿಗಳು, ಪರಿಸರ ಅಭಿಯಂತರರು ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿಗಳಿಗೆ ತಂಬಾಕು ಉತ್ಪನ್ನ ಮಾರಾಟ ಉದ್ಯಮ ಪರವಾನಗಿ ನೀಡುವ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ತಂಬಾಕು ಉತ್ಪನ್ನಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ ನಿಯಂತ್ರಣ ಮಾಡುವಂತೆ ಪೌರಾಯುಕ್ತರು, ಮುಖ್ಯಾಧಿಕಾರಿಗಳು, ಪರಿಸರ ಅಭಿಯಂತರರು ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಸೂಚಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಮಾತನಾಡಿ, ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿ ದೊರೆಯುವಂತಹ ಉಚಿತ ಆಪ್ತಸಮಾಲೋಚನೆ ಮತ್ತು ನಿಕೋಟಿನ್ ಗಮ್ಸ್ ನೀಡಲಾಗುತ್ತದೆ. ನಗರ ಪ್ರದೇಶಗಳಲ್ಲಿ ಗರ್ಭಿಣಿ ಸ್ತ್ರೀಯರು ಧೂಮಪಾನ ಮಾಡುತ್ತಾರೆ. ಇದರಿಂದಾಗಿ ಮಹಿಳೆಯರಿಗೂ, ಮಗುವಿನ ಬೆಳವಣಿಗೆ ಹಾಗೂ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಎಂದರು.
ರಾಜ್ಯ ತಂಬಾಕು ನಿಯಂತ್ರಣ ಕೋಶದ ವಿಭಾಗೀಯ ಸಂಯೋಜಕ ಮಹಂತೇಶ್ ಅವರು, ತಂಬಾಕು ಮಾರಾಟಗಾರರಿಗೆ ಉದ್ಯಮ ಪರವಾನಗಿ ನೀಡುವ ಕುರಿತು ಸವಿವರವಾಗಿ ತರಬೇತಿ ನೀಡಿದರು. ಎಲ್ಲಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ನಗರ ತಂಬಾಕು ನಿಯಂತ್ರಣ ಸಮಿತಿ ರಚಿಸಿ, ಯೋಜನಾ ನಿರ್ದೇಶಕರು, ನಗರಾಭಿವೃದ್ಧಿ ಕೋಶದಿಂದ ಜಿಲ್ಲಾ ತಂಬಾಕು ನಿಯಂತ್ರಣ ಕೋಶಕ್ಕೆ ಸಲ್ಲಿಸುವಂತೆ ತರಬೇತಿ ಸಲಹೆ ಮಾಡಿದರು. ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ಚಂದ್ರಶೇಖರ್, ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ್, ಸಮಾಜ ಕಾರ್ಯಕರ್ತ ಕೆ.ಎಂ.ತಿಪ್ಪೇಸ್ವಾಮಿ ಸೇರಿದಂತೆ ಪೌರಾಡಳಿತ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.