ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವವರು ಕಡ್ಡಾಯವಾಗಿ ನಗರಸಭೆಯಿಂದ ಪರವಾನಗಿ ಪಡೆದುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವರಿಗೆ ದಂಡ ವಿಧಿಸುವ ಕಾನೂನು ಜಾರಿಯಲ್ಲಿದೆ. ಮಾಲ್‌ಗಳು, ಹೋಟೆಲ್ ಮುಂತಾದ ಸ್ಥಳಗಳಲ್ಲಿ ಸ್ಮೋಕಿಂಗ್ ಝೋನ್ ಮಾಡುವುದು ಕಡ್ಡಾಯವಾಗಿದೆ ಎಂದು ಪೌರಾಯುಕ್ತ ಜ್ಯೋತಿ ಗಿರೀಶ ತಿಳಿಸಿದರು.ನಗರಸಭೆ ಸಭಾಭವವನದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿದ ಅವರು, ತಂಬಾಕು ಉತ್ಪನ್ನ ಮಾರಾಟ ಮಾಡಲು ಸರ್ಕಾರ ರೂಪಿಸಿರುವ ಕಾನೂನು ಪಾಲಿಸಬೇಕು. ಇಲ್ಲವಾದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಕಾರ್ಯಾಚರಣೆ ನಡೆಸಿ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುವುದು. ನಗರದಲ್ಲಿ ಮಾವಾ ತಯಾರಿಕೆ ಅಡ್ಡೆಗಳನ್ನು ಬಂದ್ ಮಾಡಲಾಗಿದೆ ಎಂದು ತಿಳಿಸಿದರು.
ಕಸ ಸಂಗ್ರಹಣೆ, ನಗರ ಸ್ವಚ್ಛತೆ ಹಾಗೂ ನಗರದ ಪ್ರತಿ ವಾರ್ಡನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಚಾಲ್ತಿಯಲ್ಲಿರುವ ಕುಡಿಯುವ ನೀರಿನ ಘಟಕಗಳನ್ನು ಮುಂದುವರಿಸುವುದು ಹಾಗೂ ಅವಶ್ಯವಿರುವ ಸ್ಥಳಗಳಲ್ಲಿ ಹೊಸ ಘಟಕ ಸ್ಥಾಪಿಸಲು ಚರ್ಚೆ ನಡೆಯಿತು. ಅವಶ್ಯವಿರುವಲ್ಲಿ ನೀರಿನ ಘಟಕ ಸ್ಥಾಪಿಸಲು ಎಲ್ಲರೂ ಸಹಕಾರ ನೀಡುವಂತೆ ಅಧ್ಯಕ್ಷ ಈಶ್ವರ ವಾಳೆಣ್ಣವರ ಸದಸ್ಯರಲ್ಲಿ ಮನವಿ ಮಾಡಿದರು.ಸದಸ್ಯ ಗುರುಪಾದಪ್ಪ ಮೆಂಡಿಗೇರಿ ನಗರ ಪ್ರದೇಶದಲ್ಲಿ ಸುಲಭ ಶೌಚಾಲಯಗಳನ್ನು ಸ್ಥಾಪಿಸುವಂತೆ ಮನವಿ ಮಾಡಿದರು. ನಗರದ ಮಾರುಕಟ್ಟೆ ಸೇರಿ ಜನಸಂದಣಿ ಇರುವ ಪ್ರದೇಶಗಳಲ್ಲಿ ಸುಲಭ ಶೌಚಾಲಯ ನಿರ್ಮಿಸಲಾಗುತ್ತಿದೆ. ನಗರದ ಪ್ರಮುಖ ಬೀದಿಗಳಲ್ಲಿ ನಾಲ್ಕು ಹೊಸ ಶೌಚಾಲಯ, ಮೂತ್ರಿಗಳನ್ನು ನಿರ್ಮಿಸಲಾಗುವುದು ಎಂದು ಪೌರಾಯುಕ್ತರು ಮಾಹಿತಿ ನೀಡಿದರು.
ನಗರಸಭೆ ಸದಸ್ಯರಿಗೆ ಮಧ್ಯಪ್ರದೇಶದ ಇಂಧೋರನ ಪ್ರವಾಸ ಏರ್ಪಡಿಸಲಾಗಿದ್ದು, ಆಸಕ್ತರು ಆ.18ರ ಒಳಗಾಗಿ ಹೆಸರು ನೋಂದಾಯಿಸಿ ಕೊಳ್ಳುವಂತೆ ತಿಳಿಸಲಾಯಿತು. ಸರ್ಕಾರದ ಆದೇಶದ ಅನ್ವಯ ರೀಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಒಂದೇ ಬಾರಿಗೆ ಟೆಂಡರ್ ನೀಡುವುದಿಲ್ಲ. ಪುನಃ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.ನಗರದಲ್ಲಿ ಟೆಂಡರ್ ಪಡೆದು ಕೆಲಸ ವಿಳಂಬ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸದಸ್ಯ ದಾನೇಶ ಘಾಟಗೆ ಮನವಿ ಮಾಡಿದರು. ಅಂತಹ ಗುತ್ತಿಗೆದಾರರಿಗೆ ಶೇ.1ರಷ್ಟು ದಂಡ ವಿಧಿಸಲಾಗುತ್ತಿದೆ. ನೋಟಿಸ್ ಸಹ ಜಾರಿ ಮಾಡಲಾಗಿದೆ. ಕಾಮಗಾರಿಯನ್ನು ಗುತ್ತಿಗೆ ಪಡೆದ ನಂತರ ನಿಗದಿತ ಸಮಯದಲ್ಲಿ ಪೂರ್ತಿಗೊಳಿಸಬೇಕು ಎಂದು ಅಧಿಕಾರಿಗಳು ವಿವರಣೆ ನೀಡಿದರು.
ನಗರದ ಸ್ವಚ್ಛತೆ ಹಾಗೂ ಸಿಸಿ ರಸ್ತೆಗಳ ನಿರ್ಮಾಣ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಉಪಾಧ್ಯಕ್ಷೆ ರೇಖಾ ಕಾಂಬಳೆ, ಸದಸ್ಯರಾದ ದಿಲಾವರ ಶಿರೋಳ, ಕಿರಣ ಪಿಸಾಳ, ಮಹಾನಂದಾ ಪಾಯಗೊಂಡ, ಕುಶಾಲ ವಾಘಮೊರೆ, ಸುನೀಲ ಸಿಂಧೆ ಇತರರು ಚರ್ಚೆಯಲ್ಲಿ ಭಾಗವಹಿಸಿದ್ದರು.