ಹುಬ್ಬಳ್ಳಿ:
ಜಿಮ್‌ಗಳಲ್ಲಿ ನಿಯಮ ಬದ್ಧವಾಗಿ ಸುರಕ್ಷತೆ ಪಾಲಿಸದಿದ್ದಲ್ಲಿ ಲೈಸನ್ಸ್ ರದ್ದು ಮಾಡಲಾಗುವುದು ಎಂದು ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಎಚ್ಚರಿಕೆ ನೀಡಿದರು.ಇಲ್ಲಿನ ಕೆಎಲ್‌ಇ ಬಿವಿಬಿ ತಾಂತ್ರಿಕ ಮಹಾವಿದ್ಯಾಲಯದ ಬಯೋಟೆಕ್ ಸಭಾಂಗಣದಲ್ಲಿ ಹು-ಧಾ ಪೊಲೀಸ್ ಕಮೀಷನರೇಟ್ ವತಿಯಿಂದ ಜಿಲ್ಲೆಯ ಜಿಮ್ ಮಾಲೀಕರ ಹಾಗೂ ಟ್ರೈನರ್‌ಗಳ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 150 ಜಿಮ್‌ಗಳಿದ್ದು ಕೆಲವೆಡೆ ಸುರಕ್ಷತೆ ಪಾಲನೆಯಾಗುತ್ತಿಲ್ಲ ಎನ್ನುವ ಆರೋಪವಿದೆ. ಈಚೆಗೆ ಯುವತಿ ಮೇಲೆ ನಡೆದ ಘಟನೆಯಿಂದ ಜಿಮ್‌ಗಳ ಮೇಲೆ ಜನರ ಅಭಿಪ್ರಾಯ ಬದಲಾಗಿದೆ. ಮಾಲೀಕರು ಮತ್ತು ಟ್ರೈನರ್‌ಗಳು ಬಹಳಷ್ಟು ಶಿಸ್ತು ಅಳವಡಿಸಿಕೊಂಡಿದ್ದರು ಕೆಲವರು ಮಾಡುವ ತಪ್ಪಿನಿಂದ ಇಡೀ ಜಿಮ್‌ಗಳ ಮೇಲೆ ಕೆಟ್ಟ ಪ್ರಭಾವ ಬರಲಿದೆ. ಅನಧಿಕೃತ ವ್ಯಕ್ತಿಗಳನ್ನು ಕೂರಿಸಿಕೊಂಡು ಜಿಮ್‌ಗಳನ್ನು ಅಡ್ಡ ಮಾಡಿಕೊಂಡರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದು. ಹೀಗಾಗಿ ಮಾಲೀಕರು ಎಚ್ಚರ ವಹಿಸಬೇಕು ಎಂದರು.ಜಿಮ್‌ನಲ್ಲಿ ಕಡ್ಡಾಯವಾಗಿ ಗುಣಮಟ್ಟವುಳ್ಳ ವೀಡಿಯೋ ಮತ್ತು ಆಡಿಯೋವುಳ್ಳ ಸಿಸಿ ಕ್ಯಾಮೆರಾ, ಅದನ್ನು ಸಂಗ್ರಹಿಸಿಕೊಟ್ಟಳು ಸ್ಟೋರೆಜ್, ಟ್ರೈನರ್‌ಗಳ ಪೂರ್ವಪರ ವಿಚಾರಣೆ ಮಾಡಿ ನೇಮಕ ಮಾಡಿಕೊಳ್ಳುವುದು, ಮಾಲೀಕರು ಸೇರಿ ಸಿಬ್ಬಂದಿಗಳ ಪೂರ್ಣ ವಿವರದ ನಾಮಫಲಕವನ್ನು ಜಿಮ್‌ನಲ್ಲಿ ಹಾಕಬೇಕು ಎಂದು ಎಚ್ಚರಿಕೆ ನೀಡಿದರು.
ಜಿಮ್‌ನಲ್ಲಿ ಸಿಬ್ಬಂದಿ ಹೊರತುಪಡಿಸಿ ಹೊರಗಿನ ಯಾರನ್ನು ಬಿಟ್ಟುಕೊಂಡು ಅಡ್ಡ ಮಾಡಿಕೊಳ್ಳಬಾರದು. ಒಂದು ವೇಳೆ ಅಂತಹ ಘಟನೆಗಳು ಕಂಡುಬಂದರೆ ಮುಲಾಜಿಲ್ಲದೆ, ಲೈಸನ್ಸ್ ರದ್ದು ಮಾಡಲಾಗುವುದು ಎಂದ ಶಶಿಕುಮಾರ, ಮಹಿಳಾ ಸದಸ್ಯರ ಸುರಕ್ಷತೆ ಕಾಪಾಡುವ ಜತೆಗೆ ಅವರ ಪೋಟೋ, ವೀಡಿಯೋವನ್ನು ಅವರ ಅನುಮತಿಯಿಲ್ಲದೆ ತೆಗೆಯಬಾರದು. ಅಪರಾಧಿಕ ಚಟುವಟಿಕೆ ಉಳ್ಳವರ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಮಾತನಾಡಿ, ಕಡ್ಡಾಯವಾಗಿ ಜಿಮ್ ನೋಂದಣಿ ಮಾಡಿಕೊಳ್ಳಬೇಕು. ಜಿಮ್‌ನಲ್ಲಿ ಕೊಡುವ ಪ್ರೋಟಿನ್‌ಗಳ ಪ್ರಮಾಣದಲ್ಲಿ ಹೆಚ್ಚಾದರೆ, ದೈಹಿಕ ಆರೋಗ್ಯಕ್ಕೆ ತೊಂದರೆಯಾಗಲಿದೆ. ಹೀಗಾಗಿ ಪ್ರೋಟಿನ್ ಕೊಡುವಲ್ಲಿ ನಿಯಮ ಮೀರಬಾರದು. ಒಂದು ವೇಳೆ ನಿಯಮ ಮೀರಿದ್ದು ಕಂಡು ಬಂದರೆ ಲೈಸೆನ್ಸ್ ರದ್ದು ಮಾಡಲಾಗುವುದು ಎಂದರು.
ಈ ವೇಳೆ ಡಿಸಿಪಿ ರವೀಶ್ ಸಿ.ಆರ್, ಕೆಎಂಸಿಆರ್‌ಐ ಆಡಳಿತಾಧಿಕಾರಿ ಡಾ. ರಾಜಶೇಖರ್ ದ್ಯಾಬೇರಿ, ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಸಲೀಂ ಗೌರ್, ಕೃಷ್ಣ ಚಿಕ್ಕತುಂಬಳ ಸೇರಿದಂತೆ ನೂರಾರು ಜಿಮ್ ಮಾಲೀಕರು, ಟ್ರೈನರ್‌ಗಳು ಪಾಲ್ಗೊಂಡಿದ್ದರು.