ಸುಳ್ಳು ಹೇಳಿ, ಕಾಲನೂಕುವುದು ಸರ್ಕಾರಕ್ಕೆ ಶೋಭೆಯಲ್ಲ

| Published : Jan 18 2024, 02:02 AM IST

ಸಾರಾಂಶ

ಸುಳ್ಳು ಹೇಳಿ ದಿನಗಳನ್ನು ನೂಕುವುದು ಯಾವುದೇ ಮಾನವಂತ ಸರ್ಕಾರದ ನಡೆಯಲ್ಲ. ಅದು ಶೋಭೆ ತಾರದು

ಚಿತ್ರದುರ್ಗ: ಸುಳ್ಳು ಹೇಳಿ ದಿನಗಳನ್ನು ನೂಕುವುದು ಯಾವುದೇ ಮಾನವಂತ ಸರ್ಕಾರದ ನಡೆಯಲ್ಲ. ಅದು ಶೋಭೆ ತಾರದು ಎಂದು ಸಾಮಾಜಿಕ ಚಿಂತಕ ಜೆ.ಯಾದವರೆಡ್ಡಿ ಹೇಳಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಒನಕೆ ಓಬವ್ವ ವೃತ್ತದಲ್ಲಿ ಬುಧವಾರ ಏರ್ಪಡಿಸಿದ್ದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಬಗರ್ ಹುಕುಂ ಸಾಗುವಳಿದಾರರು ಕಳೆದ 20 ವರ್ಷಗಳಿಂದಲೂ ಹಕ್ಕುಪತ್ರಕ್ಕಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಪರಿಹಾರ ನೀಡದೆ ಸರ್ಕಾರ ಬಡ ಜನತೆಗೆ ಅಕ್ಷಮ್ಯ ಅಪರಾಧವೆಸಗುತ್ತ ಕಾಲಹರಣ ಮಾಡುತ್ತಿವೆ ಎಂದು ದೂರಿದರು.

ಹೊಟ್ಟೆ ಪಾಡಿಗಾಗಿ ಕನಿಷ್ಟ 2-3 ಎಕರೆ ಸಾಗುವಳಿ ಮಾಡುತ್ತಿರುವ ಬಡವರಿಗೆ ಭೂಮಿ ಹಕ್ಕು ಪತ್ರ ನೀಡುವುದು ತಪ್ಪೇನಲ್ಲ. ಎಲ್ಲದಕ್ಕೂ ಸಕಾಲ ಎನ್ನುವ ಕಾಯಿದೆಯಿದೆ. ಅರ್ಜಿ ಸಲ್ಲಿಸಿ ಇಂತಿಷ್ಟು ದಿನಗಳಲ್ಲಿ ಕೆಲಸ ಮಾಡಿಕೊಡಬೇಕೆಂಬ ನಿಯಮ ಬಗರ್ ಹುಕುಂ ಸಾಗುವಳಿದಾರರಿಗೆ ಅನ್ವಯಿಸುವುದಿಲ್ಲವೇ. ಇದು ಅಧಿಕಾರಿಗಳ ಹೊಣೆಗೇಡಿತನವೋ, ರಾಜಕಾರಣಿಗಳ ನಿರ್ಲಕ್ಷ್ಯವೋ ಗೊತ್ತಾಗುತ್ತಿಲ್ಲ. ಹಾಗಾಗಿ ನ್ಯಾಯಾಂಗ ಮಧ್ಯ ಪ್ರವೇಶಿಸಿ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಹಕ್ಕುಪತ್ರ ಕೊಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ವಿನಂತಿಸಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ ಮಾತನಾಡಿ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು ಭೂಮಿ ಹಕ್ಕುಪತ್ರಗಳನ್ನು ಕೊಡಬೇಕು. ಯಾವುದೇ ಕಾರಣಕ್ಕೂ ಭೂಮಿ ಉಳುಮೆ ಮಾಡುತ್ತಿರುವವರನ್ನು ಒಕ್ಕಲೆಬ್ಬಿಸಬಾರದು. ಒಂದು ವೇಳೆ ಒಕ್ಕಲೆಬ್ಬಿಸುವುದೇ ಆದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ ಮಾತನಾಡಿ, ಇಲ್ಲಿವರೆಗೂ ಎಲ್ಲಾ ಸರ್ಕಾರಗಳು ಸುಳ್ಳು ಹೇಳಿಕೊಂಡು ಬಗರ್ ಹುಕುಂ ಸಾಗುವಳಿದಾರರನ್ನು ವಂಚಿಸಿಕೊಂಡು ಬರುತ್ತಿವೆ. ಹಿಡುವಳಿದಾರರಿಗೆ ಭೂಮಿ ಕೊಡುವುದು ಸರ್ಕಾರದ ಆದ್ಯ ಕರ್ತವ್ಯ. ಕಾರ್ಪೊರೇಟ್ ಕಂಪನಿಗಳಿಗೆ ನೂರಾರು ಎಕರೆ ನೀಡುತ್ತಿರುವ ಸರ್ಕಾರಕ್ಕೆ ಬಗರ್‌ಹುಕುಂ ಸಾಗುವಳಿದಾರರ ಜೀವನಕ್ಕೆ ಭೂಮಿ ಕೊಡಲು ಇಲ್ಲವೆ ಎಂದು ಪ್ರಶ್ನಿಸಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸತ್ಯಪ್ಪ ಮಲ್ಲಾಪುರ ಮಾತನಾಡಿ, ಸಾಗುವಳಿದಾರರಿಗೆ ಭೂಮಿ ನೀಡಲು ಸರ್ಕಾರ ಅನೇಕ ಕಾನೂನು ತೊಡಕುಗಳನ್ನು ಅಡ್ಡ ತರುತ್ತಿದೆ. ರೈತರೆಲ್ಲಾ ಒಂದಾಗಿ ಹೋರಾಡಬೇಕಿದೆ. ಹಿಂದಿನ ಸರ್ಕಾರ ಸಾಕಷ್ಟು ಕಿರುಕುಳ ನೀಡಿತು. ಬಗರ್ ಹುಕುಂ ಕಮಿಟಿ ರಚನೆಯಾಗಿ ಒಂದು ತಿಂಗಳಾದರೂ ಇಲ್ಲಿವರೆಗೆ ಒಂದು ಸಭೆ ಕೂಡ ನಡೆದಿಲ್ಲ. ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಶೀಘ್ರವೆ ಸಭೆ ಕರೆದು ಭೂಮಿ ಸಾಗುವಳಿ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ಎಚ್.ಆನಂದ್‍ ಕುಮಾರ್ ಮಾತನಾಡಿ, 1951ರಲ್ಲಿ ಭೂ ಸುಧಾರಣಾ ಕಾಯಿದೆ ಜಾರಿಗೆ ಬಂದಿತು. 1970ರಲ್ಲಿ ಇಂದಿರಾಗಾಂಧಿ ಭೂ ಮಸೂದೆಯನ್ನು ಅಂಗೀಕರಿಸಿದರು. ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸು ಉಳುವವನೆ ಭೂಮಿ ಒಡೆಯ ಎನ್ನುವ ಕಾನೂನು ಜಾರಿಗೆ ತಂದು ಎಲ್ಲರಿಗೂ ಭೂಮಿಯ ಹಕ್ಕು ನೀಡಿದರು ಎಂದು ಸ್ಮರಿಸಿದರು.

ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ಟಿ.ಶಫಿವುಲ್ಲಾ, ಲಕ್ಷ್ಮಿಸಾಗರ ರಾಜಣ್ಣ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕೆ.ಮರಿಯಪ್ಪ, ಹನುಮಂತಪ್ಪ ಗೋನೂರು, ಬಂಗಾರಕ್ಕನಹಳ್ಳಿ ನಾಗಣ್ಣ, ಈರಜ್ಜ, ಮಲ್ಲಿಕಾರ್ಜುನ್, ಸುನಂದಮ್ಮ, ವೇದಿಕೆಯಲ್ಲಿದ್ದರು.