ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಲಾವಣಿಗಳ ಮೂಲಕ ಪ್ರಖ್ಯಾತರಾಗಿರುವ ಲೇಖಕ ಬಿ.ಆರ್.ಪೊಲೀಸ್ ಪಾಟೀಲ ಅವರು ಬರೆದ ಗದುಗಿನ ತೋಂಟದಾರ್ಯ ಮಠದ ಹಿಂದಿನ ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಜೀವನಾಧಾರಿತ ಕಾದಂಬರಿ ಉರಿಯ ಗದ್ದುಗೆ 2ನೇ ಆವೃತ್ತಿಯ ಲೋಕಾರ್ಪಣೆ ಸಮಾರಂಭ ನಗರದ ಮನಗೂಳಿ ರಸ್ತೆಯ ಗುರುಪಾದೇಶ್ವರ ನಗರದಲ್ಲಿ ತೋಂಟದಾರ್ಯ ಅನುಭವ ಮಂಟಪದಲ್ಲಿ ಜರುಗಿತು.
ಕನ್ನಡಪ್ರಭ ವಾರ್ತೆ ವಿಜಯಪುರ
ಲಾವಣಿಗಳ ಮೂಲಕ ಪ್ರಖ್ಯಾತರಾಗಿರುವ ಲೇಖಕ ಬಿ.ಆರ್.ಪೊಲೀಸ್ ಪಾಟೀಲ ಅವರು ಬರೆದ ಗದುಗಿನ ತೋಂಟದಾರ್ಯ ಮಠದ ಹಿಂದಿನ ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಜೀವನಾಧಾರಿತ ಕಾದಂಬರಿ ಉರಿಯ ಗದ್ದುಗೆ 2ನೇ ಆವೃತ್ತಿಯ ಲೋಕಾರ್ಪಣೆ ಸಮಾರಂಭ ನಗರದ ಮನಗೂಳಿ ರಸ್ತೆಯ ಗುರುಪಾದೇಶ್ವರ ನಗರದಲ್ಲಿ ತೋಂಟದಾರ್ಯ ಅನುಭವ ಮಂಟಪದಲ್ಲಿ ಜರುಗಿತು.ಶ್ರಾವಣ ಮಾಸದ ಪ್ರಯುಕ್ತ ತೋಂಟದಾರ್ಯ ಅನುಭವ ಮಂಟಪದಲ್ಲಿ ಕವಿ ಚಾಮರಸ ವಿರಚಿತ ಪ್ರಭುಲಿಂಗ ಲೀಲೆ ಪ್ರವಚನ ಹೇಳುತ್ತಿರುವ ಖ್ಯಾತ ಪ್ರವಚನಕಾರರು, ಶ್ರೇಷ್ಠ ಅನುಭಾವಿಗಳಾದ ಅಥಣಿ ತಾಲೂಕಿನ ಶೇಗುಣಸಿ ವಿರಕ್ತಮಠದ ಡಾ.ಮಹಾಂತಪ್ರಭು ಸ್ವಾಮಿಗಳು ಉರಿಯ ಗದ್ದುಗೆ 2ನೇ ಆವೃತ್ತಿಯ ಪುಸ್ತಕ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಡಾ.ಮಹಾಂತಪ್ರಭು ಸ್ವಾಮಿಗಳು, ಮಹಾತ್ಮರ ಜೀವನಚರಿತ್ರೆಯ ಪುಸ್ತಕಗಳನ್ನು ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಲೇಖಕರಾದ ಬಿ.ಆರ್.ಪೊಲೀಸ್ ಪಾಟೀಲ ಅವರು ಬೆಳಗಾವಿ ನಾಗನೂರ ಮಠದ ಶಿವಬಸವ ಸ್ವಾಮಿಗಳ ಜೀವನಾಧಾರಿತ ಮಹಾವೃಕ್ಷ ಕಾದಂಬರಿ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಅವರೇ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಜೀವನಚರಿತ್ರೆ ಕುರಿತಾದ ಉರಿಯ ಗದ್ದುಗೆ ಕಾದಂಬರಿಯನ್ನು ಕೇವಲ ಒಂದು ತಿಂಗಳಲ್ಲಿ ಬರೆದಿದ್ದಾರೆ. ಪುಸ್ತಕ ಬಹಳ ಸುಂದರವಾಗಿ ಮೂಡಿದೆ. ಎಲ್ಲರೂ ಈ ಪುಸ್ತಕವನ್ನು ಕೊಂಡುಕೊಂಡು ಓದಬೇಕು ಎಂದರು.ಲೇಖಕ ಬಿ.ಅರ್.ಪೊಲೀಸ್ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಉರಿಯ ಗದ್ದುಗೆ ಪುಸ್ತಕ ಲೋಕಾರ್ಪಣೆಯಾದ ಕೆಲವೇ ತಿಂಗಳಲ್ಲಿ ಈ ಪುಸ್ತಕ ಮರು ಮುದ್ರಣಗೊಂಡಿರುವುದು ಖುಷಿ ತಂದಿದೆ. ಓದುಗರಿಂದ ಬಹಳಷ್ಟು ಬೇಡಿಕೆ ಬಂದಿದೆ ಎಂದು ಹೇಳಿ ಕಾದಂಬರಿಗೆ ಉರಿಯ ಗದ್ದುಗೆ ಎಂದು ಏಕೆ ಹೆಸರಿಡಲಾಯಿತು ಎಂಬುದರ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.
ಡಾ.ಮಹಾಂತಪ್ರಭು ಸ್ವಾಮಿಗಳ ವಿದ್ಯಾಗುರುಗಳಾದ ಬೆಳಗಾವಿಯ ನಿವೃತ್ತ ಪ್ರಾಚಾರ್ಯ ಅಶೋಕ ಬೈಲವಾಡ, ಪಿಎಸ್ ಐ ಶಿವಾನಂದ ಆರೇನಾಡ ಸಾಹಿತಿಗಳಾದ ಮೋಹನ ಕಟ್ಟಿಮನಿ, ಶಂಕರ ಬೈಚಬಾಳ, ತೋಂಟದಾರ್ಯ ಅನುಭವ ಮಂಟಪದ ಕಾರ್ಯದರ್ಶಿ ಎನ್.ಕೆ.ಕುಂಬಾರ, ಹಾಗೂ ಆಡಳಿತ ಮಂಡಳಿಯ ಇತರ ಸದಸ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು.