ಕೌಶಲ್ಯದಿಂದ ಬದುಕು ಅಭಿವೃದ್ಧಿ ಹೊಂದುತ್ತದೆ: ಕೆ.ನಾರಾಯಣಮೂರ್ತಿ

| Published : Aug 13 2025, 12:30 AM IST

ಕೌಶಲ್ಯದಿಂದ ಬದುಕು ಅಭಿವೃದ್ಧಿ ಹೊಂದುತ್ತದೆ: ಕೆ.ನಾರಾಯಣಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಅನುಷ್ಟಾನಕ್ಕೆ ತರುವುದು ಜಿಲ್ಲಾ ಕೌಶಲ್ಯಾಭಿವೃದ್ಧಿ ಘಟಕದ ಜವಾಬ್ದಾರಿಯಾಗಿದೆ. ಈ ಘಟಕದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಕೃತಕ ಬುದ್ಧಿಮತ್ತೆಯೂ ಸೇರಿದಂತೆ 20 ಹೆಚ್ಚಿನ ವಿಭಾಗಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಕೌಶಲ್ಯ ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಕ್ಷೇತ್ರದಿಂದ ಕ್ಷೇತ್ರಕ್ಕೆ ಬದಲಾಗುತ್ತಾ ಹೋಗುತ್ತದೆ. ಕೌಶಲ್ಯದಿಂದ ಬದುಕು ಅಭಿವೃದ್ಧಿ ಹೊಂದುತ್ತದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ.ನಾರಾಯಣಮೂರ್ತಿ ತಿಳಿಸಿದರು.

ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಕೌಶಲ್ಯ ಕರ್ನಾಟಕ ಕುರಿತು ಆಯೋಜಿಸಿದ್ದ ಒಂದು ದಿನದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕೌಶಲ್ಯ ಕೇಂದ್ರದ ಮುಖ್ಯ ಉದ್ದೇಶವೆಂದರೆ ಉದ್ಯೋಗಾಧಾರಿತ ಕೌಶಲ್ಯವನ್ನು ಬೆಂಬಲಿಸುವುದು ಮತ್ತು ಉನ್ನತೀಕರಿಸಿದ ತಂತ್ರಜ್ಞಾನವನ್ನು ಉದ್ಯೋಗಾಕಾಂಕ್ಷಿಗಳಿಗೆ ಪ್ರೇರೇಪಿಸುವುದು ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಅನುಷ್ಟಾನಕ್ಕೆ ತರುವುದು ಜಿಲ್ಲಾ ಕೌಶಲ್ಯಾಭಿವೃದ್ಧಿ ಘಟಕದ ಜವಾಬ್ದಾರಿಯಾಗಿದೆ. ಈ ಘಟಕದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಕೃತಕ ಬುದ್ಧಿಮತ್ತೆಯೂ ಸೇರಿದಂತೆ 20 ಹೆಚ್ಚಿನ ವಿಭಾಗಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ. ಕೌಶಲ್ಯ ಕೇಂದ್ರವು ಹಲವು ಕೈಗಾರಿಕೆಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು, ತರಬೇತಿಯ ನಂತರ ಉದ್ಯೋಗವನ್ನು ಕೊಡಿಸಲಾಗುತ್ತಿದೆ ಎಂದರು.

ದೇಶದಲ್ಲಿ ಮಾತ್ರವಲ್ಲದೇ, ವಿದೇಶಗಳಲ್ಲಿಯೂ ನೌಕರಿ ಪಡೆಯುವಸಲುವಾಗಿ ಸರ್ಕಾರದ ವತಿಯಿಂದ ಉಚಿತ ತರಬೇತಿ ಮತ್ತು ಉಚಿತ ವೀಸಾ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಹಾಗೆಯೇ ವಿದೇಶೀ ಭಾಷೆಗಳ ಕಲಿಕೆಗೂ ಭಾಷಾ ಪ್ರಯೋಗಾಲಯಗಳನ್ನು ಸ್ಥಾಪಿಸಿ ಭಾಷೆಯನ್ನು ಕಲಿಯುವುದಕ್ಕೆ ಉತ್ತೇಜಿಸಲಾಗುತ್ತದೆ. ಅಷ್ಟೇ ಅಲ್ಲದೇ ರಾಜ್ಯ ಸರ್ಕಾರದ ಯುವನಿಧಿಯನ್ನು ಅನುಷ್ಟಾನಗೊಳಿಸುವ ಹೊಣೆಗಾರಿಕೆಯೂ ನಮ್ಮ ಜಿಲ್ಲಾ ಕೇಂದ್ರದ ಮೇಲಿದೆ ಎಂದರು.

ಉದ್ಯಮಿ ಆಗು ಉದ್ಯೋಗ ನೀಡು ಎಂಬ ಘೋಷವಾಖ್ಯದೊಂದಿಗೆ ದೇಶದ ಜಿಡಿಪಿಯನ್ನು ಹೆಚ್ಚಿಸುವ ಸಲುವಾಗಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ಸಲುವಾಗಿ 8 ಲಕ್ಷದವರೆಗೆ ಬ್ಯಾಂಕುಗಳಲ್ಲಿ ಸಹಾಯಧನದ ಆಧಾರದಲ್ಲಿ ಸಾಲವನ್ನು ನೀಡಲಾಗುತ್ತಿದೆ. ವಿದ್ಯಾವಂತರಿಗೆ ಮಾತ್ರವಲ್ಲದೇ ಅವಿದ್ಯಾವಂತರಿಗೂ ಜೀವನೋಪಾಯಕ್ಕಾಗಿ ಉಚಿತ ತರಬೇತಿಯನ್ನು ನೀಡುತ್ತಿದ್ದು, 10 ಸಾವಿರದಿಂದ 50 ಸಾವಿರದವರೆಗೆ ಸಾಲವನ್ನು ಸಣ್ಣ ವ್ಯಾಪಾರಕ್ಕಾಗಿ ನೀಡಲಾಗುತ್ತಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಮರೀಗೌಡ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಎಸ್. ಸಿದ್ಧರಾಜು ಸ್ವಾಗತಿಸಿದರು. ಟಿ. ಪವಿತ್ರಾ ವಂದಿಸಿದರು.

ಈಶಾ ಗ್ರಾಮೋತ್ಸವ- 17 ರಂದು ರೂರಲ್ ಪ್ರೀಮಿಯರ್ ಲೀಗ್

ಕನ್ನಡಪ್ರಭ ವಾರ್ತೆ ಮೈಸೂರು

ಈಶಾ ಫೌಂಡೇಷನ್‌17ನೇ ವರ್ಷದ ಗ್ರಾಮೋತ್ಸವದ ಅಂಗವಾಗಿ ರೂರಲ್ ಪ್ರೀಮಿಯರ್ ಲೀಗ್ ಅನ್ನು ಆ.17 ರಂದು ನಂಜನಗೂಡಿನ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ವಾಲಿಬಾಲ್, ಥ್ರೋಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಫೌಂಡೇಷನ್‌ಸಂಚಾಲಕ ಸ್ವಾಮಿ ಪುಲಕ್ ತಿಳಿಸಿದರು.

ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್‌ ನ ಮೊದಲನೇ ಹಂತದ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಗ್ರಾಮದಲ್ಲಿರುವ ಮಹಿಳೆಯರು ಸ್ವಯಂ ಪ್ರೇರಣೆಯಿಂದ ಥ್ರೋಬಾಲ್ ಪಂದ್ಯದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಎಲ್ಲಾ ಗ್ರಾಮ ಪಂಚಾಯಿತಿಗಳ ಕಚೇರಿಗೆ ತೆರಳಿ ಜಾಗೃತಿ ಮೂಡಿಸಲಾಗಿದೆ. ಉತ್ಸಾಹದಿಂದ 60 ಹೆಚ್ಚು ತಂಡಗಳು ಭಾಗವಹಿಸುತ್ತಿವೆ. ಫೈನಲ್‌ ನಲ್ಲಿ ಬಹುಮಾನವಾಗಿ ವಾಲಿಬಾಲ್ 5 ಲಕ್ಷ ಮತ್ತು ಥ್ರೋಬಾಲ್ 5 ಲಕ್ಷ ನೀಡಲಾಗುತ್ತದೆ. ಫೈನಲ್ ಪಂದ್ಯಗಳು ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ಸೆ.21 ರಂದು ನಡೆಯಲಿದೆ. ನೊಂದಣಿಗಾಗಿ ಮೊ. 83000 30999 ಸಂಪರ್ಕಿಸಬಹುದು ಎಂದರು.

ಭಾರತದಲ್ಲಿ ಕ್ರೀಡಾ ಸ್ಪೂರ್ತಿಯನ್ನು ಹೆಚ್ಚಿಸುವ ಸಲುವಾಗಿ ಈಶಾ ಫೌಂಡೇಷನ್ ವತಿಯಿಂದ 7 ರಾಜ್ಯ ಮತ್ತು 1 ಕೇಂದ್ರಾಡಳಿತ ಪ್ರದೇಶದಲ್ಲಿ ಗ್ರಾಮೋತ್ಸವದ ನಡೆಸಲಾಗುತ್ತಿದ್ದು, ಕರ್ನಾಟಕದಲ್ಲಿ 2024 ರಿಂದ ಕ್ರೀಡಾಕೂಟ ನಡೆಯುತ್ತಿದೆ ಎಂದರು. ಈಶಾ ಫೌಂಡೇಷನ್ ಸ್ವಯಂ ಸೇವಕರಾದ ವಿಜಯಕುಮಾರಿ, ಸುಜಾತ ಆರ್. ಶೆಟ್ಟಿ, ದಿನೇಶ್, ಪೂರ್ಣಿಮಾ ಆನಂದ್ ಇದ್ದರು.