ಮಕ್ಕಳಿಗೆ ಜೀವನ ಶಿಕ್ಷಣ ಅತಿ ಅಗತ್ಯ: ಶ್ರೀಲಕ್ಷ್ಮಿಸೇನ ಸ್ವಾಮೀಜಿ

| Published : Mar 10 2024, 01:35 AM IST

ಸಾರಾಂಶ

ಶಾಲೆಯಲ್ಲಿ ಅಂಕ ಗಳಿಸುವ ಶಿಕ್ಷಣದ ಜೊತೆಗೆ ಜೀವನ ಶಿಕ್ಷಣ ಸಹ ವಿದ್ಯಾರ್ಥಿಗಳಿಗೆ ಅತಿ ಅಗತ್ಯವಾಗಿದೆ ಎಂದು ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷ್ಮಿಸೇನಭಟ್ಟಾರಕ ಸ್ವಾಮೀಜಿ ತಿಳಿಸಿದರು.

- ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆಯಲ್ಲಿ ಶಾರದಾ ಪೂಜೆ । ಎಸ್.ಎಸ್‌.ಎಲ್.ಸಿ ಮಕ್ಕಳ ಬೀಳ್ಕೊಡಿಗೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಶಾಲೆಯಲ್ಲಿ ಅಂಕ ಗಳಿಸುವ ಶಿಕ್ಷಣದ ಜೊತೆಗೆ ಜೀವನ ಶಿಕ್ಷಣ ಸಹ ವಿದ್ಯಾರ್ಥಿಗಳಿಗೆ ಅತಿ ಅಗತ್ಯವಾಗಿದೆ ಎಂದು ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷ್ಮಿಸೇನಭಟ್ಟಾರಕ ಸ್ವಾಮೀಜಿ ತಿಳಿಸಿದರು.

ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆಯಲ್ಲಿ ನಡೆದ ಶಾರದಾ ಪೂಜೆ ಹಾಗೂ ಎಸ್‌.ಎಸ್‌.ಎಲ್‌.ಸಿ. ಮಕ್ಕಳಿಗೆ ಬೀಳ್ಕೊಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೀವನ ಶಿಕ್ಷಣ ಮುಂದೆ ಜೀವನ ಪರ್ಯಂತ ನಿಮ್ಮ ಜೊತೆ ಯಲ್ಲೇ ಇರುತ್ತದೆ. ಬಾಲ್ಯಾವಸ್ಥೆಯಲ್ಲಿ ಮನೆಯಲ್ಲಿ ಹೆತ್ತವರು, ಪೋಷಕರು, ಹಿರಿಯರು ಹಾಗೂ ಗುರು ಕುಲಗಳಲ್ಲಿ ಜೀವನ ಶಿಕ್ಷಣ ಹೇಳಿಕೊಡುತ್ತಾರೆ. ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಹೆಣ್ಣು ಸಂಸಾರದ ಕಣ್ಣು ಇದ್ದಂತೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಗಾದೆ ಮಾತಿದೆ. ಇಂದು ಭಾರತ ದೇಶದ ಪ್ರಥಮ ಪ್ರಜೆ ಮಹಿಳೆಯಾಗಿದ್ದಾರೆ. ಅಷ್ಟೇ ಅಲ್ಲದೆ ಈ ಶಾಲೆಯಲ್ಲಿ ಓದಿದ ಅನೇಕ ಹೆಣ್ಣು ಮಕ್ಕಳು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಇಂದಿನ ಯುವ ಜನರು ಮೊಬೈಲ್ ದಾಸರಾಗಿ ಬಣ್ಣದ ಪ್ರಪಂಚಕ್ಕೆ ಮಾರು ಹೋಗುತ್ತಿರುವುದು ವಿಷಾದಕರ ಎಂದರು.ಸಭೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತಕುಮಾರಿ, ಗೌರವ ಶಿಕ್ಷಕ ಜಿನರಾಜೇಂದ್ರ, ಶಾಲಾ ಸಹ ಶಿಕ್ಷಕರಾದ ಗುಣಪಾಲ್‌ ಜೈನ್‌, ವಿಜಯಕುಮಾರಿ ಇದ್ದರು.