ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಇಲ್ಲಿನ ವೀರಾಪುರ ಓಣಿಯ ಅಂಜಲಿ ಅಂಬಿಗೇರ (20) ಕೊಲೆ ಪ್ರಕರಣದ ಅಪರಾಧಿ ವಿಶ್ವನಾಥ ಅಲಿಯಾಸ್ ಗಿರೀಶ ಸಾವಂತನಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ಹಾಗೂ ₹ 45 ಸಾವಿರ ದಂಡ ವಿಧಿಸಿ ಬುಧವಾರ ಆದೇಶಿಸಿದ್ದಾರೆ.
ಹುಬ್ಬಳ್ಳಿ:
ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಇಲ್ಲಿನ ವೀರಾಪುರ ಓಣಿಯ ಅಂಜಲಿ ಅಂಬಿಗೇರ (20) ಕೊಲೆ ಪ್ರಕರಣದ ಅಪರಾಧಿ ವಿಶ್ವನಾಥ ಅಲಿಯಾಸ್ ಗಿರೀಶ ಸಾವಂತನಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ಹಾಗೂ ₹ 45 ಸಾವಿರ ದಂಡ ವಿಧಿಸಿ ಬುಧವಾರ ಆದೇಶಿಸಿದ್ದಾರೆ.ಪ್ರೀತಿ ನಿರಾಕರಿಸಿದ್ದಕ್ಕೆ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಅಂಜಲಿಯನ್ನು ಹತ್ಯೆಗೈದ ಆರೋಪಿಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 302ರಡಿ ಜೀವಾವಧಿ ಶಿಕ್ಷೆ ಜತೆಗೆ ₹25 ಸಾವಿರ ದಂಡ, ಸಾಕ್ಷ್ಯ ನಾಶಪಡಿಸಿದ್ದಕ್ಕೆ ಕಲಂ 201ರಡಿ 3 ವರ್ಷ ಶಿಕ್ಷೆ ಜತೆಗೆ ₹10 ಸಾವಿರ ದಂಡ ಹಾಗೂ ಮನೆಗೆ ಅಕ್ರಮವಾಗಿ ನುಗ್ಗಿದ್ದಕ್ಕೆ ಕಲಂ 451ರಡಿ 2 ವರ್ಷ ಶಿಕ್ಷೆ ಜತೆಗೆ ₹10 ಸಾವಿರ ದಂಡ ವಿಧಿಸಿದೆ. ಒಟ್ಟು ₹45 ಸಾವಿರ ದಂಡದಲ್ಲಿ ₹43 ಸಾವಿರವನ್ನು ಅಂಜಲಿಯ ಸಹೋದರಿ ಯಶೋಧಾಗೆ ಪರಿಹಾರವಾಗಿ ಹಾಗೂ ₹2 ಸಾವಿರ ಹಣವನ್ನು ಸರ್ಕಾರಕ್ಕೆ ಪಾವತಿಸುವಂತೆ ನ್ಯಾಯಾಧೀಶರಾದ ಪಲ್ಲವಿ ಬಿ.ಆರ್. ಆದೇಶಿಸಿದ್ದಾರೆ.
ನ. 21ರಂದು ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಾಲಯವೂ, ಆರೋಪಿಯನ್ನು ಅಪರಾಧಿ ಎಂದು ಘೋಷಿಸಿತ್ತು. ಆದರೆ, ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿರಲಿಲ್ಲ.435 ಪುಟಗಳ ದೋಷಾರೋಪ ಪಟ್ಟಿ:
ಪ್ರಕರಣದ ಗಂಭೀರತೆ ಪರಿಗಣಿಸಿ ಅಂದಿನ ಡಿಜಿಪಿ ಮತ್ತು ಐಜಿಪಿ ಡಾ. ಎಂ.ಎ. ಸಲೀಂ ಹಾಗೂ ಎಡಿಜಿಪಿ ಬಿ.ಕೆ. ಸಿಂಗ್ ಅವರ ನಿರ್ದೇಶನದಂತೆ, ಎಸ್ಪಿ ಎನ್. ವೆಂಕಟೇಶ ಅವರ ಮೇಲ್ವಿಚಾರಣೆಯಲ್ಲಿ ಡಿವೈಎಸ್ಪಿ ಎಂ.ಎಚ್. ಉಮೇಶ ತನಿಖೆ ನಡೆಸಿದ್ದರು. ತನಿಖೆ ಪೂರ್ಣಗೊಳಿಸಿದ್ದ ಸಿಐಡಿ ಅಧಿಕಾರಿಗಳು 85 ಸಾಕ್ಷಿಗಳ ಹೇಳಿಕೆ ಒಳಗೊಂಡ 435 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.2026ರ ಮಾರ್ಚ್ನಲ್ಲಿ ವಿಚಾರಣೆ ಆರಂಭವಾಗಿದ್ದು, ಒಟ್ಟು 46 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಅಭಿಯೋಜನೆ ಪರವಾಗಿ 179 ದಾಖಲೆ ಹಾಗೂ 18 ಮುದ್ದೆಮಾಲು (ಸಂಗ್ರಹಿಸಿದ ಸಾಕ್ಷ್ಯ)ಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಆರ್.ಕೆ. ಕಾಳೆ ವಾದ ಮಂಡಿಸಿದ್ದರು.
ಏನಿದು ಪ್ರಕರಣ?:ಅಂಜಲಿ ವೀರಾಪುರ ಓಣಿಯ ನಿವಾಸಿಯಾಗಿದ್ದು ಯಲ್ಲಾಪುರ ಓಣಿಯ ಗಿರೀಶ ಪ್ರೀತಿಸುವಂತೆ ನಿತ್ಯ ಪೀಡಿಸುತ್ತಿದೆ. ಇದನ್ನು ಅಂಜಲಿ ನಿರಾಕರಿಸಿದ್ದರಿಂದ ಕುಪಿತಗೊಂಡಿದ್ದ ಆತ, 2024ರ ಮೇ 15ರಂದು ಬೆಳಗಿನ ಜಾವ ಅಂಜಲಿ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಹತ್ಯೆಗೈದು ಪರಾರಿಯಾಗಿದ್ದ. ಬಳಿಕ ಆತನನ್ನು ದಾವಣಗೆರೆ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
ಈ ಸಂಬಂಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಸಿಐಡಿ ಅಧಿಕಾರಿಗಳು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ಬಳಿಕ ನ್ಯಾಯಾಲಯ ಗಿರೀಶನನ್ನು ದೋಷಿ ಎಂದು ಘೋಷಿಸಿ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.